ಚುನಾವಣಾ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ
ಅರಕಲಗೂಡು: ರಾಜಕೀಯ ಪ್ರೇರಿತ ಹಾಗೂ ಚುನಾವಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದರೇ ಜಿಲ್ಲಾ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಚುನಾವಣಾ ಪೂರ್ವಭಾವಿಯಾಗಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಜಾತ್ರೆ, ಮದುವೆ ಬೀಗರ ಔತಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಾಲೂಕು ಕೇಂದ್ರದ ಸಹಾಯಕ ಚುನಾವಣಾಧಿಕಾರಿಗೆ ಲಿಖಿತವಾಗಿ ಕನಿಷ್ಠ 2ರಿಂದ 3ಗಂಟೆಯೊಳಗೆ ಅರ್ಜಿ ನೀಡಿ ಅನುಮತಿ ಪಡೆಯಬೇಕಿದೆ ಎಂದು ಅವರು ತಿಳಿಸಿದರು.
ತ್ವರಿತ ವಿಲೇವಾರಿಗೆ ಸೂಚನೆ: ಬರುವ ಏ. 17ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲಾ ಮತದಾರು ಕೂಡ ಮತಚಲಾಯಿಸುವ ಸಲುವಾಗಿ ಈಗಾಗಲೇ ತಿದ್ದುಪಡಿ, ವರ್ಗಾವಣೆ ಇತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮತದಾರರಿಂದ ಅರ್ಜಿ ಪಡೆದು ಸರಿಪಡಿಸಲಾಗುತ್ತಿದೆ. ಅಲ್ಲದೆ, ಹೊಸದಾಗಿ ಸೇರ್ಪಡೆಗೊಳ್ಳುವ ಮತದಾರರಿಗೆ ಮಾ. 16ರತನಕ ಅವಕಾಶವಿದೆ. ಹೊಸದಾಗಿ ಬಂದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಚುನಾವಣೆಗೆ ಸಂಬಂಧಿಸಿದಂತೆ ಪ್ರತಿ ದಿನ ನಡೆಯುವ ಎಲ್ಲಾ ಮಾಹಿತಿಯನ್ನು ಮೂರು ಗಂಟೆಗಳಿಗೊಮ್ಮೆ ನೀಡುವಂತೆ ಆಯಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಹಾಗೂ ಲೋಪಕಂಡುಬಂದರೂ ಕೂಡ ನೇರವಾಗಿ ಸಂಬಂಧಪಟ್ಟ ಮೇಲಾಧಿಕಾರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಮತದಾರರ ಹೊಸ ಸೇರ್ಪಡೆ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲದ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದ ಮತದಾರರ ಒಟ್ಟು ಸಂಖ್ಯೆಯನ್ನು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಇನ್ನೊಂದು ವಾರದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆಯಾ ಕ್ಷೇತ್ರದ ಎಆರ್ಒ ಮತ್ತು ತಹಸೀಲ್ದಾರ್ ನೀಡಲಿದ್ದಾರೆ ಎಂದರು.
ಚುನಾವಣಾಧಿಕಾರಿ ನೇಮಕ: ಅರಕಲಗೂಡು ವಿಧಾನಸಭೆ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಹಾಗೂ ದೂರುಗಳು ಇದ್ದರೆ ನೂತನವಾಗಿ ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಜಿಲ್ಲಾ ಬಿಸಿಎಂ ಅಧಿಕಾರಿ ಜಗದೀಶ್ ಕುಮಾರ್ ಅವರಿಗೆ ಸಲ್ಲಿಸಬೇಕಿದೆ. ಇವರು ತಹಸೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಸ್ಥಳೀಯವಾಗಿ ಅನುಮತಿಯನ್ನು ಇವರಿಂದಲೇ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಚೆಕ್ಪೋಸ್ಟ್ಗೆ ಕ್ರಮ: ಅರಕಲಗೂಡು ವಿಧಾನ ಸಭಾ ವ್ಯಾಪ್ತಿಯ ಆಯ್ದ ಭಾಗಗಳಲ್ಲಿ ಚುನಾವಣಾ ಅಕ್ರಮ ತಡೆಯುವ ಸಲುವಾಗಿ ಚೆಕ್ಪೋಸ್ಟ್ಗಳನ್ನು ತೆರೆಯಲು ನಿಧರಿಸಲಾಗಿದೆ. ಈ ಕುರಿತು ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿ,ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅನ್ಬುಕುಮಾರ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಉಪ ವಿಭಾಗಾಧಿಕಾರಿ ಡಾ. ಮಧುಕೇಶ್ವರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಧಿಕಾರಿಗಳ ಸಭೆ: ಇದಕ್ಕೂ ಮುನ್ನ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ನಡೆಸಿದರು.
ಪೊಲೀಸ್ ಸಿಬ್ಬಂದಿ ಕೂಡ ಚುನಾವಣಾ ಆಯೋಗ ನೀಡಿರುವ ಎಲ್ಲಾ ವಿವರಗಳನ್ನು ಮನದಟ್ಟುಮಾಡಿಕೊಂಡು ಕೆಲಸ ನಿರ್ವಹಿಸುವ ಜತೆಗೆ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲು ಹಾಗೂ ಸರಿಯಾದ ಸಮಯದಲ್ಲಿ ಕೇಂದ್ರ ಸ್ಥಾನ ಹಾಗೂ ನಿಯೋಜನೆಗೊಂಡ ಸ್ಥಳದಲ್ಲಿ ಸೇವೆಯಲ್ಲಿ ತೊಡಗುವಂತೆ ಸೂಚನೆ ನೀಡಲಾಯಿತು.