ಚಿತ್ರಕಲೆ ವಿಶ್ವ ಭಾಷೆ: ಲೇಖಕ ಗೊರೂರು ಶಿವೇಶ್
ಹಾಸನ: ಚಿತ್ರಕಲೆಯು ವಿಶ್ವಭಾಷೆಯಾಗಿದ್ದು ಇದರಿಂದಾಗಿಯೇ ಚಿತ್ರಕಲಾವಿದ ವಿಶ್ವಮಾನ್ಯನಾಗಿದ್ದಾನೆ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಇಪ್ಪತ್ತಾರು ಚಿತ್ರಕಲಾ ಶಿಕ್ಷಕರ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೇಖಕನಿಗೆ ಭಾಷೆ ಮತ್ತು ಪ್ರಾಂತ್ಯಗಳ ಮಿತಿಯಿದ್ದರೆ, ಚಿತ್ರಕಲಾವಿದನಿಗೆ ಆ ಮಿತಿಯಿಲ್ಲ ಮತ್ತು ಅನುವಾದದ ಅಗತ್ಯವಿಲ್ಲ. ಆಯಾಕಾಲಘಟ್ಟಗಳು ಶಿಲ್ಪಿ, ಕಲಾವಿದರನ್ನು ರೂಪಿಸುತ್ತವೆ. ರಾಜಾ ರವಿವರ್ಮ, ಲಿಯಾನಾರ್ಡೋ ಡಾವಿಂಚಿ, ಮೈಕಲ್ ಏಂಜೆಲೋ, ಜಕಣಾಚಾರಿಯಂಥವರು ರೂಪುಗೊಳ್ಳಲು ಆ ಕಾಲದಲ್ಲಿ ಕಲಾಕಾರರಿಗೆ ಇದ್ದ ಅಪಾರ ಮಾನ್ಯತೆ, ಬೇಡಿಕೆಯೂ ಕಾರಣ. ಎರಡನೇ ಮಹಾಯುದ್ದ ಮುಗಿದ ಸಂದರ್ಭದಲ್ಲಿ ಪ್ರಖ್ಯಾತ ಚಿತ್ರಕಲೆಗಳನ್ನು ಸಂರಕ್ಷಿಸಲು ತೆಗೆದುಕೊಂಡ ಜಾಗ್ರತೆ, ಎಚ್ಚರಿಕೆಯನ್ನು ಗಮನಿಸಿದರೆ ಚಿತ್ರಕಲೆಗಿದ್ದ ಮಹತ್ವವನ್ನು ತಿಳಯಬಹುದಾಗಿದೆ ಎಂದರು.
ಮೈಸೂರಿನ ಕಲಾವಿದರಾದ ಶಿವಕುಮಾರ್ ಕಸರಮಡು ರಚಿಸಿದ ಅಮೂರ್ತ ಚಿತ್ರ ಕುರಿತ ಸಂವಾದದಲ್ಲಿ ಕಲಾವಿದರಾದ ವಿಶ್ವಕರ್ಮಾಚಾರ್, ಕವಿ ಎನ್.ಎಲ್. ಚೆನ್ನೇಗೌಡ, ನಿರ್ಮಲ ಕಲಾಶಾಲೆಯ ಪ್ರಾಂಶುಪಾಲ ಆರ್.ಸಿ. ಕಾರದಕಟ್ಟಿ ಹಾಗೂ ನಾನಾ ಚಿತ್ರಕಲಾ ಶಾಲೆಯ ಮಕ್ಕಳು ಇದ್ದರು. ಎನ್. ರಾಣಿ ಪ್ರಾರ್ಥಿಸಿದರು. ಎನ್.ಲಕ್ಷ್ಮೀ ಸ್ವಾಗತಿಸಿದರು. ಈರಯ್ಯ ಮಠಪತಿ ವಂದಿಸಿದರು.
ಎಚ್.ಎಸ್.ಮಂಜುನಾಥ ನಿರೂಪಿಸಿದರು. ಇಪ್ಪತ್ತಾರು ಚಿತ್ರಕಲಾ ಶಿಕ್ಷಕರ ಚಿತ್ರಕಲಾ ಪದ್ರರ್ಶನವನ್ನು ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು.