ದೇಶದ ಅಭಿವೃದ್ಧಿ ಮೂಲಮಂತ್ರ
ಅರಕಲಗೂಡು: ಯುಪಿಎ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕಾರ್ಯಕರ್ತರು ಮನೆಮನೆಗೆ ತೆರಳಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕಾದ ಅವಶ್ಯವಿದೆ ಎಂದು ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ತಿಳಿಸಿದ್ದಾರೆ.
ಅರಕಲಗೂಡಿನ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ವತಿಯಿಂದ ಆಯೋಜನೆಗೊಂಡಿದ್ದ ಭಾರತ ನಿರ್ಮಾಣ ಯಾತ್ರಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪ್ರಚಾರದ ಕೊರತೆಯಿಂದ ಸಾರ್ವಜನಿಕರಿಗೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ತಲುಪಿಲ್ಲ ಎಂದು ವಿಷಾದಿಸಿದರು.
ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು: ದೇಶದಲ್ಲಿ ಕಾಂಗ್ರೆಸ್ 129 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಭಾರತವನ್ನು ದಾಸ್ಯ ಮುಕ್ತಗೊಳಿಸಿದ್ದು ಮಾತ್ರವಲ್ಲದೆ, ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿಯನ್ನು ನೀಡುವಲ್ಲಿ ಮುಂದಾಗದ ಕಾರಣ ಹತ್ತು ವರ್ಷಗಳ ಯುಪಿಎ ಸರ್ಕಾರದ ಸಾಧನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವಿಲ್ಲವಾಗಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಗ್ರಾಮಗಳಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮಾಡಿರುವ ಜನಕಲ್ಯಾಣ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಬೇಕೆಂದರು.
ವಿರೋಧ ಪಕ್ಷಗಳ ಕೊಡುಗೆಯೇನು?: ಕೇಂದ್ರ ಸರ್ಕಾರದ ಕೆಲ ಸಚಿವರ ಸಣ್ಣಪುಟ್ಟ ಅವ್ಯವಹಾರಗಳನ್ನೇ ದೊಡ್ಡದಾಗಿ ಬಿಂಬಿಸುತ್ತಾ ಯುಪಿಎ ಸರ್ಕಾರಕ್ಕೆ ಮಸಿ ಬಳಿಯಲು ವಿರೋಧ ಪಕ್ಷಗಳು ಮುಂದಾಗುತ್ತಿವೆ.
ಕೇಂದ್ರ ಸರ್ಕಾರದ ಮಾಹಿತಿ ಹಕ್ಕು ಕಾಯಿದೆ, ಮಹಾತ್ಮಾಗಾಂಧಿ ಉದ್ಯೋಗ ಭರವಸೆ ಯೋಜನೆ, ಶಿಕ್ಷಣ ಹಕ್ಕು ಕಾಯಿದೆ, ಗ್ರಾಮ ಸಡಕ್ ಯೋಜನೆ, ಇಂದಿರಾ ಆವಾಜ್ ಇನ್ನೂ ಮೊದಲಾದ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಾದರೆ, ಕರ್ನಾಟಕ ಸರ್ಕಾರದ ಜನಕಲ್ಯಾಣ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನ, ರೈತರಿಗೆ ಬಡ್ಡಿರಹಿತ ಸಾಲ, ಯಶಸ್ವಿನಿ, ಶುದ್ಧ ಕುಡಿಯುವ ನೀರು ಇಂತಹ ಪ್ರಮುಖ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಆದರೆ, ಹಿಂದೆ ಆಡಳಿತ ಮಾಡಿದ ಜೆಡಿಎಸ್, ಬಿಜೆಪಿ, ಸರ್ಕಾರಗಳು ಸಾರ್ವಜನಿಕರಿಗೆ ನೀಡಿರುವ ಕೊಡುಗೆಗಳು ಏನು ಎಂಬುವುದನ್ನು ಆ ಪಕ್ಷಗಳೇ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಗೌಡರನ್ನು ಮಣಿಸುವುದೇ ಗುರಿ: ಹಾಸನ ಲೋಕಸಭಾ ಅಭ್ಯರ್ಥಿ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ. ಮಂಜು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ಮುಂದಾಗುತ್ತೇವೆ. ಕಾಂಗ್ರೆಸ್ ಪಕ್ಷ ತಲಾ ತಲಾಂತರದಿಂದಲೂ ದೇಶದ ಅಭಿವೃದ್ಧಿಯ ಚಿಂತನೆಯನ್ನು ಬಿಟ್ಟರೆ ಎಂದೂ ಅಧಿಕಾರದ ಆಸೆಗೆ ಮುಂದಾಗಿಲ್ಲ. 1999ರಲ್ಲಿ ಹಾಸನ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದಂತೆ, ಈ ಬಾರಿಯೂ ಮಾಜಿ ಪ್ರಧಾನ ಮಂತ್ರಿಯನ್ನು ಮಣಿಸುವುದೇ ಹಾಸನ ಕಾಂಗ್ರೆಸ್ಸಿಗರ ಪ್ರತಿಜ್ಞೆ ಎಂದು ಅವರು ತಿಳಿಸಿದರು.
ರು. 780 ಕೋಟಿ ಕಾಮಗಾರಿ: ಕರ್ನಾಟಕ ಸರ್ಕಾರವು 11 ತಿಂಗಳಿನಲ್ಲಿಯೇ ರು. 780 ಕೋಟಿ ಕಾಮಗಾರಿಗೆ ಚಾಲನೆಯನ್ನು ನೀಡಿದ್ದು, ಮುಂದಿನ 4 ವರ್ಷ ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೇ ಮುಂದುವರಿಯುತ್ತದೆ ಎಂದು ಅವರು ಭವಿಷ್ಯ ನುಡಿದರು.
ಕಾರ್ಯಕ್ರಮದಲ್ಲಿ ಮಾಜೀ ವಿಧಾನಪರಿಷತ್ ಸದಸ್ಯ ಎಸ್.ಎಂ. ಆನಂದ್, ಮಾಜೀ ಶಾಸಕ ಪುಟ್ಟೇಗೌಡ, ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಂಥರ್ ಗೌಡ ಮತ್ತು ಕಾಂಗ್ರೆಸ್ ಮುಖಂಡರಾದ ಜವರೇಗೌಡ, ಶೇಷೇಗೌಡ, ಕಬ್ಬಳಿಗೆರೆ ಭೈರೇಗೌಡ ಮೊದಲಾದವರು ಭಾಗವಹಿಸಿದರು.
'ಬಿಜೆಪಿ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾತು ಸುಳ್ಳು'
ಅರಕಲಗೂಡು: ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಜೆಡಿಎಸ್ ಹೇಳಿಕೆ ಮತದಾರರನ್ನು ದಿಕ್ಕುತಪ್ಪಿಸುವ ರಾಜಕೀಯ ಕುತಂತ್ರವೇ ಹೊರತು ಬೇರೇನೂ ಅಲ್ಲ ಎಂದು ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಹೇಳಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು, ಯಾವುದೇ ಬಿನ್ನಾಭಿಪ್ರಾಯ ಪಕ್ಷದ ಮುಖಂಡರಲಿಲ್ಲ. ಎಲ್ಲರೂ ಕೂಡ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಎ. ಮಂಜು ಗೆಲವಿಗೆ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದ ಅವರು ಖಾಸಗಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರೆ, ವಿರೋಧ ಪಕ್ಷದವರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಹೊಂದಾಣಿಕೆ ಎಂದು ಬಿಂಬಿಸುತ್ತಿವೆ. ಇದು ಕಾಂಗ್ರೆಸ್ ಸಂಸ್ಕೃತಿಗೆ ಒಗ್ಗುವ ಸಂಪ್ರದಾಯವಲ್ಲ. ಅದು ಕೇವಲ ಜೆಡಿಎಸ್ ಮತ್ತು ಬಿಜೆಪಿಗೆ ಸೀಮಿತಗೊಂಡಿರುವ ಹೊಂದಾಣಿಕೆ ಎಂದರು.
ಮತದಾರರಿಂದ ಎಚ್ಚರಿಕೆ: ಶಾಸಕ ಹಾಗೂ ಲೋಕಸಭಾ ಅಭ್ಯರ್ಥಿ ಎ. ಮಂಜು ಮಾತನಾಡಿ, ಮಾಟ ಮಂತ್ರ ಮಾಡಿಸುವುದರಲ್ಲಿ ದೇವೇಗೌಡರ ಕುಟುಂಬ ಕೊಳ್ಳೆಗಾಲದವರನ್ನು ಮೀರಿಸುತ್ತಾರೆ. ರೇವಣ್ಣ ವಿಧಾನಸಭೆಗೆ ಬರುವಾಗ ನಿಂಬೆಹಣ್ಣು ಹಿಡಿದು ಕಾಲಿಗೆ ಚಪ್ಪಲಿ ಹಾಕದೇ ಬರುತ್ತಾರೆ. ದೇವೇಗೌಡರ ಯಾವುದೇ ಮಾಟ ಮಂತ್ರ ಈ ಬಾರಿಯ ಚುನಾವಣೆಯಲ್ಲಿ ಫಲಿಸದು ಎಂದು ನುಡಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಜವರೇಗೌಡ, ಮಾಜಿ ಶಾಸಕರಾದ ಪುಟ್ಟೇಗೌಡ, ಎಸ್.ಎಂ. ಆನಂದ್ ಹಾಜರಿದ್ದರು.