ಅಂತರ ಬೆಳೆ ಬೆಳೆಯಲು ರೈತರಿಗೆ ಸಲಹೆ
ಹಾಸನ: ರೈತರು ಕೇವಲ ತೆಂಗಿನ ಮೇಲೆ ಅವಲಂಬಿತರಾಗದೇ ಅದರ ಜತೆ ಅಂತರ ಬೆಳೆಗಳನ್ನು ಬೆಳೆದು ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಮುಖ್ಯಸ್ಥ ಡಾ.ಎಸ್. ಚನ್ನಕೇಶವ ತಿಳಿಸಿದರು.
ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಯುವ ರೈತರಿಗೆ ಮತ್ತು ರೈತ ಮಹಿಳೆಯರಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ತೆಂಗಿನ ಮರ ಹತ್ತುವ ಸಾಧನ ಮತ್ತು ಸಸ್ಯ ಸಂರಕ್ಷಣೆಯ ಬಗೆಗಿನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೆಂಗು ಕಲ್ಪವೃಕ್ಷ: ತೆಂಗಿನ ಮರದಿಂದ ಮಾನವರಿಗೆ ಆಗುವ ಉಪಯೋಗಗಳು ಅನೇಕ. ತೆಂಗಿನ ಮರದಿಂದ ಆಹಾರ, ಪಾನೀಯ, ಇಂಧನಕ್ಕೆ ಸೌದೆ, ವಸತಿಗೆ ಮತ್ತು ಅನೇಕ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಒದಗಿಸುತ್ತದೆ. ಇದರ ಈ ಸರ್ವತೋಮುಖ ಗುಣಧರ್ಮಕ್ಕಾಗಿಯೇ ತೆಂಗನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ ಎಂದು ಹೇಳಿದರು.
100 ವರ್ಷದ ಬೆಳೆ: ತೆಂಗು ಬೇಸಾಯ ಮೊದಲು ಒಳ್ಳೆಯ ತಳಿಗಳ ಆಯ್ಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಏಕೆಂದರೆ ತೆಂಗು ನೂರು ವರ್ಷದ ಬೆಳೆ. ಇದಕ್ಕೆ ಪೂರಕವಾಗಿ ತೆಂಗು ಅಭಿವೃದ್ಧಿ ನಿಗಮ ಪ್ರಾಯೋಜಿತವಾದ ಈ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ. ಕೆ.ಜೆ. ಕಾಂತರಾಜು, ತೆಂಗು ಅಭಿವೃದ್ಧಿ ಮಂಡಳಿಯ ಕಾಂತರಾಜು ಹಾಗೂ ನಾನಾ ತಾಲೂಕಿನ ಶಿಬಿರಾರ್ಥಿಗಳು ಇದ್ದರು.