ಪರಿಶ್ರಮದ ದುಡಿಮೆ ರೂಢಿಸಿಕೊಳ್ಳಬೇಕು
ಹಾಸನ: ಪರಿಶ್ರಮವಿದ್ದಲ್ಲಿ ಫಲವಿದ್ದು, ನಾವು ಪರಿಶ್ರಮದಿಂದ ದುಡಿಯುವುದನ್ನು ರೂಢಿಸಿಕೊಳ್ಳಬೇಕು ಎಂದು ಹಾಸನ ತಾಲೂಕಿನ ತಹಸೀಲ್ದಾರ್ ಮಂಜುನಾಥ್ ಅಭಿಪ್ರಾಯ ಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಕಲಾ ಕಾಲೇಜು, ಎಚ್.ಡಿ. ದೇವೇಗೌಡ ಪ್ರಥಮ ದರ್ಜೆ ಕಾಲೇಜು ಪಡುವಲಿಪ್ಪೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಭಾರತ್ ಸ್ಕೌಟ್ಸ್ ಜಿಲ್ಲಾ ಭವನದಲ್ಲಿ ಶುಕ್ರವಾರ ನಡೆದ ರೋವರ್ಸ್ ಮತ್ತು ರೇಂಜರ್ಸ್ಗಳ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಮಾನವ ಸಂಪನ್ಮೂಲ ಹೇರಳವಾಗಿದ್ದರೂ, ಸರಿಯಾಗಿ ಸದ್ಬಳಕೆಯಾಗದೆ ಹಲವಾರು ಸಮಸ್ಯೆಗಳನ್ನು ಇಂದಿಗೂ ಕಾಣಬಹುದಾಗಿದೆ ಎಂದು ಅವರು ವಿಷಾದಿಸಿದರು.
ಶ್ಲಾಘನೀಯ: ಪಡುವಲಿಪ್ಪೆಯ ಎಚ್.ಡಿ. ದೇವೇಗೌಡ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಡಿ. ನಾರಾಯಣ್ ಅವರು ಮಾತನಾಡಿ, ಎನ್ಸಿಸಿ ಹಾಗೂ ಎನ್ಎಸ್ಎಸ್ ಸೇವಾ ಯೋಜನಾ ಘಟಕಗಳ ಕೆಲವು ಅಂಶಗಳನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಳವಡಿಸಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಅಭಿವೃದ್ಧಿ ಸಾಧ್ಯ: ಸಮವಸ್ತ್ರ ಧರಿಸಿದ ವ್ಯಕ್ತಿಯನ್ನು ಕಂಡ ಕೂಡಲೇ ಗೌರವ ಸೂಚಿಸಬೇಕೆಂಬ ಮನಸ್ಸು ಎಲ್ಲರಲ್ಲೂ ಮೂಡುತ್ತದೆ ಎಂದು ಸಮವಸ್ತ್ರದ ಮಹತ್ವವನ್ನು ವಿವರಿಸಿದ ಅವರು, ಯುವಜನತೆ ಕಾಯ ವಾಚಾ ಮನಸ ಪ್ರಾಮಾಣಿಕವಾದ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವ ಮೂಲಕ ಸಚ್ಚಾರಿತ್ರ್ಯವಂತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಶಿಕ್ಷಣದಿಂದ ದಾರಿದೀಪ: ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ.ಮೋಹನ್ ವಹಿಸಿ ಮಾತನಾಡಿ, ಪರಿಪೂರ್ಣ ಸಚ್ಚಾರಿತ್ರ್ಯ ವ್ಯಕ್ತಿಯಾಗಿ ರೂಪುಗೊಳ್ಳಬೇಕಾದರೆ ನಾವು ನಮ್ಮ ಆತ್ಮಕ್ಕೆ ವಂಚನೆ ಮಾಡಿಕೊಳ್ಳದಂತೆ ಜೀವನದಲ್ಲಿ ನುಡಿದಂತೆ ನಡೆದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಸ್ಕೌಟ್ ಮತ್ತು ಗೈಡ್ಸ್ನಂಥ ಸಂಸ್ಥೆಗಳು ನೀಡುತ್ತಿರುವ ಶಿಕ್ಷಣ ದಾರಿದೀಪವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮುತ್ತೇಗೌಡ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ತರಬೇತಿ ಆಯುಕ್ತೆ ಕಾಂಚನ ಮಾಲ, ರೇಂಜರ್ ಲೀಡರ್ಗಳಾದ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಿ ಹೇಮಾವತಿ, ಪಡುವಲಿಪ್ಪೆ ಕಾಲೇಜಿನ ರೇಂಜರ್ ಲೀಡರ್ ಲತಾ, ಜಿಲ್ಲಾ ಸಂಘಟಕ ದೇವರಾಜ್ ಎಸ್.ಪಿ, ಸ್ಕೌಟ್ ಮಾಸ್ಟರ್ ಆರ್.ಜಿ. ಗಿರೀಶ್ ಹಾಜರಿದ್ದರು. ಪ್ರಾಸ್ತಾವಿಕವಾಗಿ ರೋವರ್ಸ್ ಲೀಡರ್ ಉದಯ್ ಕುಮಾರ್ ಮಾತನಾಡಿದರು. ಚನ್ನಬಸವೇಶ್ವರ ನಿರೂಪಿಸಿ, ರೋವರ್ಗಳಾದ ಕಾರ್ತಿಕ್ ಸ್ವಾಗತಿಸಿ, ಶಿವಕುಮಾರ್ ವಂದಿಸಿದರು.