ನೀರು ಪೂರೈಸುವಲ್ಲಿ ವಿಫಲ; ಶಾಲೆಗೆ ಬೀಗ ಜಡಿದು ಪ್ರತಿಭಟನೆ
ಅರಸೀಕೆರೆ: ಶಾಲೆಗೆ ಕುಡಿಯುವ ನೀರು ಪೂರೈಸದ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯವೈಖರಿಯಿಂದ ಬೇಸತ್ತ ಗ್ರಾಮಸ್ಥರು ಶಾಲೆಗೆ ಬೀಗ ಹಾಕುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ತಾಲೂಕಿನ ತಳಲುತೊರೆ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಾಸವಿರುವ ವಸತಿ ನಿಲಯಕ್ಕೆ ಕಳೆದ ಕೆಲ ದಿನಗಳಿಂದಲೂ ನೀರು ಪೂರೈಸುವಲ್ಲಿ ಸಂಬಂಧಿಸಿದವರು ಸಂಪೂರ್ಣ ವಿಫಲರಾಗಿದ್ದು ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜಶೇಖರ್, ಗ್ರಾಮಸ್ಥರಾದ ವಿಜಯ್ ಕುಮಾರ್ ಹಾಗೂ ಇತರರು ಶಾಲಾ ಆವರಣಕ್ಕೆ ಆಗಮಿಸಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಶಾಲಾ ವಿದ್ಯಾರ್ಥಿಗಳು ಕಳೆದ ಕೆಲ ದಿನಗಳಿಂದ ಶಾಲೆಗಳಲ್ಲಿ ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಕೆಲ ಮಕ್ಕಳು, ಪೋಷಕರು ಶಾಲೆಗೆ ನೀರು ತಂದು ಬಿಸಿಯೂಟ ಕಾರ್ಯಕ್ಕೆ ನೆರವು ನೀಡಿದ್ದಾರೆ. ಇಂತಹ ಎಲ್ಲ ಬೆಳವಣಿಗೆಗಳು ಸಂಭವಿಸಿದರೂ ತಳಲೂರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲವೆಂದು ಕಿಡಿಕಾರಿದರು.
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕಾಗಮಿಸುವವರೆಗೆ ಪಟ್ಟು ಸಡಿಲಿಸುವುದಿಲ್ಲವೆಂದು ಧರಣಿ ನಡೆಸಿದರು. ಕೆಲ ಹಿರಿಯ ಗ್ರಾಮಸ್ಥರ ಮನವಿಯ ಮೇರೆಗೆ ಶಾಲೆ ನಡೆಸಲು ಅನುಮತಿ ನೀಡಿದ ಪ್ರಸಂಗ ಜರುಗಿತು.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಬಸವರಾಜ್ ಮಾತನಾಡಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.