ಮಂಜು ಪರವಾಗಿ ಪ್ರಚಾರ
ಹಾಸನ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲಿರುವ ಅರಕಲಗೂಡು ಶಾಸಕ ಕೆ. ಮಂಜು ಪರವಾಗಿ ಚುನಾವಣೆ ವೇಳೆ ಪ್ರಚಾರಕ್ಕಿಳಿಯುವುದಾಗಿ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಎಂ.ಕೆ. ಶೇಷೇಗೌಡ ಘೋಷಿಸಿದ್ದಾರೆ.
ಮಂಗಳವಾರ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದ ಈ ಇಬ್ಬರೂ ಮುಖಂಡರು, ಈ ವಿಚಾರ ಸ್ಪಷ್ಟಪಡಿಸಿದರು.
ಆನಂದ್ ಉವಾಚ: ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂಬ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೀಡಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಯ ಪರ ಪ್ರಚಾರವನ್ನು ಕೈಗೊಳ್ಳಲಾಗುವುದು ಎಂದು ಆನಂದ್ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ರಾಜಕೀಯ ಗುರುವಾಗಿದ್ದ ದಿವಂಗತ ಶ್ರೀಕಂಠಯ್ಯನವರ ನಿಧನದ ನಂತರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಘಟಕದ ಅಧ್ಯಕ್ಷರು ಎಲ್ಲಾ ಸಮಾಜದ ಮುಖಂಡರು ನನಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಎಚ್.ಸಿ. ಮಹದೇವಪ್ಪ ಮತ್ತು ಎಲ್ಲಾ ಕಾಂಗ್ರೆಸ್ ವೀಕ್ಷಕರ ಮೇಲೆ ಒತ್ತಡ ತಂದ ಪರಿಣಾಮ ನನ್ನ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಯಲ್ಲಿ ಅಂಗೀಕರಿಸಲಾಗಿತ್ತು.
ಜೊತೆಗೆ ನನ್ನನ್ನು ಸ್ಪರ್ಧಿಸುವಂತೆ ಪ್ರೋತ್ಸಾಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಅವರಿಗೂ ಅಭಿನಂದಿಸುತ್ತೇನೆ. ಆದರೆ, ಟಿಕೆಟ್ ಎ.ಮಂಜು ಅವರಿಗೆ ಘೋಷಣೆ ಆಗಿರುವುದರಿಂದ ನನ್ನ ಮೇಲೆ ಪಕ್ಷ ಹೆಚ್ಚಿನ ಜವಾಬ್ದಾರಿ ವಹಿಸಿದಂತಾಗಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಸಂದರ್ಭದಲ್ಲಿ ಪರಮೇಶ್ವರ ಮತ್ತು ಸಿದ್ದರಾಮಯ್ಯನವರು ನಮ್ಮ ಮುಂದಿನ ಗುರಿ ಹಾಸನ ಕ್ಷೇತ್ರವನ್ನು ಗೆಲ್ಲುವುದು ಎಂದು ಹೇಳಿದ್ದಾರೆ ಎಂದರು ಆನಂದ್.
ಮಂಜು ಜೊತೆ ಸಂಪರ್ಕದಲ್ಲಿ: ಎ. ಮಂಜು ಅವರು ಸಹ ನನ್ನೊಂದಿಗೆ ಸಂಪರ್ಕದಲ್ಲಿ ಇದ್ದು, ಚುನಾವಣೆಯ ಪ್ರಚಾರದ ಬಗ್ಗೆ ಪ್ರಸ್ತಾಪದ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ಬುಧವಾರ ಜಿಲ್ಲಾಧ್ಯಕ್ಷ ಬಿ. ಶಿವರಾಂ ಅವರು ಸಭೆ ಕರೆದಿದ್ದು, ಚುನಾವಣಾ ಪ್ರಚಾರ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಸಿ ಘಟಕದ ರಾಜ್ಯ ಉಪಾಧ್ಯಕ್ಷ ಅನಂತಮೂರ್ತಿ ನಾಯಕ್, ಮುಖಂಡರಾದ ದೇವರಾಜು, ಸುರೇಂದ್ರ ನಾಥ್, ಜಾರ್ಜ್ ವಿಲ್ಸನ್ ಹಾಗೂ ಇತರರು ಇದ್ದರು.
ಶೇಷೇಗೌಡರು ಹೇಳಿದ್ದು: ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಿದ್ದು, ಪಕ್ಷದ ಅಭ್ಯರ್ಥಿ ಎ.ಮಂಜು ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಅವರನ್ನು ಗೆಲ್ಲಿಸಲು ಅಖಾಡ ಸಿದ್ಧವಾಗಿದೆ ಎಂದು ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಕೆ. ಶೇಷೇಗೌಡ ಹೇಳಿದರು. ಜೊತೆಗೆ, ಕಳೆದ 20 ವರ್ಷಗಳಿಂದ ಲೋಕಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಲಾಗುತ್ತದೆ ಎಂದರು.
ಎ. ಮಂಜು ಲೋಕಸಭೆ ಆಯ್ಕೆಯಾದರೆ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಕಾಮಗಾರಿಗಳು ಆಗಲಿವೆ ಎಂದ ಅವರು, ಪಕ್ಷದ ಅಭ್ಯರ್ಥಿ ಎ. ಮಂಜು ಅವರು ರು. 2 ಲಕ್ಷ ಮತಗಳ ಅಂತರದಿಂದ ಜಯವನ್ನು ಗಳಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಣ್ಣ, ನಾಗೇಶ್ ಹಾಗೂ ಇತರರು ಇದ್ದರು.