ವೈಭವದ ಕೇರಳಾಪುರ ರಥೋತ್ಸವ
ರಾಮನಾಥಪುರ: ಐತಿಹಾಸಿಕ ಪ್ರಸಿದ್ಧ ಕೇರಳಾಪುರ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಮಹಾ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ, ವಿಧಾನಗಳನ್ವಯ ವೈಭವಯುತವಾಗಿ ಮಂಗಳವಾರ ನೆರವೇರಿತು. ದೇವಸ್ಥಾನದ ಅವರಣದಿಂದ ಚಿನ್ನಭರಣ ಅಲಂಕೃತ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿಯ ಮೂರ್ತಿಯನ್ನು ರುದ್ರಾಕ್ಷಿ ಸರ, ಬೆಳ್ಳಿ ಕತ್ತಿ ಸಮೇತವಾಗಿ ಅರ್ಚಕರು ತಲೆ ಮೇಲೆ ಹೊತ್ತು ಪುಷ್ಪಗಳಿಂದ ಅಲಂಕರಿಸಿದ 35 ಅಡಿ ಎತ್ತರದ ದೊಡ್ಡರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಸಂಪ್ರದಾಯದಂತೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಸಾವಿರಾರು ಭಕ್ತರು ಬೆಳಿಗ್ಗೆ 10.30ಕ್ಕೆ ತೇರು ಎಳೆಯಲು ಅರಂಭಿಸಿದರು.
ಹೂವಿನ ಅಲಂಕಾರ: ಇದಕ್ಕೂ ಮೊದಲು ವೀರಭದ್ರಸ್ವಾಮಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಸ್ಥಾನದ ಗರ್ಭ ಗುಡಿಯಲ್ಲಿರುವ ಭದ್ರಕಾಳಿಯಮ್ಮ ಮತ್ತು ಸೋಮಶೇಖರಸ್ವಾಮಿಯನ್ನು ಹೂವಿನಿಂದ ಅಲಂಕರಿಸಲಾಗಿತ್ತು.
ಹರಕೆ ಮುಡಿ: ರಾಜ್ಯದ ನಾನಾ ಕಡೆಯಿಂದ ಅಗಮಿಸಿದ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿಯ ಭಕ್ತರು ಕೇಶಮುಂಡನ ಮಾಡಿಸಿಕೊಂಡು ಹರಕೆ ಮುಡಿಯನ್ನು ಸಲ್ಲಿಸಿದರು. ಇಂತರ ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೂಜೆ: ಗಣಪತಿ ಪೂಜೆ, ಅಂಕುರಾರ್ಪಣ, ಧ್ವಜಾರೋಹಣ, ವೀರಭದ್ರೇಶ್ವರಸ್ವಾಮಿಯವರಿಗೆ ರುದ್ರಾಭಿಷೇಕ, ವೀರಭದ್ರ ವೀರಗಾಸೆ, ಮಂಗಳವಾದ್ಯ, ಉತ್ಸವ ನಡೆಯಿತು. ಮೈಸೂರು ಈಶ್ವರಿ ರಿಯಲ್ ಎಸ್ಟೇಟ್ನ ವಿಶ್ವಾರಾಧ್ಯ ಅವರು ದೇವಸ್ಥಾನದ ಸಮುದಾಯ ಭವನದಲ್ಲಿ ದಾಸೋಹದ ವ್ಯವಸ್ಥೆ ಮಾಡಿದ್ದರು.
ತಾಲೂಕು ಮುಜರಾಯಿ ಇಲಾಖೆ ಅಧಿಕಾರಿ ಬಸವರಾಜ್ ಪೂಜಾ ಕೈಂಕರ್ಯ ನೆರವೇರಿಸಿದರು. ಗವಡಗೆರೆ ಮಠದ ನಟರಾಜ ಸ್ವಾಮೀಜಿ, ಬೆಂಗಳೂರು ಅಪರ ಅಬಕಾರಿ ನಿವೃತ್ತ ಅಯುಕ್ತರು ಹೆಚ್.ಸಿ. ವೀರಪ್ಪ, ಹಾಸನ ಜಿಲ್ಲಾ ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಮಂತರ್ ಗೌಡ, ಗ್ರಾಪಂ ಅಧ್ಯಕ್ಷ ಕೆ.ಎಸ್. ಕರೀಗೌಡ, ಮಾಜಿ ಸದಸ್ಯ ಕೆ.ಎಸ್.ಪರಮೇಶ್ವರಯ್ಯ, ವಿ. ಬಸವರಾಜ್, ತಾಪಂ ಮಾಜಿ ಅಧ್ಯಕ್ಷ ರಮೇಶ್, ಮುಖಂಡರಾದ ಬಿ.ಬಿ. ಶಾಂತರಾಜ್, ನಾಡ ಕಚೇರಿ ಉಪ ತಹಸೀಲ್ದಾರ್ ಆಂಜನಪ್ಪ ಉಪಸ್ಥಿತರಿದ್ದರು. ಪುರೋಹಿತರು ವೀರಣ್ಣ ಮುಂತಾದವರು ಪೂಜಾ ಕೈಂಕರ್ಯ ನಡೆಸಿಕೊಟ್ಟರು.