ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಗೌರವ ಸಮರ್ಪಣೆ ದಿನವಾಗಿ ಮಹಿಳಾ ದಿನಾಚರಣೆ'

Vishwanath S
Updated On : 13 Mar 2014, 1:34 am

ಹಾಸನ: ತಾಲೂಕು ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳೆಯರಿಗೆ ಗೌರವ ಸಮರ್ಪಣಾ ದಿನವನ್ನಾಗಿ ವಿಶಿಷ್ಟವಾಗಿ ಆಚರಿಸಲಾಯಿತು.
ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಉಪನ್ಯಾಸಕಿಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಪುರುಷರೇ ಆಯೋಜಿಸಿದ್ದು ವಿಶೇಷವಾಗಿತ್ತು.
ಅಪೂರ್ವ ಅವಕಾಶದ ದಿನ: ವೇದಿಕೆಯ ಮಹಿಳೆಯರ ಮೂಲಕ ವಿಶ್ವದ ಎಲ್ಲ ಮಹಿಳೆಯರಿಗೆ ಗೌರವ ಸಲ್ಲಿಸಿ ಡಾ.ಡಿ.ಶ್ರೀನಿವಾಸ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಭಾಷಣಗಳ, ಘೋಷಣೆಗಳ ದಿನವಲ್ಲ. ಮಹಿಳೆಯರಂತೆಯೇ ಪುರುಷರ ಪಾಲಿಗೂ ಇದು ಸಂಭ್ರಮದ ದಿನ.
 ನಮ್ಮ ಜೀವನದ ಪ್ರತಿ ಹಂತದಲ್ಲಿ ಚೈತನ್ಯ ಶಕ್ತಿಯಾಗಿ, ಕೌಟುಂಬಿಕ ವ್ಯವಸ್ಥೆಯ ಅಡಿಗಲ್ಲಾಗಿ, ಪರಂಪರೆಯ ಪ್ರತಿನಿಧಿಯಾಗಿ, ನಮ್ಮ ಸಂಸ್ಕೃತಿಯನ್ನು ಬೆಳಗಿದ ಹೆಣ್ಣೆಂಬ ಶಕ್ತಿಗೆ ಕೃತಜ್ಞತೆಗಳನ್ನು, ಗೌರವ ಅರ್ಪಿಸುವ ಅಪೂರ್ವ ಅವಕಾಶದ ದಿನ ಎಂದು ಹೇಳಿದರು.
ಸಂಸ್ಕಾರ ನೀಡುವಂತಾಗಲಿ: ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮಾತನಾಡಿ, ಹೆಣ್ಣು ಪ್ರಕೃತಿ. ಪ್ರಕೃತಿ ಇಲ್ಲದೆ ಪುರುಷನಿಗೆ ಪೂರ್ಣತ್ವವಿಲ್ಲ. ಸೃಷ್ಟಿಯ ಮೂಲಶಕ್ತಿಯೇ ಹೆಣ್ಣು. ಇಂತಹ ಹೆಣ್ಣನ್ನು ಗೌರವಿಸುವುದೆಂದರೆ ನಮ್ಮನ್ನು ನಾವು ಗೌರವಿಸಿಕೊಂಡಂತೆ. ಇಂತಹ ಕಾರ್ಯಕ್ರಮಗಳು ಕೇವಲ ಆಚರಣೆಯಾಗದೆ, ಮಹಿಳೆಯನ್ನು ಗೌರವಿಸುವ ಸಂಸ್ಕಾರವನ್ನು ಎಲ್ಲರಿಗೂ ನೀಡುವಂತಾಗಲಿ ಎಂದು ಆಶಿಸಿದರು.
ಉಪನ್ಯಾಸಕರಾದ ಶಿವಕುಮಾರ್, ಕರೀಗೌಡ, ಮಾದೇಗೌಡ, ಹರಿಪ್ರಸಾದ್, ಗ್ರಂಥಪಾಲಕ ಮಂಜುನಾಥ್, ವಿದ್ಯಾರ್ಥಿ ಶಶಿ ಮಾತನಾಡಿ ಗೌರವ ಸಮರ್ಪಣೆ ಮಾಡಿದರು.
ಗೌರವ ಸ್ವೀಕರಿಸಿದ ಜೀವಶಾಸ್ತ್ರದ ಉಪನ್ಯಾಸಕಿ ಸುಧಾ ಮಾತನಾಡಿ, ಆಧುನಿಕತೆಯ ಹೆಸರಿನಲ್ಲಿ ಬೆರಳೆಣಿಕೆಯ ಮಹಿಳೆಯರು ನಕಾರಾತ್ಮಕವಾಗಿ ಬೆಳೆಯುತ್ತಿರುವ ಕಾರಣ ಸಮಾಜದಲ್ಲಿ ಹೆಣ್ಣಿನ ಬಗೆಗೆ ವಿಕೃತ ದೃಷ್ಟಿ ಹೆಚ್ಚಾಗುತ್ತಿದೆ ಎಂದರು.
ವಾಣಿಜ್ಯ ವಿಭಾಗದ ರಾಮಪ್ರಿಯ ಪ್ರಾರ್ಥಿಸಿದರು. ಅರ್ಥಶಾಸ್ತ್ರ ವಿಭಾಗದ ಎಂ.ಮಾದೇಗೌಡ ಸ್ವಾಗತಿಸಿದರು, ಕನ್ನಡ ವಿಭಾಗದ ಕಾಂತರಾಜ್ ವಂದಿಸಿದರು, ಇತಿಹಾಸ ವಿಭಾಗದ ಎಂ.ಪಿ.ಗೋಪಾಲಲ್ಕಾರ್ಯಕ್ರಮ ನಿರೂಪಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಥಮದರ್ಜೆ ಕಾಲೇಜಿನ ಅಧ್ಯಾಪಕ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement