ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೆಜ್ಜೇನು ದಾಳಿ: ಶಾಲಾ ಮಕ್ಕಳು ಆಸ್ಪತ್ರೆಗೆ ದಾಖಲು

Vishwanath S
Updated On : 13 Mar 2014, 1:36 am

ಬೇಲೂರು: ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿ ಕಚ್ಚಿರುವ ಘಟನೆ ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ತಾಲೂಕಿನ ಬಿಕ್ಕೋಡು ಕುಮಾರ್ ಕಾನ್ವೆಂಟಿನ ಪ್ರೈಮರಿ ಶಾಲಾ ಮಕ್ಕಳು ಸಂಜೆ ಶಾಲೆ ಬಿಟ್ಟ ನಂತರ ಮನೆಗೆ ತೆರಳುವ ಸಂದರ್ಭದಲ್ಲಿ ರಸ್ತೆ ಬದಿ ಮರದಲ್ಲಿ ಹೆಜ್ಜೇನು ಕಟ್ಟಿದ್ದು, ಏಕಾಏಕಿ ಶಾಲಾ ಮಕ್ಕಳ ಮೆಲೆ ದಾಳಿ ನಡೆಸಿದೆ.
ಹೆಜ್ಜೇನು ಮನೋಜ್, ಪವಿತ್ರ, ಪ್ರಶಾಂತ, ಕವನ, ಪೃಥ್ವಿ ಎಂಬ ಶಾಲಾ ಮಕ್ಕಳಿಗೆ ಕಚ್ಚಿದ್ದು, ಅವರನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಡಿಬಾರ್ ಆಗದೇ ನಡೆದ ಪಿಯು ಪರೀಕ್ಷೆಗಳು!
ಹಾಸನ: ದ್ವಿತೀಯ ಪಿಯುಸಿ ಪರೀಕ್ಷೆ ಬುಧವಾರ ಆರಂಭವಾಗಿದ್ದು, ಮೊದಲ ದಿನ ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದ ಪರೀಕ್ಷೆಗಳು ನಡೆದವು.
ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ಬೆಳಗ್ಗೆ ತೆರಳಿ ಪರೀಕ್ಷೆಗಳನ್ನು ಬರೆದರು. ಕಲಾ ಮತ್ತು ವಾಣಿಜ್ಯ ಪರೀಕ್ಷೆಗಳು ಸಹ ನಡೆದವು. ವಿಜ್ಞಾನ ವಿಷಯದ ಪರೀಕ್ಷೆಗಳು ಗುರುವಾರದಿಂದ ಪ್ರಾರಂಭವಾಗಲಿದ್ದು, ಮೊದಲ ದಿನದ ಪರೀಕ್ಷೆಯು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಹಾಗೂ ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗದೆ ನಡೆಯಿತು.
ಸ್ಥಾನಿಕ ಜಾಗೃತ ದಳಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಪರೀಕ್ಷೆಯು ಸುಗಮವಾಗಿ ನಡೆಯಲು ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶವನ್ನು ಸೆಕ್ಷನ್ 144ರನ್ವಯ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಯಾ ಉಪ ವಿಭಾಗಾಧಿಕಾರಿಗಳು ಜಾರಿಗೊಳಿಸಿದ್ದರು.
ರೇಲ್ವೆ ಲೆವೆಲ್ ಕ್ರಾಸಿಂಗ್ ದುರಸ್ತಿ: ಸಂಚಾರ ಅಸ್ತವ್ಯಸ್ತ
ಹೊಳೆನರಸೀಪುರ: ಪಟ್ಟಣದಲ್ಲಿನ ಹಾಸನ-ಮೈಸೂರು ರಸ್ತೆಯಲ್ಲಿನ ರೇಲ್ವೆ   ಲೆವೆಲ್ ಕ್ರಾಸಿಂಗ್ ಬಳಿಯಲ್ಲಿನ ಹಳಿ ದುರಸ್ತಿ ಕಾರ್ಯವನ್ನು ರೇಲ್ವೆ ಇಲಾಖೆಯು ಮಂಗಳವಾರ ಕೈಗೊಂಡಿದ್ದ ಪರಿಣಾಮವಾಗಿ ರಾಜ್ಯ ಹೆದ್ದಾರಿಯಲ್ಲಿನ ವಾಹನ ಸಂಚಾರವನ್ನು ಸ್ಥಳಾಂತರಗೊಳಿಸಲಾಗಿತ್ತು.
ಚೆನ್ನಾಂಬಿಕ ಚಿತ್ರಮಂದಿರದ ಬಳಿಯಲ್ಲಿದ್ದ ರೇಲ್ವೆ ಲೆವೆಲ್ ಕ್ರಾಸಿಂಗ್ ಬಳಿಯಲ್ಲಿನ ಕಿ.ಮೀ ದೂರದ ಹಳಿಗಳನ್ನು ದುರಸ್ತಿಗೊಳಿಸಲು ರೇಲ್ವೆ ಇಲಾಖೆ ಮುಂದಾದ ಪರಿಣಾಮವಾಗಿ ಹಾಸನ- ಮೈಸೂರು ರಾಜ್ಯ ಹೆದ್ದಾರಿಯಲ್ಲಿನ ವಾಹನ ಸಂಚಾರವನ್ನು ಮಂಗಳವಾರ ಬೆಳಗಿನಿಂದ ಸಂಜೆಯವರೆಗೆ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ನೂರಾರು ವಾಹನಗಳಿಗೆ ಸಂಚಾರಕ್ಕೆ ಅಡಚಣೆಯಾಯಿತು.
ನೈರುತ್ಯ ರೇಲ್ವೆಯ ಸೀನಿಯರ್ ಎಂಜಿನಿಯರ್ ದಯಾನಂದ್ ಅವರ ನೇತೃತ್ವದಲ್ಲಿ ನಡೆದ ಕಾಮಗಾರಿ ಸಂಜೆ ವೇಳೆಗೆ ಮುಗಿಯಿತು.
ಕಾನ್ಸಟೇಬಲ್ ಹುದ್ದೆಗೆ ತರಬೇತಿ
ಹಾಸನ: ನಗರದ ಶ್ರೀಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ವತಿಯಿಂದ ನಡೆಯುತ್ತಿರುವ ಬಿ.ಜಿ.ಎಸ್. ಸ್ಟಡಿ ಸೆಂಟರ್‌ನಲ್ಲಿ ನಡೆಸುವ ದ್ವಿತೀಯ ಪಿಯುಸಿ, ಸಿಇಟಿ ತರಬೇತಿಯನ್ನು ಮಾ. 28ರಿಂದ ರಾಜ್ಯದ ನಾನಾ  ನುರಿತ ಉಪನ್ಯಾಸಕರಿಂದ ಪ್ರಾರಂಭಿಸಲಾಗುವುದು. ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ತರಬೇತಿ ನೀಡಲಾಗುವುದು. ಆಸಕ್ತರು ಕೂಡಲೇ ಹೆಸರು ನೋಂದಣಿ ಮಾಡಿಕೊಳ್ಳಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಬಿ.ಜಿ.ಎಸ್. ಸ್ಟಡಿ ಸೆಂಟರ್, ಶ್ರೀಆದಿಚುಂಚನಗಿರಿ ಶಾಲೆ, ರವೀಂದ್ರನಗರ, ಹಾಸನ. ಮೊ.ಸಂ. 9738334784 ಅಥವಾ 8050839482 ಇಲ್ಲಿಗೆ ಸಂಪರ್ಕಿಸಬಹುದು.
ಸ್ಕೌಟ್ಸ್ ಸಂಸ್ಥಾಪಕರ ಜನ್ಮ ದಿನಾಚರಣೆ
ಹೊಳೆನರಸೀಪುರ: ಪಟ್ಟಣದಲ್ಲಿನ ಶ್ರೀ ವೆಂಕಟೇಶ್ವರ ಎಜುಕೇಷನ್ ಟ್ರಸ್ಟ್‌ನ ಆಶ್ರಯದಲ್ಲಿ ಸಾಧನಾ ಗೈಡ್ ಕಂಪೆನಿಯ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಲಾರ್ಡ್ ಬೇಡನ್ ಪೊವೆಲ್ ಹಾಗೂ ಆಲೇವ್ ಬೇಡನ್ ಪೊವೆಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮಕ್ಕಳಿಗೆ ಪ್ರಥಮ ಚಿಕಿತ್ಸೆಯ ಅರಿವು ಮೂಡಿಸುವ ಮೂಲಕ ಇತ್ತೀಚೆಗೆ ಆಚರಿಸಲಾಯಿತು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ತಾಲೂಕಿನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಹಾಗೂ ವೆಂಕಟೇಶ್ವರ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ್, ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ ಮತ್ತು 18 ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭವನ್ನು ನಡೆಸಿಕೊಟ್ಟರು.
 ನಂತರ, ನಾರಾಯಣ ಶೆಟ್ಟರು ಸ್ಕೌಟಿಂಗ್ ಮತ್ತು ಗೈಡಿಂಗ್‌ನ ಹುಟ್ಟು, ಉದ್ದೇಶ, ಬೆಳವಣಿಗೆ ಹಾಗೂ ಅದರ ಧ್ಯೇಯೋದ್ದೇಶಗಳ ಕುರಿತಂತೆ ಮಕ್ಕಳಿಗೆ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ.ಕೆ. ಶ್ರೀನಿವಾಸಮೂರ್ತಿ ಅವರು, ಪ್ರಥಮ ಚಿಕಿತ್ಸೆ ಹಾಗೂ ಅದರ ಸಂಯೋಜಿತ ಪ್ರಜ್ಞೆಯ ಕುರಿತಂತೆ ಅರಿವು ಮೂಡಿಸಿದರು. ಶಾಲೆಯ ವ್ಯವಸ್ಥಾಪಕ ನಿರ್ದೇಶಕ ವಕೀಲ ಅರುಣ್ ಕುಮಾರ್ ಮಕ್ಕಳಲ್ಲಿ ಶಿಸ್ತಿನ ಪ್ರಾಮುಖ್ಯತೆ ಕುರಿತಂತೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ಗಣ್ಯರು ನೀಡಿದರು. ಕಾರ್ಯಕ್ರಮದ ನೇತೃತ್ವವನ್ನು ಗೈಡ್ಸ್ ಕ್ಯಾಪ್ಟನ್ ಆರ್. ಕುಮುದ ವಹಿಸಿದ್ದರು. ಶಿಕ್ಷಕಿ ಶೋಭ ವಂದಿಸಿದರು.
ಕಲಾ ಕಾಲೇಜಿನಲ್ಲಿ ವಿಚಾರ ಸಂಕಿರಣ
ಹಾಸನ: ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಮಾ. 13ರಂದು ಜಾಗತೀಕರಣಗೊಳ್ಳುತ್ತಿರುವ ಭಾರತದಲ್ಲಿ  ಹೊಸ ವೃತ್ತಿಗಳ ಅವಿರ್ಭಾವ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
ವಿಚಾರ ಸಂಕಿರಣದಲ್ಲಿ ಅಂತಿಮ ಎಂಎ ವಿದ್ಯಾರ್ಥಿಗಳು ನಾನಾ ವಿಷಯಗಳ ಬಗ್ಗೆ  ಪ್ರಬಂಧಗಳನ್ನು ಸಿದ್ಧಪಡಿಸಿ ಮಂಡಿಸಲಿದ್ದಾರೆ. ಮಂಡಿಸಲಾಗುವ ವಿಷಯವನ್ನು ಲಿಂಗ ಸಂಬಂಧಿ, ಸಮುದಾಯ, ಕಾರ್ಮಿಕ ಹಾಗೂ ಸಾಮಾನ್ಯ ವಿಷಯಗಳೆಂದು ವರ್ಗೀಕರಿಸಲಾಗಿದೆ. ಬೆಳಗ್ಗೆ 10.30ರಿಂದ ಸಂಜೆ 4.30ರವರೆಗೆ ಕಾಲೇಜಿನ 4  ಕೊಠಡಿಗಳಲ್ಲಿ ಪ್ರಬಂಧಗಳನ್ನು ಮಂಡಿಸಲಾಗುವುದು.
ಬೆಳಗ್ಗೆ 10ಕ್ಕೆ ವಿಚಾರ ಸಂಕಿರಣವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಉದ್ಘಾಟಿಸುವರು. ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ಅಧ್ಯಕ್ಷ  ಡಾ.ಗುರುರಾಜ  ಬೆಡೆಕರ್ ಆಶಯ ಭಾಷಣ ಮಾಡುವರು. ಕಾಲೇಜಿನ ಪ್ರಾಂಶುಪಾಲ  ಡಾ.ಐ.ಎಂ. ಮೋಹನ್ ಅಧ್ಯಕ್ಷತೆ ವಹಿಸುವರು.  
ಜಾವಗಲ್‌ನಲ್ಲಿ ಪಿಯು ಪರೀಕ್ಷೆ
ಜಾವಗಲ್:  ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದೆ ಎಂದು ಪ್ರಾಂಶುಪಾಲ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥ ವಸಂತರಾಜೇಅರಸ್ ತಿಳಿಸಿದರು.
ಕಲಾ ವಿಭಾಗದಿಂದ 120, ವಾಣಿಜ್ಯ ವಿಭಾಗದಿಂದ 77, ವಿಜ್ಞಾನ ವಿಭಾಗದಿಂದ 22, ವಿದ್ಯಾರ್ಥಿಗಳು ಮತ್ತು ಕೋಳಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ 18 ವಿದ್ಯಾರ್ಥಿಗಳು ಪ್ರಥಮ ಬಾರಿ ಪರೀಕ್ಷೆ ಬರೆಯುತ್ತಿದ್ದರೆ. ಅನುತ್ತೀರ್ಣರಾಗಿ ಪುನ- ಪರೀಕ್ಷೆ ಬರೆಯುತ್ತಿರುವವರ ಸಂಖ್ಯೆ 40 ಹಾಗೂ ಖಾಸಗಿಯಾಗಿ 18 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಂಚಾರ ರದ್ದು ಮಾಡಲಾಗಿದೆ ಎಂದು ತಿಳಿಸಿದರು.
'ಮಹಿಳೆಯರ ಹಕ್ಕು ಕಸಿಯಬೇಡಿ'
ಅರಕಲೂಡು: ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಹಕ್ಕುಗಳಿದ್ದು,ಮಹಿಳೆಯರ ಹಕ್ಕುಗಳನ್ನು ಕಸಿಯುವ ಪ್ರಯತ್ನ ಮಾಡಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಂಬೇಗೌಡ ತಿಳಿಸಿದ್ದಾರೆ.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ರಕ್ಷಣೆಗೆ ಅನೇಕ ಕಾನೂನು ಕಾಯಿದೆಗಳು ಇದ್ದು,ಇವುಗಳನ್ನು ತಿಳಿಯುವ ಕೆಲಸವನ್ನು ಪ್ರತಿಯೊಬ್ಬರೂ ಕೂಡ ಕೈಗೊಳ್ಳಬೇಕು. ನ್ಯಾಯಾಂಗ ವ್ಯವಸ್ಥ್ಥೆಯಲ್ಲಿಯೂ ಸಹ ಉಚಿತ ಕಾನೂನು ನೆರವು ದೊರೆಯುತ್ತಿದೆ ಎಂದು ಹೇಳಿದರು.
ಜಾಗೃತಿ ಮೂಡಿಸಬೇಕಿದೆ: ಕಿರಿಯ ಸಿವಿಲ್ ನ್ಯಾಯಾಧೀಶ ಗಿರೀಶ್ ಮಾತನಾಡಿ, ಸುಲಭ ಹಾಗೂ ಉಚಿತವಾಗಿ ಎಲ್ಲರಿಗೂ ಕೂಡ ಕಾನೂನಿನ ನೆರವು ಸಿಗುತ್ತಿದೆ ಎಂದು ತಿಳಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಮಹೇಶ್ ಕುಮಾರ್ ಮಾತನಾಡಿದರು. ಹಿರಿಯ ವಕೀಲರಾದ ಜಯಪ್ಪ, ಆರ್.ಕೆ. ಮಂಜುನಾಥ್, ಜನಾರ್ಧನ್ ಗುಪ್ತ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement