ಇಂದು ಆಲೂರು ಪಪಂ ಅಧ್ಯಕ್ಷರ ಚುನಾವಣೆ
ಆಲೂರು: ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಆಲೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಕಡೆಗೂ ಮುಹೂರ್ತ ಕೂಡಿ ಬಂದಿದ್ದು, ಮಾ. 12ರಂದು ಚುನಾವಣೆ ನಡೆಯಲಿದೆ. ಈ ಹಿಂದೆ ನಿಗದಿಪಡಿಸಲಾಗಿದ್ದ ಮೀಸಲು ಪಟ್ಟಿಯಂತೆ ಚುನಾವಣೆ ನಡೆಸಲು ಉಚ್ಛ ನ್ಯಾಯಾಲಯ ಆದೇಶ ನೀಡಿರುವುದರಿಂದ ಈಗ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯ ಹಾದಿ ಸುಗಮವಾಗಿದೆ.
11 ಸದಸ್ಯರ ಬಲ ಹೊಂದಿರುವ ಪ.ಪಂ.ಗೆ ಕಳೆದ 21013 ಏ. 17ರಂದು ಚುನಾವಣೆ ನಡೆದು ಐವರು ಮಹಿಳೆರು ಸೇರಿದಂತೆ 11 ಜನ ಸದಸ್ಯರು ಆಯ್ಕೆಯಾಗಿದ್ದರು. ಅವರಲ್ಲಿ ಕೆಜೆಪಿಯಿಂದ 6 ಸದಸ್ಯರು ಆಯ್ಕೆಗೊಂಡರೆ, ಜೆಡಿಎಸ್ 4 ಹಾಗೂ ಪಕ್ಷೇತರರಾಗಿ ಒಬ್ಬರು ಆಯ್ಕೆಗೊಂಡಿದ್ದರು.
ಇದರಿಂದಾಗಿ ಪ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನ 6 ಸ್ಥಾನಗಳನ್ನು ಪಡೆದ ಕೆಜೆಪಿ ತೆಕ್ಕೆಗೆ ಬಿದ್ದಂತಾಯಿತ್ತು. ಆದರೆ ಕಳೆದ ವರ್ಷ ಚುನಾವಣೆ ಘೋಷಣೆಗೊಂಡಾಗ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ (ಅ) ಮಹಿಳೆಗೆ (ಬಿ.ಸಿ.ಎಂ-ಎ) ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಠ ಜಾತಿಗೆ ಮೀಸಲಾಯಿತು.
ನೆಮ್ಮದಿಯ ನಿಟ್ಟುಸಿರು: ಆ ಸಂದರ್ಭದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಮೀಸಲಾತಿಯಲ್ಲಿ ಕೆಲವರಿಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಪರಿಣಾಮ ಹಿಂದುಳಿದ ತಾಲ್ಲೂಕುಗಳಾದ ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲ್ಲೂಕುಗಳ ಪ. ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ 1 ವರ್ಷ ನೆನೆಗುದಿಗೆ ಬಿತ್ತು. ಇದರಿಂದಾಗಿ ಚುನಾಯಿತರಾಗಿ ಆಯ್ಕೆಗೊಂಡರೂ ಸಹ 1 ವರ್ಷದಿಂದ ಪ. ಪಂಚಾಯ್ತಿಯನ್ನು ಅಧಿಕೃತವಾಗಿ ಪ್ರವೇಶಿಸಲಾಗದೆ, ಅತಂತ್ರ ಸ್ಥಿತಿಯಲ್ಲಿದ್ದರು. ಇದೀಗ, ನ್ಯಾಯಾಲಯದ ಆದೇಶ ಹೊರಬಂದ ನಂತರ, ಈಗ ಆಲೂರು ಪ.ಪಂ.ನ 11 ಸದಸ್ಯರು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.
ಬಯಸದೇ ಬಂದ ಭಾಗ್ಯ: ನ್ಯಾಯಾಲಯದ ಆದೇಶದನ್ವಯ (ಬಿ.ಸಿ.ಎಂ-ಎ) ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನ ಕೆಜೆಪಿ ಹಾಗೂ ಜೆಡಿಎಸ್ನಲ್ಲಿ ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಲ್ಲದ ಕಾರಣ ಏಕೈಕ ಪಕ್ಷೇತರ ಅಭ್ಯರ್ಥಿ ನೀಲೂಫರ್ ಅವರ ಪಾಲಿಗೆ ಬಯಸದೇ ಬಂದ ಭಾಗ್ಯದಂತೆ ಒಲಿದಿದೆ.
ಉಪಾಧ್ಯಕ್ಷ್ಯ ಸ್ಥಾನ ಪರಿಶಿಷ್ಠ ವರ್ಗಕ್ಕೆ ಮೀಸಲಾಗಿದ್ದು, ಕೆಜೆಪಿಯ ಇಬ್ಬರು ಸದಸ್ಯರಾದ 10 ನೇ ವಾರ್ಡ್ನ ಶಿವಣ್ಣ ಹಾಗೂ 1ನೇ ವಾರ್ಡ್ನ ಗಂಗಾಧರ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಶಿವಣ್ಣರವರು ಈ ಹಿಂದೆಯೂ ಕೂಡ ಉಪಾಧ್ಯಕ್ಷ್ಯರಾಗಿ ಕಾರ್ಯ ನಿರ್ವಹಿಸಿದ್ದು, ಇವರಿಗೆ ಮೊದಲ ಅವಧಿ ದೊರೆಯುವ ಸಾಧ್ಯತೆ ಇದೆ. ಆದರೆ, 11ನೇ ವಾರ್ಡ್ಜೆಡಿಎಸ್ಸ್ದಸ್ಯೆ ಜಯಮ್ಮರವರು ಕೆಜೆಪಿ ಹಾಗೂ ಪಕ್ಷೇತರ ಸದಸ್ಯರುಗಳನ್ನು ತಮ್ಮೆಡೆಗೆ ಸೆಳೆದರೆ ಅವರಿಗೂ ಉಪಾಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆ ಇದೆ.