ಸರಗಳ್ಳಿ ಬಳಿ ಮತ್ತೊಂದು ಕಾಡಾನೆ ಸೆರೆ
ಸಕಲೇಶಪುರ: ತಾಲೂಕಿನ ಸರಗಳ್ಳಿ ಗ್ರಾಮದಲ್ಲಿ ಮಂಗಳವಾರ ಮತ್ತೊಂದು ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಒಟ್ಟಾರೆ 8 ಕಾನಾಡೆಗಳನ್ನು ಸೆರೆ ಹಿಡಿದಂತಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಸುಮಾರು 30 ವಯೋವಾನದ ಕಾಡಾನೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಗ್ರಾಮ ಬಿಟ್ಟು ಕದಲದಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಮುಂಜಾನೆಯಿಂದ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ 11 ಗಂಟೆಗೆ ಸರಿಯಾಗಿ ಗುಂಪಿನಿಂದ ಬೇರ್ಪಡಿಸಿದ ಸುಮಾರು 16 ವರ್ಷದ ಗಂಡಾನೆಗೆ ಅರವಳಿಕೆ ಮದ್ದುಹಾರಿಸಲು ಯಶಸ್ವಿಯಾದರು. ಈ ವೇಳೆ ಸುಮಾರು ಒಂದು ಕಿ.ಮೀ. ದೂರ ಓಡಿದ ಕಾಡಾನೆ ಸಮೀಪದ ಕಾಫಿ ತೋಟದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿತ್ತು.
ಈ ಸಂದರ್ಭದಲ್ಲಿ ಸ್ಥಳಕ್ಕಾಮಿಸಿದ ಸಿಬ್ಬಂದಿ ಹಗ್ಗ ಹಾಗೂ ಕಬ್ಬಿಣದ ಸರಪಳಿಯಿಂದ ಬಂಧಿಸಿ, ನೀರು ಹಾಕಿ ಎಚ್ಚರಿಸಿದ ನಂತರ, ಸಾಕಾನೆಗಳ ಸಹಾಯದಿಂದ ಲಾರಿಗೆ ಹತ್ತಿಸಲು ಪ್ರಯತ್ನ ನಡೆಸಿದರು. ಆದರೆ ಲಾರಿಗೆ ಹತ್ತಿಸುವ ಸಂದರ್ಭದಲ್ಲಿ ತೀವ್ರ ಪ್ರತಿರೋಧ ತೋರಿದ ಮಂಗಳವಾರ ಸೆರೆಹಿಡಿದ ಗಂಡಾನೆ ಮತ್ತೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ನಂತರ ಅರಣ್ಯ ಇಲಾಖೆಯ ವೈದ್ಯರು ಚುಚ್ಚುಮದ್ದು ನೀಡಿ ನೀರು ಹಾಕಿ ಎಚ್ಚರಿಸಿದ ನಂತರ, ಭಾರಿ ಪ್ರಯಾಸದಿಂದ ಲಾರಿಗೆ ಹತ್ತಿಸಲಾಯಿತು.
ಸೋಮವಾರ ಸೆರೆ ಹಿಡಿದ ಆನೆ ಹಾಗೂ ಇಂದು ಹಿಡಿದ ಆನೆಯನ್ನು ಕೊಡಗಿನ ದುಬಾರೆ ಅರಣ್ಯ ಶಿಬಿರಕ್ಕೆ ಸಾಗಿಸಲಾಯಿತು. ಇಂದಿಗೆ ಒಟ್ಟು 8 ಕಾಡಾನೆಗಳನ್ನು ಹಿಡಿಯಲಾಗಿದೆ.
ಈ ಸಂದರ್ಭದಲ್ಲಿ ಯಸಳೂರು, ಆಲೂರು ಹಾಗೂ ಸಕಲೇಶಪುರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.