ಪರವಾನಗಿ ಹೊಂದಿರುವ ಆಯುಧಗಳ ಠೇವಣಿಗೆ ಆದೇಶ
ಹಾಸನ: ಲೋಕಸಭಾ ಸಾರ್ವತ್ರಿಕ ಚುನಾವಣೆ-2014 ಘೋಷಣೆಯಾಗಿದ್ದು ಚುನಾವಣಾ ಕಾಲದಲ್ಲಿ ಯಾವುದೇ ಅಹಿತಕರ ಘಟನೆಯು ಸಂಭವಿಸದಂತೆ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ಪೂರ್ಣಗೊಳಿಸಬೇಕಿದೆ.
ಡಿಸಿ ಆದೇಶ: ಚುನಾವಣೆ ನಡೆಯುವ ಪ್ರದೇಶಗಳಲ್ಲಿ (ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ) ಯಾವುದೇ ವಿಧವಾದ ಶಸ್ತ್ರ, ಬಂದೂಕುಗಳನ್ನು ಹೊಂದುವುದು ಮತ್ತು ಘೋಷಿತ ಪ್ರದೇಶದಲ್ಲಿ ಶಸ್ತ್ರಗಳನ್ನು ಹೊತ್ತು ತಿರುಗುವುದರಿಂದ ಅಶಾಂತಿಗೆ ಕಾರಣವಾಗಬಹುದಾಗಿ ಭಾವಿಸಲಾಗಿದೆ. ಈ ಕಾರಣದಿಂದ ಜಿಲ್ಲೆಯಲ್ಲಿನ ಆಯುಧ ಪರವಾನಗಿದಾರರು ತಮ್ಮ ಆಯುಧಗಳನ್ನು ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತ ಆಯುಧ ಮತ್ತು ಮದ್ದುಗುಂಡುಗಳ ವಹಿವಾಟುದಾರರಲ್ಲಿ ಚುನಾವಣಾ ಕೆಲಸಗಳು ಮುಗಿಯುವವರೆಗೂ ಠೇವಣೆ ಇಡುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಆದೇಶಿಸಿದ್ದಾರೆ.
ಆಯುಧ ಕಾಯ್ದೆ 1959ಮತ್ತು ನಿಯಮಾವಳಿಗಳು 1962ರ ಅಡಿ ಜಿಲ್ಲೆಯ ಎಲ್ಲಾ ಶಸ್ತ್ರ, ಆಯುಧ ಪರವಾನಗಿದಾರರು ಬಂದೂಕು ಪರವಾನಗಿ ಆಧಾರದಲ್ಲಿ ಹೊಂದಿರುವ ಎಲ್ಲಾ ರೀತಿಯ ಶಸ್ತ್ರ, ಬಂದೂಕುಗಳನ್ನು ಇಂದಿನಿಂದಲೇ ಜಾರಿಗೆ ಬರುವಂತೆ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತ ಆಯುಧ ಮತ್ತು ಮದ್ದುಗುಂಡುಗಳ ವಹಿವಾಟುದಾರರಲ್ಲಿ ಠೇವಣಿ ಇಡಲು ಹಾಗೂ ಹಾಸನ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಹೊರಗಿನ ಅಥವಾ ಯಾವುದೇ ವ್ಯಕ್ತಿಗಳು ಶಸ್ತ್ರ, ಬಂದೂಕುಗಳನ್ನು ಹೊಂದಿ ತರುವುದನ್ನು ನಿಷೇದಿಸಿ ಅವರು ಆದೇಶ ಹೊರಡಿಸಿದ್ದು ಇದು ಚುನಾವಣೆ ಮುಕ್ತಾಯದ ವರೆಗೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.