ಆಲೂರು ಪಟ್ಟಣ ಪಂಚಾಯ್ತಿ ಜೆಡಿಎಸ್ ಪಾಲು
ಆಲೂರು: ಇಲ್ಲಿನ ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳು ಜೆಡಿಎಸ್ ಪಾಲಾಗಿದೆ. ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನೀಲೂಫರ್, ಉಪಾಧ್ಯಕ್ಷರಾಗಿ ಜಯಮ್ಮ ಆಯ್ಕೆಯಾಗಿದ್ದಾರೆ. ಇಬ್ಬರೂ ಜೆಡಿಎಸ್ ಬೆಂಬಲಿತ ಸದಸ್ಯರು.
ಕಳೆದ 1 ವರ್ಷದಿಂದ ನೆನಗುದಿಗೆ ಬಿದ್ದಿದ್ದ ಆಲೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಗೆದ್ದ 11 ಸದಸ್ಯರಲ್ಲಿ ನೀಲೂಫರ್ ಹೊರತುಪಡಿಸಿದರೆ, ಯಾರೂ ಬಿಸಿಎಮ್ (ಎ) ಮಹಿಳೆ ಇರಲಿಲ್ಲ. ಹಾಗಾಗಿ ನೀಲೂಫರ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ 11ನೇ ವಾರ್ಡ್ನ ಜಯಮ್ಮ ಹಾಗೂ 1ನೇ ವಾರ್ಡ್ನ ಗಂಗಾಧರ್ (ಪರಿಶಿಷ್ಟ) ನಡುವೆ ಪೈಪೋಟಿಯಿತ್ತು. ಶಾಸಕ ಸೇರಿದಂತೆ 12 ಸಂಖ್ಯಾ ಬಲದಲ್ಲಿ ಜಯಮ್ಮ 8 ಮತಗಳನ್ನು ಪಡೆದು ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾದರು.
ಕೆಜೆಪಿಯ ಇಬ್ಬರ ಬೆಂಬಲ: ಕಳೆದ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 6 ಸ್ಥಾನ ಗಳಿಸಿದ್ದ ಕೆಜೆಪಿ ಇತ್ತೀಚೆಗಷ್ಟೇ ಬಿಜೆಪಿಯೊಂದಿಗೆ ವಿಲೀನಗೊಂಡ ಕಾರಣ ಬಿಜೆಪಿ ಸೇರಬಯಸದ ಇಬ್ಬರು ಕೆಜೆಪಿ ಸದಸ್ಯರು ಜೆಡಿಎಸ್ ಬೆಂಬಲಿಸಿದ್ದಾರೆ ಹಾಗೂ ಪಕ್ಷೇತರರಾಗಿ ಆಯ್ಕೆಯಾಗಿದ್ದ ನೀಲೂಫರ್ ಸಹ ಜೆಡಿಎಸ್ ಬೆಂಬಲಿಸಿ ಉಪಾಧ್ಯಕ್ಷ ಸ್ಥಾನದ ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದು ಎರಡೂ ಸ್ಥಾನಗಳು ಜೆಡಿಎಸ್ ಪಾಲಾಗಿವೆ.
ಇತ್ತ, ಕೆಜೆಪಿಯಿಂದ ಆಯ್ಕೆಯಾಗಿದ್ದ 6 ಮಂದಿಯ ಪೈಕಿ ನಾಲ್ವರು, ತಮ್ಮ ಪಕ್ಷ ಬಿಜೆಪಿಯೊಂದಿಗೆ ವಿಲೀನವಾದ ಕಾರಣ ಯಾವುದೇ ಅಧಿಕಾರವಿಲ್ಲದೆ ಪ್ರತಿಪಕ್ಷದಲ್ಲಿ ಕೂರಬೇಕಾಗಿದೆ.
ಪುರಸಭೆಯಾಗಿಸಲು ಕ್ರಮ: ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕುಮಾರಸ್ವಾಮಿ, ಎರಡೂ ಸ್ಥಾನಗಳಿಗೆ ಮಹಿಳೆಯರು ಆಯ್ಕೆಯಾಗಿರುವುದು ಸಂತಸ ತಂದಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪರ- ವಿರೋಧ ಸಹಜ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರು ಒಗ್ಗೂಡಿ ಪಟ್ಟಣದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು. ಪಟ್ಟಣದ ರಸ್ತೆ, ಯು.ಜಿ.ಡಿ. ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಪಟ್ಟಣ ಪಂಚಾಯ್ತಿಯನ್ನು ಪುರಸಭೆಯಾಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.
ನೂತನ ಅಧ್ಯಕ್ಷೆ ನೀಲೂಫರ್ ಮಾತನಾಡಿ, ಪಟ್ಟಣ ಪಂಚಾಯ್ತಿಯನ್ನು ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ನಂ. 1 ಸ್ಥಾನಕ್ಕೇರಿಸಲು ಶ್ರಮಿಸುವುದಾಗಿ ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಮಾತನಾಡಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಜೆಡಿಎಸ್ ತೆಕ್ಕೆಗೆ ದೊರೆತಿದ್ದು ಸಂತಸ ತಂದಿದೆ. ಈ ಗೆಲುವಿಗೆ ಸಹಕರಿಸಿದ ಶಾಸಕರು ಹಾಗೂ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದ ತಿಳಿಸಿದರು.
ಬಾಹ್ಯ ಬೆಂಬಲ: ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ , ಕೆ.ಜೆ.ಪಿ. ಪಕ್ಷ ಬಿ.ಜೆ.ಪಿಯಂತಹ ಕೋಮುವಾದಿ ಪಕ್ಷದೊಂದಿಗೆ ವಿಲೀನವಾದ ಕಾರಣ ಕೋಮುವಾದಿ ಪಕ್ಷ ಸೇರಬಯಸದ ಇಬ್ಬರು ಸದಸ್ಯರು ಕಾಂಗ್ರೆಸ್ಗೆ ಸೇರಿದ್ದು ಜೆ.ಡಿ.ಎಸ್ಗೆ ಬಾಹ್ಯ ಬೆಂಬಲ ನೀಡಿರುವುದಾಗಿ ತಿಳಿಸಿದರು.
ಚುನಾವಣಾಧಿಕಾರಿ ತಹಸೀಲ್ದಾರ್ ಶಾರದಾಂಬ, ಪ.ಪಂ. ಮುಖ್ಯಾಧಿಕಾರಿ ವಾಸುದೇವ್ ಮುಂತಾದವರಿದ್ದರು.