ಬಿಸಿಯೂಟ ನೌಕರರ ಸಂಬಳ ಹೆಚ್ಚಳಕ್ಕೆ ಆಗ್ರಹ
ಕ.ಪ್ರ. ವಾರ್ತೆ , ಹಾಸನ , ಮಾ. 14
ಬಿಸಿಯೂಟ ನೌಕರರಿಗೆ ಕಳೆದ ವಷಾಂತ್ಯದಿಂದ ಹೆಚ್ಚಳವಾಗಿರುವ ಸಂಬಳವನ್ನು ಜಾರಿ ಮಾಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಷಾದ: ದೇಶದ ಅಭಿವೃದ್ಧಿಗಾಗಿ ಪೂರಕವಾಗಿ ಪ್ರತಿಯೊಂದು ಮಗುವೂ ಶಿಕ್ಷಣ ಪಡೆಯಬೇಕು. ಆ ಶಿಕ್ಷಣವನ್ನು ಪಡೆಯಲು ಮಗು ಶಿಕ್ಷಣಕ್ಕೆ ಆಕರ್ಷಿತನಾಗುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1ರಿಂದ 10ನೇ ತರಗತಿವರೆಗಿನ 69,23,932 ಮಕ್ಕಳಿಗೆ 1,03,874 ಮಹಿಳೆಯರು ಅಡುಗೆ ಮಾಡಿ ಬಿಸಿಯೂಟ ಬಡಿಸುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಸೇವಾ ಸೌಲಭ್ಯಗಳು ಇಲ್ಲ. ಕನಿಷ್ಟ ವೇತನವೂ ಇಲ್ಲ ಎಂದು ಪ್ರತಿಭಟನಾಕಾರರು ವಿಷಾದಿಸಿದರು.
ನೆರೆರಾಜ್ಯಗಳಲ್ಲಿ ಪರಿಸ್ಥಿತಿ ಉತ್ತಮ: 2001ರಿಂದ ಅಕ್ಷರ ದಾಸೋಹ ಯೋಜನೆಯಲ್ಲಿ ಸುಮಾರು 1 ಲಕ್ಷ ಮಹಿಳೆಯರು ಯಾವುದೇ ಸವಲತ್ತುಗಳು ಇಲ್ಲದೆ ದಿನಕ್ಕೆ ರು. 38 ಸಾವಿರ ಸಂಬಳಕ್ಕೆದುಡಿಯುತ್ತಿದ್ದಾರೆ. ಈಗ ಕೆಲಸದ ಅವಧಿ ಬೆಳಗ್ಗೆ 9ರಿಂದ 3ರವರೆಗೆ ಆಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಅಡುಗೆಯವರ ಗೌರವ ಧನ ದಿನಕ್ಕೆ ರು. 150 ಇದೆ. ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಈಗ ರು. 174 ಕೊಡಲಾಗಿದೆ ಮತ್ತು ಸರ್ಕಾರ ಯಾವುದೆ ವಿಭಾಗದಲ್ಲಿ ದುಡಿಯುವವರಿಗೆ ರು. 130ನಿಂದ ರು. 150ಗಳಿಗೆ ಕಡಿಮೆ ಇಲ್ಲದಂತೆ ಕೂಲಿ ನೀಡಲಾಗುತ್ತಿದೆ.
ಮಾತು ತಪ್ಪಿದರು ಸಿಎಂ: 2013ರ ಮಾ. 17 ಮತ್ತು 18, ನಡೆದ 45ನೇ ಐಎಲ್ಸಿ ಭಾರತೀಯ ಕಾರ್ಮಿಕ ಸಮ್ಮೇಳನ ಸರ್ಕಾರದ ನಾನಾ ಯೋಜನೆಗಳಲ್ಲಿ (ಸ್ಕೀಂ ವರ್ಕರ್ಸ್) ದುಡಿಯುತ್ತಿರುವ ಯುವ ಕಾರ್ಯಕರ್ತರಿಗೆ ಕನಿಷ್ಟ ಕೂಲಿ ಸಾಮಾಜಿಕ ಭದ್ರತೆ ಮತ್ತು ಕೆಲಸದ ಭದ್ರತೆಯನ್ನು ಒದಗಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಶಿಫಾರಸು ಆಧಾರದಲ್ಲಿ ಬಿಸಿಯೂಟ ನೌಕರರಿಗೆ ಕನಿಷ್ಟ ರು. 3 ಸಾವಿರ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಹೆಚ್ಚಳ ಮಾಡಿರುವ ವೇತನವನ್ನು ಡಿಸೆಂಬರ್ 2013ರಿಂದ ನೀಡುವಂತೆ ಒತ್ತಾಯಿಸಿದ್ದರು. ಏ. 1, 2014ರಿಂದ ಜಾರಿಗೆ ಬರುವಂತೆ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ನಿರ್ವಹಿಸುತ್ತಿರುವ ಅಡುಗೆಯವರಿಗೆ ಮಾಸಿಕ ಸಂಭಾವನೆಯನ್ನು ತಲಾ ರು. 500ಕ್ಕೆ ಹೆಚ್ಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಹೋರಾಟ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸೆಂಬರ್ನಿದಲೇ ಹೆಚ್ಚಳವಾದ ವೇತನವನ್ನು ಜಾರಿ ಮಾಡುವುದಾಗಿ ಹೇಳಿ ಈಗ ಮಾತಿಗೆ ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒತ್ತಾಯ: ಈ ಆದೇಶವನ್ನು ಕೂಡಲೇ ವಾಪಸ್ ಪಡೆದು 2013ರ ಡಿಸೆಂಬರ್ನಿಂದಲೇ ರು. 500 ಹೆಚ್ಚಳ ವೇತನ ನೀಡಲು ಆದೇಶ ನೀಡಬೇಕು ಎಂದು ಅವರು ಒತ್ತಾಯಿಸಿದರು.ಅಲ್ಲದೇ ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಬಾರದು ಎಂದು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ. ಪುಷ್ಪ, ಪ್ರಧಾನ ಕಾರ್ಯದರ್ಶಿ ಕಲಾ, ಸರೋಜಮ್ಮ, ಮಮತ, ಕಾವ್ಯ, ಮಂಜುಳ, ರಾಣಿ, ಸುಮ, ಕಲ್ಪನಾ, ಮೀನಾಕ್ಷಿ, ಸುಜಾತ, ರಮ್ಯಾ, ಪುಷ್ಪಲತಾ, ನೇತ್ರಾವತಿ, ಮಂಜಳು, ಸಾವಿತ್ರಮ್ಮ, ಸುಮಂಗಲಿ, ಸಿಐಟಿಯು ಅರವಿಂದ್ ಹಾಗೂ ಇತರರು ಇದ್ದರು.
'ಸರ್ಕಾರ ಸ್ಪಂದಿಸಬೇಕು'
ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಹಾಜರಾತಿಯಲ್ಲಿ ಈ ಯೋಜನೆಯಿಂದ ಪ್ರಗತಿ ಕಾಣಲಾಗಿದೆ ಎಂದು ಹೇಳಲಾಗಿದೆ. ಈ ಯೋಜನೆಯ ಅಭಿವೃದ್ಧಿಗಾಗಿ ಕಳೆದ 11 ವರ್ಷಗಳಿಂದ ದುಡಿಯುತ್ತಿದ್ದಾರೆ. ಈ ಬಡ ಮಹಿಳೆಯರ ಬೇಡಿಕೆಗಳಿಗಾಗಿ ಸರ್ಕಾರ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.