ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭದ್ರಕಾಳಮ್ಮ, ವೀರಭದ್ರೇಶ್ವರ ಸ್ವಾಮಿ ರಥೋತ್ಸವ

Vishwanath S
Updated On : 13 Mar 2014, 1:35 am

ಅರಸೀಕೆರೆ: ಪಟ್ಟಣದ ವೃಷಭೇಂದ್ರ ನಗರದಲ್ಲಿರುವ ನೆಲೆಸಿರುವ ಶ್ರೀ ಭದ್ರಕಾಳಮ್ಮ ಹಾಗೂ ಶ್ರೀ ವೀರಭದ್ರೇಶ್ವರಸ್ವಾಮಿಯ ಕೆಂಡಾರ್ಚನೆ ಮತ್ತು ಮಹಾರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಮಹಾರಥೋತ್ಸವ ಪ್ರಯುಕ್ತ ದೇವಾಲಯದ ಆವರಣದಲ್ಲಿ ಮುಂಜಾನೆ ಭದ್ರಕಾಳಮ್ಮ ದೇವಿ ಸಮೇತ ಶ್ರೀವೀರಭದ್ರಸ್ವಾಮಿಯ ಕೆಂಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಹರಕೆ ಹೊತ್ತಿದ್ದ ನೂರಾರು ಭಕ್ತರು ದುಗ್ಗಲ ಸೇವೆ ಸಲ್ಲಿಸುವ ಮೂಲಕ ತಮ್ಮ ಹರಕೆ ಕಾಣಿಕೆಗಳನ್ನು ದೇವರಿಗೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ವೀರಶೈವ ವಟುಗಳಿಗೆ ಶಿವ ದೀಕ್ಷೆ ನೀಡಲಾಯಿತು.
ರಥಾರೋಹಣ: ನೊಣವಿನಕೆರೆ ಶ್ರೀಕಾಡು ಸಿದ್ದೇಶ್ವರ ಮಠದ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಮಧ್ಯಾಹ್ನ ನಾನಾ ಬಣ್ಣಗಳ ಹೂವುಗಳಿಂದ ಶೃಂಗರಿಸಿದ ಮಹಾರಥದಲ್ಲಿ ಶ್ರೀ ಭದ್ರಕಾಳಮ್ಮ ಹಾಗೂ ಶ್ರೀವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ಬೆಳಗುತ್ತಿದ್ದಂತೆ, ಭಕ್ತರು ದೇವರ ನಾಮಸ್ಮರಣೆ ಮಾಡುತ್ತಾ ರಥ ಎಳೆದರು.
ಅನ್ನದಾಸೋಹ: ರಥೋತ್ಸವ ಕಾರ್ಯಕ್ರಮಕ್ಕೂ ಮುಂಚೆ ದೇವಾಲಯ, ಹೊಯ್ಸಳರ ಕಾಲದ ಶಿವಾಲಯದ ಶ್ರೀಚಂದ್ರಮೌಳೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಮತ್ತು ನೂರೆಂದೆಡೆ ಸೇವೆ ನಡೆಯಿತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಭಕ್ತರಿಗೂ ಪಾನಕ ಹಾಗೂ ಫಲಾಹಾರ ವಿತರಿಸಿದರೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ಪುರಸಭೆ ಮಾಜಿ ಅಧ್ಯಕ್ಷ ಎನ್.ಎಸ್. ಸಿದ್ದರಾಮಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ದೇವಾಲಯದ ಆಡಳಿತ ಮಂಡಳಿ ಸದಸ್ಯರಾದ ಲೇಪಾಕ್ಷೀ, ಈರಣ್ಣ, ರಾಷ್ಟ್ರೀಯ ಕ್ರೀಡಾಪಟು ಎಚ್.ಟಿ. ಮಹದೇವ್, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಬಿ.ಕೆ. ಯೋಗೀಶಾಚಾರ್, ಶೈಲೇಂದ್ರ,  ಕೋಡಿಹಳ್ಳಿ ರಘು, ಸಂತೋಷ್ ಹಾಗೂ ಮತ್ತಿತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement