ಕೊಲೆ ಬೆದರಿಕೆ: ಅಪರಾಧಿಗೆ 6 ಸಾವಿರ ದಂಡ
ಹಾಸನ: ಮನೆಯ ಪಿಟ್ ಗುಂಡಿ ಸರಿಪಡಿಸುತ್ತಿರುವಾಗ ಪಿಟ್ ಗುಂಡಿ ಸ್ಥಳ ತನಗೆ ಸೇರಬೇಕೆಂದು ಆರೋಪಿಸಿ, ಜಗಳ ತೆಗೆದು ಕೊಲೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಆಲೂರಿನ ಸಲೀಲ್ ಪಾಷ ಎಂಬಾತನಿಗೆ ರು. 6 ಸಾವಿರ ದಂಡ ವಿಧಿಸಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾ. ಎಂ. ಮಹೇಶ್ ಬಾಬು ತೀರ್ಪು ನೀಡಿದ್ದಾರೆ. 2010ರ ಏ.7ರಂದು ಆಲೂರು ಪಟ್ಟಣದ ಖಾಜಿ ಮೊಹಲ್ಲಾದಲ್ಲಿ ಮಹಮದ್ ಬಾಷಾ ಅವರ ಮನೆ ಹತ್ತಿರದ ಗಲ್ಲಿಯಲ್ಲಿ ಇಮ್ರಾನ್ ಅವರಿಗೆ ಸೇರಿದ ಬಿದ್ದುಹೋಗಿದ್ದ ಶೌಚಾಲಯ ಪಿಟ್ ಗುಂಡಿಯನ್ನು ಸರಿಪಡಿಸುತ್ತಿದ್ದ ಸಂದರ್ಭದಲ್ಲಿ ಆರೋಪಿ ಸಲೀಂ ಎಂಬಾತ ಇಮ್ರಾನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಇಟ್ಟಿಗೆಯಿಂದ ಹೊಡೆದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದ ಎಂದು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಅಕ್ರಮ ಮದ್ಯ: ಆರೋಪಿ ಬಂಧನ
ಸಕಲೇಶಪುರ: ದಿನಸಿ ಅಂಗಡಿ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮದ್ಯ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ ಘಟನೆ ಹೆತ್ತೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಯಸಳೂರು ಪೋಲಿಸ್ ಠಾಣೆ ಪಿ.ಎಸ್.ಐ ಸಿದ್ದೇಶ್ ನೇತೃತ್ವದ ತಂಡ ಗ್ರಾಮದ ಹಿರಣ್ಣಯ್ಯ ಎಂಬುವವರ ದಿನಸಿ ಅಂಗಡಿಯನ್ನು ತಪಾಸಣೆ ನಡೆಸಿದರು. ಈ ವೇಳೆ ವಿವಿಧ ಮಾದರಿಯ ಸುಮಾರು ರು. 1200 ಬೆಲೆಯ ಮದ್ಯ ಪತ್ತೆಯಾಗಿದೆ. ಆರೋಪಿ ಹಿರಣಯ್ಯ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಬಂಧನ
ಹಾಸನ: ನಗರದ ಶ್ರೀನಿವಾಸ ಕಲ್ಯಾಣ ಮಂಟಪದ ಅರಳೀಕಟ್ಟೆ ವೃತ್ತದ ಸಂಸ್ಕತ ಭವನದ ಮುಂಭಾಗ ಅಕ್ರಮವಾಗಿ ಸಿಲಿಂಡರ್ಗಳಿಗೆ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದರು. ನಗರದ ಮಹಾರಾಜ ಪಾರ್ಕ್ ರಸ್ತೆಯ ನಿವಾಸಿ ಬಸವರಾಜು ಬಂಧಿತ. ಖಚಿತ ಮಾಹಿತಿ ಹಿನ್ನಲೆಯಲ್ಲಿ ನಗರ ಠಾಣೆ ಪಿಎಸ್ಐ ಶ್ರೀಧರ್.ಕೆ.ಕೆ. ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಭಾರತ್ ಗ್ಯಾಸ್ ಕಂಪನಿಯ 3 ಗ್ಯಾಸ್ ಸಿಲಿಂಡರ್ಗಳನ್ನು ಅಮಾನತುಪಡಿಸಿಕೊಂಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಂದರ್ ಬಾಹರ್ ಇಸ್ಪೀಟ್: ವ್ಯಕ್ತಿ ಬಂಧನ
ಹಾಸನ: ಹಾಸನ-ಅರಕಲಗೂಡು ರಸ್ತೆ, ಮಟನ್ ಮಾರ್ಕೆಟ್ನ ನಗರಸಭೆಯ 23 ಮಳಿಗೆಯ ಮುಂಭಾಗದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.ಪೆನ್ಷನ್ ಮೊಹಲ್ಲಾದ ಲೋಕೇಶ್ ಬಂಧಿತ ವ್ಯಕ್ತಿಯಾಗಿದ್ದಾನೆ. ಪಣಕ್ಕಿಟ್ಟಿದ್ದ ರು. 3010 ನಗದನ್ನು ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಪಿಎಸ್ಐ ಎಂ.ಎನ್.ಶಶಿಧರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.