'ಸಂಘವೆಂದರೆ ಸಮಸ್ಯೆಗಳನಿವಾರಣೆಗೆ ಒಗ್ಗೂಡುವುದು'
ಬೇಲೂರು: ಸಂಘ ಎಂದರೆ ಇನ್ನೊಬ್ಬರಿಗೆ ತೊಂದರೆ ಕೊಡುವುದು ಎಂಬ ಭಾವನೆ ಬಹುತೇಕರಲ್ಲಿದೆ. ಆದರೆ ಸಂಘ ಎಂದರೆ ನಮ್ಮ ಸಮಸ್ಯೆ ಪರಿಪಾರಕ್ಕಾಗಿ ಒಗ್ಗಟ್ಟಾಗುವುದು ಎಂದರ್ಥ ಎಂದು ರಾಜ್ಯ ಕೆ.ಪಿ ಎಚ್ ಆರ್ ಅಧ್ಯಕ್ಷ ಬಾ. ರಾಮಚಂದ್ರ ಉಪಾಧ್ಯ ಅಭಿಪ್ರಾಯ ಪಟ್ಟರು.
ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ವೈಷ್ಣವ ಘೋಷ್ಠಿ ಭವನದಲ್ಲಿ ತಾಲೂಕು ಹೋಟೆಲ್, ಬೇಕರಿ ಮತ್ತು ಲಾಡ್ಜ್ ಮಾಲೀಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶುಚಿ ರುಚಿ ಮತ್ತು ಆರೋಗ್ಯಕರ ವಾತಾವರಣದಲ್ಲಿ ಗುಣಮಟ್ಟದ ಆಹಾರವನ್ನು ಹೋಟೆಲ್ ಉದ್ಯಮ ಬೆಳೆಯಲು ಸಾಧ್ಯವಾಗುತ್ತದೆ. ಸಂಘ ಶಕ್ತಿಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಸಮಸ್ಯೆ ಬಂದಾಗ ಸ್ಪಂದನೆ: ಹೋಟೆಲ್ ಉದ್ಯಮಕ್ಕೆ ಮಾರಕವಾದ ಆಹಾರ ಹಿತ ರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಲು ಮುಂದಾದಾಗ ರಾಜ್ಯ ಹೋಟೆಲ್ ಮಾಲೀಕರ ಸಂಘ ವ್ಯಾಪಕ ಪ್ರತಿರೋಧ ಒಡ್ಡಿ ಹೈ ಕೋರ್ಟ್ ಮೊರೆಹೋಗಿ ಈಗ ಅದಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಸಂಘ ಸರ್ಕಾರ ಸಮೀಪವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದು ಹೋಟೆಲ್ ಉದ್ಯಮಕ್ಕೆ ತೊಡಕಾಗುವ ಸನ್ನಿವೇಶ ನಿರ್ಮಾಣವಾದಗಲೆಲ್ಲಾ ಮುಂದೆನುಗ್ಗಿ ಆದಷ್ಟು ಸಮಸ್ಯೆಗಳನ್ನು ಪರಿಹರಿಸಿದೆ ಎಂದರು.
ಸನ್ಮಾನಿಸುವ ಕೆಲಸ ಮಾಡಬೇಕು: ರಾಜ್ಯ ಕೆಪಿಎಚ್‌ಆರ್ ಕಾರ್ಯದರ್ಶಿ ನಾಗರಾಜ ಧನ್ಯ ಮಾತನಾಡಿ, ಕೌಟುಂಬಿಕ ಉದ್ಯಮ ಎಂದೇ ಬಿಂಬಿತವಾಗಿದ್ದ ಹೋಟೆಲ್ ಉದ್ಯಮ ಈಗ ಜಾಗತಿಕ ಪೈಪೋಟಿ ಎದುರಿಸುತ್ತಾ ತನ್ನ ವ್ಯಾಪ್ತಿ ವಿಸ್ತಾರ ಮಾಡಿಕೊಂಡಿದೆ. ಸಮಾಜ ಸೇವೆ ಮಾಡುತ್ತಿರುವ ಗ್ರಾಹಕರನ್ನು, ಕ್ರೀಡಾಪಟುಗಳನ್ನು, ಜನಪ್ರತಿನಿಧಿಗಳನ್ನು, ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರನ್ನು ಗುರುತಿಸಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರನ್ನು ಅಭಿನಂದಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ತಾಲೂಕು ಹೋಟೆಲ್, ಬೇಕರಿ ಮತ್ತು ಲಾಡ್ಜ್ ಮಾಲೀಕರ ಸಂಘದ ಅಧ್ಯಕ್ಷ ರಘುಪತಿ ಹತ್ವಾರ್, ಉಪಾಧ್ಯಕ್ಷ ಬಾಸ್ಕರ್, ಕಾರ್ಯದರ್ಶಿ ಮಂಜುನಾಥ್, ಇಡ್ಲಿ ಕೇಶವ, ಖಂಜಾಂಚಿ ವಾಸುದೇವಧನ್ಯ, ಸಾಹಿತಿ ಶ್ರೀವತ್ಸ ಎಸ್‌ವಿಟಿ ಇತರರು ಇದ್ದರು.