ಕುಡಿವ ನೀರಿನ ಟ್ಯಾಂಕ್ ಈಗ ಹುಲ್ಲು, ಗಿಡಗಂಟೆಗಳ ನಿವಾಸ!
ಬೇಲೂರು: ತಾಲೂಕಿನ ಬಹುತೇಕ ಗ್ರಾಮೀಣ ಭಾಗದಲ್ಲಿ ಸಿಸ್ಟನ್ ಮುಖಾಂತರ ಕುಡಿಯುವ ನೀರು ಸರಾಬರಾಜಿಗೆ ವ್ಯವಸ್ಥೆ ಕೈಗೊಳ್ಳಲಾಗಿದೆ ಅದರೆ ಬಹುತೇಕ ಗ್ರಾಮಗಳಲ್ಲಿ ಸಿಸ್ಟನ್ಗಳಿಗೆ ನೀರು ತುಂಬದ ಕಾರಣದಿಂದ ಸಿಸ್ಟನ್ ಒಳಗೆ ಹುಲ್ಲು, ಗಿಡಗಂಟೆಗಳು ಬೆಳೆದಿದ್ದು, ಟ್ಯಾಂಕ್ ವ್ಯರ್ಥವಾಗಿದೆ.
ಬೇಸಿಗೆ ಕಾಲ ಈಗಾಗಲೇ ಆರಂಭವಾಗಿದೆ. ಬಿಸಿಲಿನ ತಾಪ ಹೆಚ್ಚುತ್ತಿದ್ದು ಜನ- ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವಲ್ಲಿ ತಾಲೂಕಿನ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರಿನ ಸಣ್ಣ ಪ್ರಮಾಣದ ಸಿಸ್ಟನ್ ಬ್ಯಾಂಕ್ ಅಳವಡಿಕೆ ಮಾಡಿದ್ದು, ಇಲ್ಲಿಯ ತನಕ ಸಿಸ್ಟನ್ಗಳಿಗೆ ನೀರು ನೀಡುವ ಗೋಜಿಗೆ ಹೋಗದೆ ಅಧಿಕಾರಿಗಳು ಮೌನವಹಿಸಿದ್ದಾರೆ. ಅಲ್ಲದೆ ಸಿಸ್ಟನ್ ನಿರ್ಮಾಣ ಮಾಡಿರುವ ಗುತ್ತಿಗೆದಾರನಿಗೆ ಮಾತ್ರ ಬಿಲ್ ಪಾವತಿಸಿದ್ದಾರೆ ಎಂದು ಹಲವು ಗ್ರಾಮಸ್ಥರು ದೂರುತ್ತಿದ್ದಾರೆ.
ಉಡಾಫೆ ಉತ್ತರ: ಜಿಲ್ಲಾ ಪಂಚಾಯ್ತಿ ವತಿಯಿಂದ ನಡೆಯುವ ಈ ಕಾಮಗಾರಿಗಳು ಗ್ರಾಮಗಳ ಜನಸಂಖ್ಯೆ ಅನುಗುಣವಾಗಿ ಸಿಸ್ಟನ್ ನೀಡಲಾಗುತ್ತದೆ. ಅಳವಡಿಸಿದ ಸಿಸ್ಟನ್ಗಳಿಗೆ ಕೊಳವೆ ಬಾವಿಯಿಂದ ಪೈಪ್ಲೈನ್ ಮೂಲಕ ನೀರು ಹರಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು. ಆದರೆ ಗುತ್ತಿಗೆದಾರ ಮಾತ್ರ ಕಳಪೆಯಿಂದ ಕೂಡಿದ ಸಿಸ್ಟನ್ ನಿರ್ಮಿಸಿ, ಕೊಳವೆ ಬಾವಿಯಿಂದ ನೀರನ್ನು ಪೈಪ್ಲೈನ್ ಮೂಲಕ ಸರಬರಾಜು ಮಾಡದೆ ಕೇವಲ ಸಿಸ್ಟನ್ ಅಳವಡಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಗುತ್ತಿಗೆದಾರರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಜಿಲ್ಲಾ ಪಂಚಾಯ್ತಿಯಿಂದ ನಿರ್ಮಾಣಗೊಂಡ ಸಿಸ್ಟನ್ 1 ವರ್ಷ ಕಳೆದರೂ ಇದುವರೆಗೂ ಯಾರು ನೀರು ತುಂಬಿಸುವ ಕಾರ್ಯಕ್ಕೆ ಹೋಗದೆ, ಸಿಸ್ಟನ್ ಸುತ್ತಮುತ್ತಲೂ ಸ್ವಚ್ಛತೆ ಇಲ್ಲದೆ ಜನರು ಕುಡಿಯುವ ನೀರಿಗಾಗಿ ಖಾಸಗಿ ಹೊಲ- ಗದ್ದೆಯಿಂದ ಮೈಲಿಯಿಂದ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ.
ಟ್ಯಾಂಕ್ ಇದ್ರೂ ಪ್ರಯೋಜನವಿಲ್ಲ: ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಹಳ್ಳಿಗಳಲ್ಲಿ ರಾತ್ರಿ ಸಮಯದಲ್ಲಿ ಕುಡಿಯುವ ನೀರಿನ ಬೋರ್ವೆಲ್ ಕೊರೆಯಲು ಮುಂದಾಗುತ್ತಿದ್ದಾರೆ ಇದರಿಂದ ಯಾವ ಪ್ರಮಾಣದಲ್ಲಿ ಹಾಗೂ ಎಷ್ಟು ಆಳದವರೆಗೆ ಕೊರೆದಿದ್ದಾರೆ ಎಂಬುದು ತಿಳಿಯುವುದೆ ಇಲ್ಲ ಎಂಬ ಭಾವನೆಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ತಾಲೂಕು ಆಡಳಿತ ಇಲ್ಲಿಯ ತನಕ ಯಾವ ಕ್ರಮಕ್ಕೂ ಮುಂದಾಗದೆ ಮೌನಕ್ಕೆ ಶರಣಾಗಿದೆ. ಹಲವು ಹಳ್ಳಿಗಳಲ್ಲಿ ನಿರ್ಮಿಸಿರುವ ಸಿಸ್ಟನ್ಗಳಿಗೆ ಪೈಪ್ಲೈನ್ ಮೂಲಕ ನೀರು ಹರಿಸಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸಲು ಮುಂದಾಗಬೇಕು ಎಂಬುದು ಗ್ರಾಮೀಣ ಭಾಗದ ಜನರ ಒತ್ತಾಯವಾಗಿದೆ.