ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಳ್ಳುಂಡೆ ಸೇವಿಸಿ 40 ಮಂದಿ ಅಸ್ವಸ್ಥ

Vishwanath S
Updated On : 12 Mar 2014, 1:15 am

ಹೊಳೆನರಸೀಪುರ: ಮನೆಯೊಂದರಲ್ಲಿ ನೀಡಿದ ಸಿಹಿ ಎಳ್ಳುಂಡೆಯನ್ನು ಸೇವಿಸಿದ ನಂತರ ಗ್ರಾಮದಲ್ಲಿನ 40ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಪ್ರಕರಣ ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಮಾಳನಾಯಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಎಳ್ಳೆಣ್ಣೆ ತೆಗೆಸಲು ಪಟ್ಟಣದಲ್ಲಿನ ಎಣ್ಣೆಯ ಗಾಣವೊಂದರಲ್ಲಿ ಎಳ್ಳನ್ನು ಬಿಡಿಸಿದ ನಂತರ ಬಂದ ಹಿಂಡಿಯನ್ನು ಕೊಂಡೊಯ್ದ ಮಾಳನಾಯಕನಹಳ್ಳಿಯ ಗ್ರಾಮಸ್ಥರೊಬ್ಬರು, ಎಳ್ಳಿನ ಹಿಂಡಿಗೆ ಬೆಲ್ಲವನ್ನು ಬೆರೆಸಿ ಉಂಡೆ ಮಾಡಿಕೊಂಡು ತಿನ್ನುತ್ತಿದ್ದರು.
ಇದೇ ವೇಳೆ, ಸ್ಥಳದಲ್ಲಿದ್ದ ಕೆಲ ಗ್ರಾಮಸ್ಥರು ಸಿಹಿಯಾಗಿದ್ದ ಎಳ್ಳಿನ ಹಿಂಡಿಯನ್ನು ಎಳ್ಳುಂಡೆಯಂತೆ ಸೇವಿಸಿದ್ದಲ್ಲದೇ, ಇತರರಿಗೂ ಹಂಚಿದ್ದಾರೆ. ಸೋಮವಾರ ರಾತ್ರಿ ಊಟ ಮಾಡಿದ ನಂತರ ಇದ್ದಕ್ಕಿದ್ದಂತೆಯೇ ಎಳ್ಳುಂಡೆಯನ್ನು ಸೇವಿಸಿದ್ದ ಸುಮಾರು 40ಕ್ಕೂ ಹೆಚ್ಚು ಜನರಿಗೆ ಹೊಟ್ಟೆ ನೋವು ವಾಂತಿ, ಬೇದಿ ಕಾಣಿಸಿಕೊಂಡು ಅಸ್ವಸ್ಥರಾಗತೊಡಗಿದ್ದಾರೆ.
ಆಸ್ಪತ್ರೆಗೆ ದಾಖಲು: ಕೂಡಲೇ ಅಸ್ವಸ್ಥಗೊಂಡವರನ್ನು ಮಂಗಳವಾರ ಬೆಳಗಿನ ಜಾವದ ತನಕ ತಾಲೂಕು ಕೇಂದ್ರದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್ ಹಾಗೂ ಗ್ರಾಮದಲ್ಲಿದ್ದ ಖಾಸಗಿ ವಾಹನಗಳಲ್ಲಿ ಸಾಗಿಸಲಾಗಿದೆ. ಕೂಡಲೇ ಆಸ್ಪತ್ರೆಯಲ್ಲಿ ಕಾರ್ಯನಿರತ ವೈದ್ಯರ ತಂಡವು ಅಸ್ವಸ್ಥರಾದ ಸ್ಥಿತಿಯಲ್ಲಿದ್ದವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಲ್ಲದೇ, ಹೆಚ್ಚುವರಿ ಪರೀಕ್ಷೆಯನ್ನೂ ನಡೆಸಿ ಸೂಕ್ತ ವೈದ್ಯಕೀಯ ಸೌಲಭ್ಯ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆ: ಎಳ್ಳುಂಡೆಯನ್ನು ಸೇವಿಸಿ ಅಸ್ವಸ್ಥರಾಗಿದ್ದ 30 ಜನರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ ಕೂಡಲೇ, ಮಂಗಳವಾರ ಬೆಳಗಿನ ಜಾವಕ್ಕೇ, ಹತ್ತಿರದ ಸೋಮನಹಳ್ಳಿಯ ಪ್ರಾಥಮಿಕ ಆರೋಗ್ಯ ಘಟಕದ ವೈದ್ಯರು ಮಾಲನಾಯಕನಹಳ್ಳಿ ಗ್ರಾಮಕ್ಕೆ ತೆರಳಿ ಕ್ರಮೇಣ ಅಸ್ವಸ್ಥರಾದ ಇನ್ನೂ ಹಲವರಿಗೆ ಗ್ರಾಮದಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಅಸ್ವಸ್ಥರಾದವರಲ್ಲಿ 11ಕ್ಕೂ ಹೆಚ್ಚು ಮಕ್ಕಳಿದ್ದು, ಸೂಕ್ತ ಚಿಕಿತ್ಸೆ ನಂತರ ಕ್ರಮೇಣ ಜನರು ಸಹಜ ಸ್ಥಿತಿಗೆ ಮರಳತೊಡಗಿದ್ದರೂ, ಆಸ್ಪತ್ರೆಯ ವೈದ್ಯರು ಮಂಗಳವಾರವೂ ಅಸ್ವಸ್ಥಗೊಂಡವರಿಗೆ ಹೆಚ್ಚಿನ ಚಿಕಿತ್ಸೆಯನ್ನು ನೀಡಿ ನಿಗಾ ವಹಿಸಲಾಗಿದೆ.
ವೈದ್ಯರ ಶಂಕೆ: ಎಣ್ಣೆಯ ಗಾಣದಲ್ಲಿ ಹರಳೆಣ್ಣೆಗಾಗಿ ಹರಳನ್ನು ಬಿಡಿಸಿದ ನಂತರ ಅದೇ ಗಾಣದಲ್ಲಿ ಎಳ್ಳನ್ನು ಬಿಡಿಸಿ ನಂತರ ಬಂದ ಹಿಂಡಿಗೆ ಬೆಲ್ಲವನ್ನು ಬೆರೆಸಿ ತಿನ್ನಲು ರುಚಿಯಾಗಿದ್ದ ಕಾರಣದಿಂದ ಗ್ರಾಮದಲ್ಲಿನ ಕೆಲವರು ಎಳ್ಳುಂಡೆಯೆಂದು ತಿಂದ ಪರಿಣಾಮವಾಗಿ ಆಹಾರವು ವಿಷಪೂರಿತವಾಗಿರಬಹುದೆಂದು ವೈದ್ಯರು ಶಂಕಿಸಿದ್ದು, ಸೂಕ್ತ ಚಿಕಿತ್ಸೆಯನ್ನೂ ನೀಡಲಾಗಿದ್ದು, ಅಸ್ವಸ್ಥರಾದವರೆಲ್ಲರೂ ಅಪಾಯದಿಂದ ಪಾರಾಗಿರುವುದಾಗಿ ಆಸ್ಪತ್ರೆಯಮೂಲಗಳು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement