ಕಾಲಮಿತಿಯೊಳಗೆ ಮಾಹಿತಿ ನೀಡಲು ಆದೇಶ
ಹಾಸನ: ಸಕಲೇಶಪುರ ಉಪವಿಭಾಗಾಧಿಕಾರಿಯವರ ಕಚೇರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಬಂದ ಅರ್ಜಿಯನ್ನು ಪರಿಶೀಲಿಸಿ ನಿಯಮಾನುಸಾರ ಅರ್ಜಿದಾರರಿಗೆ ಮಾಹಿತಿ ನೀಡುವ ಹಾಗೂ ಅರ್ಜಿಯನ್ನು ವಿಲೇವಾರಿ ಮಾಡುವ ವಿಚಾರದಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಅನ್ವಯ ಕಾರ್ಯ ನಿರ್ವಹಿಸಬೇಕೆಂದು ಸಕಲೇಶಪುರ ಉಪವಿಭಾಗದ ಸಹಾಯಕ ಆಯುಕ್ತ ಡಾ.ಎಸ್.ಎಸ್. ಮಧುಕೇಶ್ವರ ಆದೇಶಿಸಿದ್ದಾರೆ.
ಕೋರಿರುವ ಮಾಹಿತಿಯು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಯಾವ ನೌಕರರ ಶಾಖೆಯಲ್ಲಿ ಲಭ್ಯವಿರುತ್ತದೆಯೋ ಆ ನೌಕರರು ಮಾಹಿತಿ ಹಕ್ಕು ಕಾಯ್ದೆಯನ್ವಯ ಕಾಲಮಿತಿಯೊಳಗೆ ಅರ್ಜಿದಾರರಿಗೆ ಮಾಹಿತಿ ಒದಗಿಸುವುದು ಹಾಗೂ ಸದರಿ ನೌಕರರು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ರೀತಿಯಲ್ಲೇ ಜವಾಬ್ದಾರರಾಗಿರುತ್ತಾರೆ.
ಈ ಕಚೇರಿಯಲ್ಲಿ ವ್ಯವಸ್ಥಾಪಕರ ಹುದ್ದೆಯನ್ನು ಉನ್ನತೀಕರಿಸಿ ತಹಸೀಲ್ದಾರ್ ಗ್ರೇಡ್-11 ಹುದ್ದೆಯನ್ನು ಸೃಜಿಸಿರುವ ಕಾರಣ ಮಾಹಿತಿ ಹಕ್ಕು ಕಾಯ್ದೆಯನ್ವಯ ಸಕಲೇಶಪುರ ವಿಭಾಗಾಧಿಕಾರಿಯವರ ಕಚೇರಿಯ ಸಹಾಯಕ ಆಯುಕ್ತರನ್ನು ಮೇಲ್ಮನವಿ ಪ್ರಾಧಿಕಾರಿಯಾಗಿ, ತಹಸೀಲ್ದಾರ್ ಗ್ರೇಡ್-11 ಇವರನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಮತ್ತು ಸಂಬಂಧಪಟ್ಟ ವಿಷಯ ನಿರ್ವಾಹಕರನ್ನು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಪುನಾರಚಿಸಲಾಗಿದೆ.
ಕಾಲಮಿತಿಯೊಳಗೆ ಅರ್ಜಿದಾರರಿಗೆ ಮಾಹಿತಿ ನೀಡದೆ ವಿಳಂಬ ಮಾಡಿದರೆ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು., ಇವರು ನೀಡುವ ನಿರ್ದೇಶನ ಮತ್ತು ಆದೇಶವನ್ನು ಪಾಲಿಸಲು ಹಾಗೂ ಆಯೋಗವು ವಿಧಿಸುವ ದಂಡ ಭರಿಸಲು ಜವಾಬ್ದಾರರಾಗತಕ್ಕದ್ದೆಂದು ಆಯುಕ್ತರು ತಿಳಿಸಿದ್ದಾರೆ.
ವಿಶ್ವನಾಥ್ಗೆ ಒಕ್ಕಲಿಗರ ಬೆಂಬಲ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಾಮರಾಜ, ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಒಕ್ಕಲಿಗರ ಸಮಾವೇಶವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕುವೆಂಪುನಗರದ ಚಿಕ್ಕಮಾನಿಕೇತನ ಕಲ್ಯಾಣ ಮಂಟಪದಲ್ಲಿ ನಡೆದ ಸಮಾವೇಶದಲ್ಲಿ ಸಂಸದ ಎಚ್.ವಿಶ್ವನಾಥ್ ಮಾತನಾಡಿ, ನನ್ನ 40 ವರ್ಷಗಳ ಸುಧೀರ್ಘ ರಾಜಕಾರಣದಲ್ಲಿ ನೇರ ನುಡಿಗಳಿಂದ ಮಾತನಾಡುವುದು ಬಿಟ್ಟರೆ, ಕಪಟ ರಾಜಕಾರಣ ಮಾಡುವುದು ನನಗೆ ಗೊತ್ತಿಲ್ಲ. ಕೆ.ಆರ್. ನಗರದಲ್ಲಿ ನಂಜಪ್ಪ ಮತ್ತು ನಾನು ಅನೇಕ ಬಾರಿ ಸ್ಪರ್ಧಿಸಿದ್ದರೂ ವಿರೋಧ ಕಟ್ಟಿಕೊಂಡಿಲ್ಲ. ರಾಜಕೀಯವಾಗಿ ಜೆಡಿಎಸ್ ಮುಖಂಡರನ್ನು ಟೀಕಿಸುವುದನ್ನು ಬಿಟ್ಟರೆ ಒಕ್ಕಲಿಗ ಸಮುದಾಯವನ್ನು ನಾನು ಯಾವತ್ತೂ ನಿಂದಿಸಿಲ್ಲ. ನನ್ನ ವಿರುದ್ಧ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಶಾಸಕ ವಾಸು ಮಾತನಾಡಿ, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಬೇಕು. ನಮ್ಮ ಅಭ್ಯರ್ಥಿ ವಿಶ್ವನಾಥ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಂ. ಸತ್ಯನಾರಾಯಣ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಮುಖಂಡರಾದ ಸಿ.ಎನ್. ಮಂಜೇಗೌಡ, ಸಿ. ಬಸವೇಗೌಡ, ಎಂ. ಲಕ್ಷ್ಮಣ್, ಎಂ.ಬಿ. ಸಿದ್ದೇಗೌಡ, ಪಾಲಿಕೆ ಸದಸ್ಯ ಪಿ. ಪ್ರಶಾಂತ್ಗೌಡ ಮತ್ತಿತರರು ಪಾಲ್ಗೊಂಡಿದ್ದರು.
11ರಂದು ಕ್ಯಾನ್ಸರ್ ತಪಾಸಣೆ ಶಿಬಿರ
ಹಾಸನ: ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್ ವತಿಯಿಂದ ಮಾ. 11ರಂದು ಹಾಸನದ ಬಿ.ಎಂ. ರಸ್ತೆಯ ಕಂದಲಿ ವಿದ್ಯಾಪೀಠ ಬಳಿ ಇರುವ ಹಾಸನ ಕ್ಯಾನ್ಸರ್ ಸೆಂಟರ್ನಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಮೊ. 72040 59259 ಸಂಪರ್ಕಿಸಬಹುದು.
ಆರ್ಟಿಇ: ಇನ್ನೂ 6 ಸೀಟು ಬಾಕಿ
ಅರಕಲಗೂಡು: ತಾಲೂಕಿನ 29 ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಶೇ.25ರ ಮೀಸಲಾತಿಯಂತೆ ಭರ್ತಿ ಮಾಡಿಕೊಳ್ಳಬೇಕಿದ್ದ ಸೀಟುಗಳ ಪೈಕಿ ಇನ್ನೂ ಆರು ಸೀಟುಗಳು ಬಾಕಿಯಾಗಿವೆ.ಮಕ್ಕಳ ಹಕ್ಕು ಶಿಕ್ಷಣ ಕಾಯ್ದೆಯಡಿ ಸೀಟು ಬಯಸಿ 854 ಅರ್ಜಿಗಳು ಬಂದಿದ್ದುವು. ಒಟ್ಟು ಶಾಲೆಗಳಲ್ಲಿ 230 ಸೀಟುಗಳ ಬದಲಿಗೆ 224 ಸೀಟುಗಳನ್ನು ಭರ್ತಿ ಮಾಡಿಕೊಂಡಿದ್ದು, ನಿರ್ದಿಷ್ಟ ಶಾಲೆಗಳಿಗೆ ಅಗತ್ಯ ಅರ್ಜಿಗಳು ಬಾರದ ಕಾರಣ ಸೀಟುಗಳು ಬಾಕಿ ಉಳಿದಿವೆ.
'ವಿದ್ಯಾರ್ಥಿಗಳಿಗೆ ಉದಾಸೀನತೆ ಸಲ್ಲ'
ಹಾಸನ: ವಿದ್ಯಾರ್ಥಿಗಳು ಉದಾಸೀನತೆಯನ್ನು ಬಿಟ್ಟು ಶ್ರಮಪಟ್ಟು ಓದಿದರೆ ವಿದ್ಯೆಗಳಿಕೆಯಲ್ಲಿ ಸಾಧನೆ ಮಾಡಬಹುದು ಎಂದು ದೇವೇಗೌಡ ನಗರದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಎಂ. ಮಲ್ಲೇಶ್ ಹೇಳಿದರು. ಅವರು ನಗರದ ಬಿಈಜಿ ಪ. ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಹಶಿಕ್ಷಕ ರಾಜ ನಾಯ್ಕ್, ಪ್ರಾಧ್ಯಾಪಕ ಹೆಚ್.ಬಿ. ಅಜೀತ್ ಪ್ರಸಾದ್, ಪ್ರಾಂಶುಪಾಲ ಎಚ್.ಕೆ. ರೇಖಾ ಮಾಚನಾಡಿದರು. ಕಾಲೇಜಿನ ಪ್ರಾಂಶುಪಾಲ ಬಿ.ಈ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡಾ ವಿಜೇತರು
ಹಾಸನ: ಜಿಲ್ಲಾ ಅಂಗವಿಕಲರ ಸಂಘದ ಸದಸ್ಯರಾದ ಸಿದ್ದಗಂಗಮ್ಮ ಮತ್ತು ವೆಂಕಟೇಶ್ ಕುಮಾರ್ ಅವರು ಮೈಸೂರಿನ ಪಾರ್ವತನಂ ಟ್ರಸ್ಟ್ನವರು ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಷನ್ ಫಾರ್ ಫಿಸಿಕಲಿ ಹ್ಯಾಂಡಿಕ್ಯಾಪ್ನಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಗಂಡಸಿಯ ಸಿದ್ದಗಂಗಮ್ಮ ಅವರು ಗುಂಡು ಎಸೆತ, ಡಿಸ್ಕಸ್ ಥ್ರೋ, ಜಾವಲಿನ್ ಥ್ರೋನಲ್ಲಿ ಪ್ರಥಮ ಸ್ಥಾನ ಹಾಗೂ 100 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಅರೇಕಲ್ ಹೊಸಳ್ಳಿ ವೆಂಕಟೇಶಕುಮಾರ್ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.