ದೇವೇಗೌಡರಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸಿ: ರೇವಣ್ಣ
ಆಲೂರು: ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಅತ್ಯಧಿಕ ಮತಗಳಿಂದ ಜಯಶೀಲರನ್ನಾಗಿಸಬೇಕೆಂದು ಶಾಸಕ ಎಚ್.ಡಿ. ರೇವಣ್ಣ ಮನವಿ ಮಾಡಿದರು.
ಅವರು ಪಟ್ಟಣದ ಗಣಪತಿ ಸಮುದಾಯ ಭವನದಲ್ಲಿ ಅಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇವೇಗೌಡರು ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿಗೊಳ್ಳಲೆಂದು ಮಂಗಳೂರು ಬಂದರು ಹಾಗು ಚೆನ್ನೈ ಬಂದರನ್ನು ಸಂಪರ್ಕಿಸಲು ಬೆಂಗಳೂರು-ಮಂಗಳೂರು ರೇಲ್ವೆ ಕಾರ್ಯ ಪ್ರಾರಂಭಿಸಲಾಯಿತು. ಜಿಲ್ಲೆಯ ರೈತರು ಬೆಳೆದ ಬೆಳೆ ತ್ವರಿತವಾಗಿ ಬೇರೆಡೆಗೆ ಸಾಗಿಸಲು ವಿಮಾನ ನಿಲ್ದಾಣ ಕಾರ್ಯ ಪ್ರಾರಂಭಿಸಲಾಯಿತು. ಅದು ನೆನೆಗುದಿಗೆ ಬಿದ್ದಿದೆ.
ನಿರಂತರ ನಿರ್ಲಕ್ಷ್ಯ: ಹಾಸನ-ಬೇಲೂರು- ಶೃಂಗೇರಿ ಮೂಲಕ ಶಿವಮೊಗ್ಗ ಹರಿಹರವನ್ನು ಸಂಪರ್ಕಿಸುವ ರೈಲು ಮಾರ್ಗ ಕನಸಾಗಿಯೇ ಉಳಿಯಿತು. ಈ ರೀತಿ ದೇವೇಗೌಡರ ಆಡಳಿತ ಕಾಲದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೆ ಆಡಳಿತ ನಡೆಸಿದ್ದಾರೆ. ಎನ್ಡಿಎ ಹಾಗೂ ಯುಪಿಎ ಸರ್ಕಾರಗಳು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದು ಇದರಿಂದ ಬೇಸತ್ತಿರುವ ಜನ ಈ ಬಾರಿ ತೃತೀಯ ರಂಗದ ಬಗ್ಗೆ ಒಲವು ತೋರಿದ್ದು, ಇದನ್ನು ಪತ್ರಿಕಾ ಸಮೀಕ್ಷೆಗಳೇ ತಿಳಿಸಿವೆ ದೇವೇಗೌಡರ ಕಾಲದಲ್ಲಿ ಪ್ರಾರಂಭವಾದ ಹಲವಾರು ಜನಪರ ಯೋಜನೆಗಳು ಅಪೂರ್ಣಗೊಂಡು ನೆನೆಗುದಿಗೆ ಬಿದ್ದಿವೆ. ಇದು ಕೇಂದ್ರ ಸರ್ಕಾರ ನಿರಂತರವಾಗಿ ರಾಜ್ಯವನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದರು.
ದೇವೇಗೌಡರನ್ನು ಬೆಂಬಲಿಸಿ: ಕೆಲವರು ದೇವೇಗೌಡರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಅವರ ವಿರುದ್ದ ಸ್ಪರ್ದಿಸಲು ಸೂಕ್ತ ಅಭ್ಯರ್ಥಿಗಳು ಇಲ್ಲದೇ ಹಾಲಿ ಶಾಸಕರನ್ನು ಕಣಕ್ಕಿಳಿಸಿದ್ದಾರೆ ಆದರೆ ಮತದಾರರು ಜಾಗೃತರಾಗಿದ್ದು ಈ ಬಾರಿ ಜೆಡಿಎಸ್ ಬೆಂಬಲಿಸಬೇಕೆಂದರು.
ಮೋದಿ, ರಾಹುಲ್ ಅನುಭವಿಗಳು: ಶಾಸಕ ಕುಮಾರ ಸ್ವಾಮಿ ಮಾತನಾಡಿ ಮಾತನಾಡಿ, ಅಭಿವೃದ್ಧಿಯ ಹರಿಕಾರ ದೇವೇಗೌಡರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೇರಿಸಲು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಶ್ರಮಿಸಬೇಕು ಮೋದಿ ಹಾಗೂ ರಾಹುಲ್ ಗಾಂಧಿ ಅನನುಭವಿಗಳು. ಅವರಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ. ಆದ್ದರಿಂದ ದೇಶದಲ್ಲಿ ತೃತೀಯ ರಂಗಕ್ಕೆ ಬೆಂಬಲ ದೊರೆಯಲಿದ್ದು, ರಾಜ್ಯ ಸರ್ಕಾರ ಇನ್ನೂ ನಿದ್ರೆಯಿಂದೆದ್ದಿಲ್ಲ. ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇವವರಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್ ಬೆಂಬಲಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದರು.
ಪಟೇಲ್ ಶಿವರಾಮ್,ರಾಜಶೇಖರ್, ತಾ. ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಕರೀಗೌಡ, ರಾಜೇಗೌಡ, ನಂಜುಂಡಪ್ಪ, ಜಿಪಂ ಸದಸ್ಯ ಪುರುಶೋತ್ತಮ್, ತಾಪಂ ಅಧ್ಯಕ್ಷೆ ಯಶೋಧ ಹರೀಶ್, ಕೊಟ್ಟೂರಪ್ಪ, ತಾಪಂ ಸದಸ್ಯರು ಪಪಂ ಸದಸ್ಯರು, ಗ್ರಾಪಂಅಧ್ಯಕ್ಷರು ಸದಸ್ಯರುಗಳು ಮತ್ತಿತರರು ಹಾಜರಿದ್ದರು.