ಜಿಲ್ಲಾ ಕಸಾಪದಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ
ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಶನಿವಾರ ಚಿತ್ರಕಲಾ ಪ್ರದರ್ಶನ ನಡೆಯಿತು. ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸಂಯುಕ್ತಾಶ್ರಯದಲ್ಲಿ ನಡೆದ ಚಿತ್ರಕಲಾ ಪ್ರದರ್ಶನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಧಿಕಾರಿ ಡಿ.ಟಿ. ಪುಟ್ಟರಾಜು ಅವರು ಚಿತ್ರ ಬಿಡಿಸುವ ಮೂಲಕ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಿತ್ರಕಲೆ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡುವ ಮೂಲಕ ಕಲಾವಿಧರನ್ನು ಬೆಳೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಸರ್ಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಸೋಮಶೇಖರ್, ಚಿಕ್ಕಮಗಳೂರಿನ ಶಾಂತಿನಿಕೇತನ್ ಕಲಾ ಶಾಲೆಯ ಪ್ರಾಂಶುಪಾಲ ಹಾಗೂ ಕಲಾವಿದ ವಿಶ್ವಕರ್ಮಾಚಾರ್, ಬೆಂಗಳೂರಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಚಿತ್ರಕಲಾ ವಿಭಾಗದ ಮುಖ್ಯಸ್ಥ ಸಿ. ಚಿದಾನಂದ ಮೂರ್ತಿ ಇತರರು ಇದ್ದರು.
ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭ
ಸಕಲೇಶಪುರ: ಸ್ಥಳೀಯ ಜನರ ಹಲವು ವರ್ಷಗಳ ನಿರೀಕ್ಷೆಯಾಗಿದ್ದ ಪಟ್ಟಣದ ದೊಡ್ಡಕೆರೆ ಅಭಿವೃದ್ಧಿಗೆ ಕಾಮಗಾರಿ ಶುಕ್ರವಾರದಿಂದ ಪ್ರಾರಂಗೊಂಡಿದೆ. ಹೊಸಬಸ್ ನಿಲ್ದಾಣ, ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪಟ್ಟಣ ಮದ್ಯಭಾಗದಲ್ಲಿರುವ 9.5 ಎಕರೆ ವಿಸ್ತಿರ್ಣದ ಬೃಹತ್ ಕೆರೆ ಅಭಿವೃದ್ಧಿಪಡಿಲು ಕಳೆದ ಒಂದು ದಶಕದಿಂದ ಪ್ರಯತ್ನ ನಡೆಯುತ್ತಿದ್ದವು. ಯೋಜನೆ ಪ್ರಕಾರ,ಅಯ್ಯಪ್ಪಸ್ವಾಮಿ ದೇವಸ್ಥಾನ ಸಮೀಪ ಮಕ್ಕಳ ಉದ್ಯಾನವನ, ಕೆರೆ ಮದ್ಯಭಾಗದಲ್ಲಿ ಕಾರಂಜಿ, ಕೆರೆಯ ಸುತ್ತ ತಂತಿಬೇಲಿ ನಿರ್ಮಿಸಿ ವಾಯು ಸಂಚಾರಕ್ಕೆ ಅನುಕೂಲವಾಗುವಂತೆ ಪಾದಚಾರಿ ರಸ್ತೆ ನಿರ್ಮಿಸಲಾಗುವುದು. ಮುಂದಿನ 3 ತಿಂಗಳಲ್ಲಿ ಕಾಮಗಾರಿ ಈಡೇರುವ ನಿರೀಕ್ಷೆಯಿದೆ.
ಇಂದು 'ಯೇಗ್ದಾಗೆಲ್ಲಾ ಐತೆ' ನಾಟಕ
ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಾ. 9ರಂದು ಸಂಜೆ 6.30ಕ್ಕೆ ಯೇಗ್ದಾಗೆಲ್ಲಾ ಐತೆ ನಾಟಕ ಪ್ರದರ್ಶನ ನಡೆಯಲಿದೆ. ಗಾಂಧಿ, ವಿನೋಬಾ, ರಮಣ ಮಹರ್ಷಿಗಳಿಂದ ಪ್ರಭಾವಿತರಾಗಿ 97 ವರ್ಷಗಳ ಕಾಲ ಜೀವಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಕೃತಿಯಿದು. ಅವರಿಗೆ ಅಪಾರ ಯಶಸ್ಸು ತಂದುಕೊಟ್ಟ ಯೇಗ್ದಾಗೆಲ್ಲಾ ಐತೆ ಕೃತಿಯನ್ನು ಆಧರಿಸಿದ ರಂಗರೂಪ ನಾಟಕವನ್ನು ಬೆಂಗಳೂರಿನ ಭಾವನಾ ಕಲಾತಂಡದವರು ರಂಗಕರ್ಮಿ ಡಾ. ಬಿ.ವಿ. ರಾಜಾರಾಮ್ ಅವರ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ. ಪ್ರವೇಶ ಉಚಿತ ಪಾಸ್ಗಳ ಮೂಲಕ. ಪಾಸ್ಗಳಿಗಾಗಿ 268012, 94480 04706, 9141755507, 269866 ಸಂಖ್ಯೆಗಳಿಗೆ ಸಂಪರ್ಕಿಸಬಹುದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ಮೌಲ್ಯ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ
ಜಾವಗಲ್: ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ವು ಹಂದ್ರಾಳು ಗ್ರಾಮದಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಕಾಳಚನ್ನೇಗೌಡ ಭೇಟಿ ನೀಡಿದ್ದರು. ನಂತರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಬಿರದಲ್ಲಿ ಕಲಿತ ಶಿಸ್ತು, ಸಮಯ ಪಾಲನೆ, ಪ್ರಾಮಾಣಿಕತೆ, ಸೇವಾ ಮನೋಭಾವನೆ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿರಬೇಕೆಂದು ತಿಳಿದರು. ಉಪನ್ಯಾಸಕಿ ಕಮಲಾಕ್ಷಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ನಂಜುಂಡಯ್ಯ, ಬಸವರಾಜು ಎನ್.ಟಿ. ಪ್ರದೀಪ್, ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ ಮತ್ತಿತರರು ಇದ್ದರು.
ಅಕ್ರಮ ಮದ್ಯ ಸಂಬಂಧಿಸಿದ ದೂರಿಗೆ ಕಂಟ್ರೋಲ್ ರೂಮ್
ಹಾಸನ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ತಯಾರಿಕೆ, ದಾಸ್ತಾನು, ಸಾಗಾಣಿಕೆ ಹಾಗೂ ಸರಬರಾಜುಗಳ ಬಗ್ಗೆ ಕಣ್ಣಿಡಲು ನಿರ್ಧರಿಸಿರುವ ಅಬಕಾರಿ ಇಲಾಖೆ 24 ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆದಿದೆ. ದೂರವಾಣಿ ಸಂಖ್ಯೆ 08172-268706 ಆಗಿದ್ದು, ಸಾರ್ವಜನಿಕರು ದೂರು ಸಲ್ಲಿಸಬಹುದು. ಹಾಸನ ತಾಲೂಕಿನ ಅಬಕಾರಿ ನಿರೀಕ್ಷಕರು (9449630544), ಆಲೂರು ತಾಲೂಕಿನ ಅಬಕಾರಿ ನಿರೀಕ್ಷಕರು (9480304511), ಬೇಲೂರು ತಾಲೂಕಿನ ಅಬಕಾರಿ ನಿರೀಕ್ಷಕರು (9880404148), ಚನ್ನರಾಯಪಟ್ಟಣ ತಾಲೂಕಿನ ಅಬಕಾರಿ ನಿರೀಕ್ಷಕರು (9480304511), ಅರಸೀಕೆರೆ ತಾಲ್ಲೂಕಿನ ಅಬಕಾರಿ ನಿರೀಕ್ಷಕರು (9036600199), ಸಕಲೇಶಪುರ ತಾಲೂಕಿನ ಅಬಕಾರಿ ನಿರೀಕ್ಷಕರು (9663251261), ಅರಕಲಗೂಡು ತಾಲೂಕಿನ ಅಬಕಾರಿ ನಿರೀಕ್ಷಕರು (8105827920), ಹೊಳೆನರಸೀಪುರ ತಾಲೂಕಿನ ಅಬಕಾರಿ ನಿರೀಕ್ಷಕರು (9964395831) ಸಂಖ್ಯೆಗೂ ಸಂಪರ್ಕಿಸಬಹುದು.
22 ರಂದು ತಾಲೂಕು ಸಾಹಿತ್ಯ ಸಮ್ಮೇಳನ
ಸಕಲೇಶಪುರ: ಎರಡನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ. ಮಂಜುನಾಥ್ ಹೇಳಿದ್ದಾರೆ. ಪಟ್ಟಣದ ಪುರಭವನದಲ್ಲಿ ಶುಕ್ರವಾರ ನಡೆದ 2ನೇ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾ. 22ರಂದು ಆಯೋಜನೆಗೊಂಡಿರುವ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ವೈ.ಕೆ. ಮುದ್ದುಕೃಷ್ಣ ಉದ್ಘಾಟಿಸಲಿದ್ದು, ಸಾಹಿತಿ ಸುಶೀಲಾ ಸೋಮಶೇಖರ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷೆ ಚನ್ನವೇಣಿ ಎಂ.ಶೆಟ್ಟಿ, ಕಾರ್ಯದರ್ಶಿ ಸಿ.ಪಿ. ಪ್ರಸನ್ನ ಕುಮಾರ್, ಖಜಾಂಚಿ ಶಿವಪ್ರಸಾದ್ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಇದ್ದರು.
'ಸಿ.ವಿ. ರಾಮನ್ ಕೊಡುಗೆ ಸದುಪಯೋಗಪಡಿಸಿಕೊಳ್ಳಿ'
ಹಾಸನ: ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಚ್ಚೆತ್ತುಕೊಂಡು ಜ್ಞಾನಾರ್ಜನೆಯ ಜೊತೆಗೆ ವಿಜ್ಞಾನದ ಬಗ್ಗೆ ಉನ್ನತ ಚಿಂತನೆಯನ್ನು ಮೈಗೂಡಿಸಿ ಕೊಳ್ಳ ಬೇಕು ಎಂದು ನಗರದ ಶ್ರೀ ವೆಂಕಟೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜೆ.ಪಿ. ಉದಯಕುಮಾರ್ ತಿಳಿಸಿದರು. ಅವರು ನೆಹರು ವಿಜ್ಞಾನ ಸಂಘದ ವತಿಯಿಂದ ಇತ್ತೀಚೆಗೆ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಜೀವ ವಿಮಾ ನಿಗಮದ ರವಿಕುಮಾರ್ ಅವರು, ಏಷ್ಯಾದಲ್ಲಿ ಪ್ರಥಮ ನೋಬೆಲ್ ಪ್ರಶಸ್ತಿ ವಿಜೇತರಾದ ಸಿ.ವಿ. ರಾಮನ್ ಅವರ ಬೆಳಕಿನ ಚದುರುವಿಕೆಯ ಬಗ್ಗೆ ವಿವರಿಸುತ್ತಾ ವಿದ್ಯಾರ್ಥಿಗಳು ಅವರ ಅಮೂಲ್ಯ ಕೊಡುಗೆಯನ್ನು ಸದುಪಯೋಗ ಪಡೆದುಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿರಾಯನಿಗೆ ಸಜೆ
ಚನ್ನರಾಯಪಟ್ಟಣ: ವರದಕ್ಷಿಣೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಪಟ್ಟಣ ತ್ವರಿತ ವಿಲೇವಾರಿ ನ್ಯಾಯಾಲಯ 7 ವರ್ಷಗಳ ಸಾದಾ ಶಿಕ್ಷೆ ಹಾಗೂ ರು. 10 ಸಾವಿರ ದಂಡ ವಿಧಿಸಿದೆ. ತಾಲೂಕಿನ ವೈ ಶಿಂಗೇನಹಳ್ಳಿ ಗ್ರಾಮದ ರವಿ ಎಂಬಾತ ತನ್ನ ಪತ್ನಿ ಲತಾಮಣಿಗೆ ಮದುವೆಯಾಗಿ 4 ವರ್ಷಗಳ ಬಳಿಕ ರು. 20 ಸಾವಿರ ವರದಕ್ಷಿಣೆ ತರುವಂತೆ ಪೀಡಿಸಿದ ಹಿನ್ನಲೆಯಲ್ಲಿ ಆತನ ಕಾಟ ತಾಳಲಾರದೆ ಆಕೆ ನೇಣಿಗೆ ಶರಣಾಗಿದ್ದಳು. ಈ ಹಿನ್ನೆಲೆಯಲ್ಲಿ ಲತಾಮಣಿ ಅವರ ಪೋಷಕರು ನೀಡಿದ ವರದಕ್ಷಿಣೆ ಕಿರುಕುಳದ ದೂರಿನನ್ವಯ ಹೊಳೆನರಸೀಪುರ ಡಿಎಸ್ಪಿ ದೂರು ದಾಖಲಿಸಿದ್ದರು. ಪಟ್ಟಣದ ತ್ವರಿತ ವಿಲೇವಾರಿ ನ್ಯಾಯಾಧೀಶರಾದ ಶ್ಯಾಮ್ಪ್ರಸಾದ್ ಅವರು ಆರೋಪಿಗೆ 7ವರ್ಷಗಳ ಸಾದ ಶಿಕ್ಷೆ ಹಾಗೂ ರು. 10 ಸಾವಿರ ದಂಡ ವಿಧಿಸಿ ದಂಡದಲ್ಲಿ ರು. 5 ಸಾವಿರ ಹಣವನ್ನು ಲತಾಮಣಿ ಪೋಷಕರಿಗೆ ನೀಡುವಂತೆ ಆದೇಶ ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಯೋಜಕ ರಾಜಗೀರ್ ಬೀರಪ್ಪ ವೀದ ಮಂಡಿಸಿದರು.
ಲೋಕಕಲ್ಯಾಣಾರ್ಥ ಮೃತ್ಯುಂಜಯ ಹೋಮ
ಬೇಲೂರು: ಪಟ್ಟಣದ ಶಿವಜ್ಯೋತಿಫಣ ಗಾಣಿಗರ ಸಂಘದಿಂದ ಇತ್ತೀಚೆಗೆ ಲೋಕ ಕಲ್ಯಾಣಾರ್ಥವಾಗಿ ಮೃತ್ಯುಂಜಯ ಹಾಗೂ ಮಹಾಚಂಡಿಕಾ ಹೋಮ ಹಾಗೂ ಗಣಪತಿ ಹೋಮವನ್ನು ನೆರವೇರಿಸಲಾಯಿತು.
ಪಟ್ಟಣದ ಸುತ್ತಲಿನ ಅಂತರಘಟ್ಟಮ್ಮ, ದುರ್ಗಮ್ಮ, ಮಿಡಿಚಲಮ್ಮ, ಕೆಂಚರಾಯಸ್ವಾಮಿ ಗ್ರಾಮ ದೇವತೆಗಳನ್ನು ಗುರುವಾರ ರಾತ್ರಿ ಗಾಣಿಗರ ಬೀದಿಯಲ್ಲಿ ಬಿಜಯ ಮಾಡಿಸಿ, ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಮೃತ್ಯುಂಜಯ ಹೋಮ, ಚಂಡಿಕಾ ಹೋಮ ನೆರವೇರಿಸಿ ಪೂರ್ಣಾಹುತಿ ಅರ್ಪಿಸಲಾಯಿತು. ಪೂಜಾ ಕಾರ್ಯವನ್ನು ಅರ್ಚಕ ಡಿ.ಆರ್. ರಾಮಚಂದ್ರ, ಕೆ.ಆರ್. ಮಂಜುನಾಥ್ ಸಂಗಡಿಗರು ನೆರವೇರಿಸಿದರು. ಹೋಮ-ಹವನಗಳ ವೇಳೆ ಗಾಣಿಗರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜ್ ಹಾಗೂ ಸದಸ್ಯರು ಇದ್ದರು. ಗಾಣಿಗ ಜನಾಂಗದ ನಾನಾ ಪ್ರಮುಖರ ನಿವಾಸಗಳಲ್ಲಿ 8 ದಿನ ಗ್ರಾಮ ದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕೊಲೆ ಪ್ರಕರಣದಿಂದ ರಕ್ಷಿಸುವುದಾಗಿ ನಂಬಿಸಿ ವಂಚನೆ
ಜಾವಗಲ್: ಕೊಲೆ ಪ್ರಕರಣದಿಂದ ಹೆಸರು ಕೈ ಬಿಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ 1.49 ಲಕ್ಷ ರು. ವಂಚಿಸಿದ ಇಬ್ಬರು ಆರೋಪಿಗಳನ್ನು ಜಾವಗಲ್ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.
ಬೋರನಕೊಪ್ಪಲು ಗ್ರಾಮದ ಚಿದಾನಂದ, ಕಾಳನಕೊಪ್ಪಲಿನ ನಾರಾಯಣಮೂರ್ತಿ ಎಂಬುವರು ಬಂಧಿತರು. ಮತ್ತೊಬ್ಬ ಆರೋಪಿ ವೆಂಕಟೇಶ್ ಪರಾರಿಯಾಗಿದ್ದಾನೆ.
ಹಿನ್ನೆಲೆ: ಜಾವಗಲ್ ವ್ಯಾಪ್ತಿಗೆ ಬರುವ ನೀಲಗಿರಿಕಾವಲು ಗ್ರಾಮದಲ್ಲಿ ಈ ಹಿಂದೆ ರವಿ ಎಂಬವರ ಕೊಲೆಯಾಗಿತ್ತು. ಈ ಪ್ರಕರಣದ ಆರೋಪಿಗಳಾದ ಆನಂದ್ ಮತ್ತು ವೆಂಕಟೇಶ, ಅಣ್ಣಪ್ಪ, ಸಿದ್ದೇಶ, ಹಾಲಪ್ಪ ಅವರು ತಲೆಮರೆಸಿಕೊಂಡಿದ್ದರು. ನಂತರ, ಚಿದಾನಂದ, ನಾರಾಯಣ ಮೂರ್ತಿ ಹಾಗೂ ವೆಂಕಟೇಶ ಆರೋಪಿತರನ್ನು ಕೊಲೆ ಪ್ರಕರಣದಿಂದ ಹೆಸರು ಕೈ ಬಿಡಿಸುವುದಾಗಿ ನಂಬಿಸಿ, ಪೊಲೀಸರಿಗೆ ಹಣ ಕೊಡಬೇಕೆಂದು ಹೇಳಿ ರು. 1,49,000 ಹಣ ಪಡೆದು ಮೋಸ ಮಾಡಿದ್ದರು. ದೂರಿನನ್ವಯ ಆರೋಪಿಗಳಿಬ್ಬರನ್ನು ಬಂಧಿಸಿರುವ ಜಾವಗಲ್ ಠಾಣೆಯ ಪೊಲೀಸರು, ಮತ್ತೊಬ್ಬ ಆರೋಪಿ ವೆಂಕಟೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.
'ನಾಯಕನಾದವನು ಉತ್ತಮ ಮನೋಭಾವನೆ ಹೊಂದಿರಬೇಕು'
ಹಾಸನ: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲನೆ ಎಂ.ಕಾಂ. ವಿದ್ಯಾರ್ಥ್ಥಿನಿಯರಿಗೆ ಇತ್ತೀಚೆಗೆ ಮನೋಭಾವನೆ ಮತ್ತು ನಡವಳಿಕೆ ಎಂಬ ವಿಷಯದ ಬಗ್ಗೆ ಅತಿಥಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಜೀವ್ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ಬಿಂದು ಮಾತನಾಡಿ, ನಡವಳಿಕೆ ಮತ್ತು ಸೌಜನ್ಯದಿಂದ ಕೆಲಸಗಾರರ ಸಾಮರ್ಥ್ಯ ಹೆಚ್ಚುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ಎನ್.ರೂಪ್ ರಾಜ್ ಚಂದನ್ ಮಾತನಾಡಿ, ಜೀವನದಲ್ಲಿ ಶ್ರದ್ಧೆ, ನಡವಳಿಕೆ ಮತ್ತು ನೈಪುಣ್ಯತೆಗಳಿಂದ ಮೌಲ್ಯಗಳು ಹೆಚ್ಚುತ್ತವೆ ಎಂದರು. ಎಂ.ಕಾಂ. ವಿಭಾಗದ ಸಂಯೋಜಕ ಡಾ. ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು. ವಿಭಾಗದ ಪ್ರಾಧ್ಯಾಪಕರಾದ ರಾಧಾಕೃಷ್ಣ, ಮೂರ್ತಿ, ಸಾವಿತ್ರಿ ಮತ್ತು ಕಮಲ ಇದ್ದರು. ಪುಷ್ಪ ಪ್ರಾರ್ಥಿಸಿದರು. ಚೈತ್ರ ಸ್ವಾಗತಿಸಿದರು. ಪ್ರಗತಿ ನಿರೂಪಿಸಿದರು.
ವಾಲಿಬಾಲ್ ಪಂದ್ಯಾವಳಿ: ಸಹ್ಯಾದ್ರಿ ಕಾಲೇಜು ಚಾಂಪಿಯನ್
ಚನ್ನರಾಯಪಟ್ಟಣ: ತಾಲೂಕಿನ ಶ್ರವಣ ಬೆಳಗೊಳದ ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ತಾಂತ್ರಿಕ ಕಾಲೇಜುಮಟ್ಟದ ವಿದ್ಯಾರ್ಥಿನಿಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದಿದ್ದಾರೆ. ಶ್ರವಣಬೆಳಗೊಳದಲ್ಲಿ ನಾಲ್ಕು ದಿನಗಳ ಕಾಲ ನಡೆದ ವಾಲಿಬಾಲಲ್ಸ್ಪರ್ಧೆಯಲ್ಲಿ ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ವಿದ್ಯಾಲಯ ಪ್ರಥಮ, ದಕ್ಷಣ ಕನ್ನಡ ಜಿಲ್ಲೆಯ ನಿಟ್ಟೆ ಎನ್.ಎಂ.ಎ ತಾಂತ್ರಿಕ ಕಾಲೇಜು ದ್ವಿತೀಯ, ಬಿ.ಎಚ್.ಎಫ್ ಬೆಂಗಳೂರು ಕಾಲೇಜು ತೃತೀಯ ಹಾಗೂ ಹುಬ್ಬಳಿಯ ಬಿವಿಬಿ ಕಾಲೇಜು ನಾಲ್ಕನೇ ಸ್ಥಾನ ಗಳಿಸಿದೆ. ಶ್ರವಣಬೆಳಗೊಳ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯುವರಾಜು ವಿಜೇತರಿಗೆ ಟ್ರೋಪಿ ಹಾಗೂ ಬಹುಮಾನ ವಿತಿರಿಸಿದರು.
ಲೋಕ ಅದಾಲತ್ ಸದುಪಯೋಗಕ್ಕೆ ಕರೆ
ಅರಕಲಗೂಡು: ರಾಷ್ಟ್ರೀಯ ಲೋಕ ಅದಾಲತ್ ವತಿಯಿಂದ ಇದುವರೆಗೂ 400ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅರಕಲಗೂಡು ಜೆಎಂಎಫ್ಸಿ ನ್ಯಾಯಾಧೀಶ ಬಿ.ಕೆ. ಗಿರೀಶ್ ತಿಳಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಸಹಯೋಗದೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ನ್ಯಾಯಾಧೀಶ ಬಿ.ಕೆ. ಗಿರೀಶ್ ಅವರು ಜ. 6ರಿಂದ ಆರಂಭವಾಗಿರುವ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಈವರೆಗೆ 400ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿವೆ. ಸಿವಿಲ್ ವ್ಯಾಜ್ಯಗಳು- 34, ಕ್ರಿಮಿನಲ್ ಪ್ರಕರಣಗಳು -71, ನೆಗೋಷಿಯಬಲ್ ಪ್ರಕರಣಗಳು (ಎನ್.ಐ.ಎ) 65, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು- 8 ಮತ್ತು ಇತರೆ ಸಣ್ಣ ಪುಟ್ಟ ವ್ಯಾಜ್ಯದ 105 ಮತ್ತು 104 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ಚಂದ್ರಪ್ಪ, ವಕೀಲರ ಸಂಘದ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಮಾತನಾಡಿದರು. ಗೋಷ್ಠಿಯಲ್ಲಿ ಖಜಾಂಚಿ ಮಹೇಶ್ ಕುಮಾರ್ ಉಪಸ್ಥಿತರಿದ್ದರು.
'ಸಮಸ್ಯೆ ಬೇಗ ನಿವಾರಿಸಿದರೆ ಅನಾಹುತದಿಂದ ಪಾರು'
ಚನ್ನರಾಯಪಟ್ಟಣ: ಸಮಸ್ಯೆಗಳನ್ನು ಪ್ರಾರಂಭದ ಹಂತದಲ್ಲಿಯೇ ಬಗೆಹರಿಸಿಕೊಂಡರೆ ಮುಂದೆ ಆಗುವ ಅನಾಹುತಗಳು ತಪ್ಪುತ್ತವೆ ಎಂದು ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮಪ್ರಸಾದ್ ತಿಳಿಸಿದರು. ತಾಲೂಕಿನ ಶ್ರವಣಬೆಳಗೊಳದಲ್ಲಿ ಗ್ರಾಮೀಣ ಕಾನೂನು ಸಲಹಾ ಮತ್ತು ಸಂರಕ್ಷಣಾ ಕೇಂದ್ರ ಉಧ್ಘಾಟಿಸಿ ಮಾತನಾಡಿ ಕೆಲ ವ್ಯಕ್ತಿಗಳು ಸಣ್ಣ ಪುಟ್ಟ ವ್ಯಾಜ್ಯಗಳನ್ನು ಶೀಘ್ರವಾಗಿ ಬಗೆಹರಿಸಿಕೊಳ್ಳದೆ ಜೀವನವಿಡೀ ಎಳೆದುಕೊಂಡು ಹೋಗುತ್ತಿದ್ದು, ಇದರಿಂದ ಅನವಶ್ಯಕ ಕಾಲಹರಣವಾಗುವುದಲ್ಲದೆ ಮಾನಸಿಕವಾಗಿ ವೇತನೆ ಬರುತ್ತದೆ ಎಂದು ತಿಳಿಸಿದರು. ಜನಸಮಾನ್ಯರು ತಾವು ಕಾನೂನಿನ ಅರಿವು ತಿಳಿಯಲು ನ್ಯಾಯಾಲಯದ ವತಿಯಿಂದ ಉಚಿತವಾಗಿ ಕಾನೂನು ಸಲಹಾ ಕೇಂದ್ರಗಳನ್ನು ತೆರೆಯುತ್ತಿದ್ದು, ಇದರ ಪ್ರಯೋಜನವನ್ನು ಜನತೆ ಪಡೆದು ಶ್ರೀಘ್ರದಲ್ಲಿಯೇ ತಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ
ಹಾಸನ: ಲಿಂಗ ಅಲ್ಪಸಂಖ್ಯಾತರಿಗೆ ಪುನರ್ವಸತಿ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಅಭಿವೃದ್ಧಿ ನಿಗಮ ನೋಡಲ್ ಸಂಸ್ಥೆಯಾಗಿದೆ. ಮಹಿಳಾ ಅಭಿವೃದ್ಧಿ ನಿಗಮದಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾದ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ಸ್ ಹಾಗೂ ಪ್ರಕೃತಿ ಪೆಹಚಾನ್ ಸಂಸ್ಥೆಯವರ ಸಹಕಾರದೊಂದಿಗೆ ಪ್ರತಿ ಅಭ್ಯರ್ಥಿಗೆ ರು. 20,000 ಆರ್ಥಿಕ ನೆರವನ್ನು ಸ್ವಯಂ ಉದ್ಯೋಗಕ್ಕಾಗಿ (ಹೈನುಗಾರಿಕೆ, ದಿನಸಿ ಅಂಗಡಿ, ಬ್ಯೂಟಿಪಾರ್ಲರ್, ಇತ್ಯಾದಿ...) 24 ಫಲಾನುಭವಿಗಳಿಗೆ ಒಟ್ಟು ರು. 4,80,000 ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಸೇವಾ ಕಾರ್ಯಕರ್ತರಿಗಾಗಿ ಅರ್ಜಿ ಆಹ್ವಾನ
ಹಾಸನ: ಸಮುದಾಯದ ಸೇವೆ ಗಾಗಿ ಹಾಗೂ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ನೆಹರು ಯುವ ಕೇಂದ್ರ, ಜಿಲ್ಲೆಯ ಆಲೂರು, ಅರಸೀಕೆರೆ ಹಾಗೂ ಹಾಸನ ತಾಲ್ಲೂಕುಗಳಿಂದ ರಾಷ್ಟ್ರೀಯ ಯುವ ದಳ ಸೇವಾ ಕಾರ್ಯಕರ್ತರಾಗಿ ಎರಡು ವರ್ಷದ ಅವಧಿಗೆ ಸೇವೆ ಸಲ್ಲಿಸಲು ಅರ್ಹ ಯುವಜನರಿಂದ ಅರ್ಜಿ ಆಹ್ವಾನಿಸಿದೆ. ಹಾಸನ ತಾಲೂಕಿಗೆ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ಮಾತ್ರ ಪರಿಗಣಿಲಾಗುತ್ತದೆ. 18ರಿಂದ 25 ವರ್ಷ ವಯೋವಾನದೊಳಗಿರುವ ಹತ್ತನೇ ತರಗತಿಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಿರುವ ಯುವಜನರು ಸಂಘ ಮಂಡಳಿಯ ಸದಸ್ಯರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ರು. 2500 ಗೌರವಧನವನ್ನಾಗಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಮಾ. 10 ಕಡೆ ದಿನವಾಗಿದೆ. ಮಾಹಿತಿಗಾಗಿ 08172 -246060 ಸಂಪರ್ಕಿಸಬಹುದು.