ಬೆಂಕಿಯ ಕೆನ್ನಾಲಿಗೆ: ಮರಗಳು ನಾಶ
ಹಾಸನ: ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ರು. 5 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ನೀಲಗಿರಿ ಮರಗಳು ನಾಶಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ತಾಲ್ಲೂಕಿನ ಸಾಲಗಾಮೆ ಹೋಬಳಿಯ ಚನ್ನೇನಹಳ್ಳಿ ಗ್ರಾಮದಲ್ಲಿ ಒಟ್ಟು 5 ಎಕರೆಯಲ್ಲಿ ಹಾಕಲಾಗಿದ್ದ ನೀಲಗಿರಿ ಮರಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಅಗ್ನಿಶಾಮಕ ದಳದವರಿಗೆ ಸುದ್ದಿ ತಿಳಿಸಲಾಗಿದೆ. ಅಷ್ಟರೊಳಗೆ ಲಕ್ಷಾಂತರ ರು.ಮೌಲ್ಯದ ಮರಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.
ಗ್ರಾಮದ ವಸಂತಮ್ಮ ಎಂಬುವರಿಗೆ ಸೇರಿದ 2.10 ಎಕರೆ ಜಮೀನಿನಲ್ಲಿ ಹಾಕಲಾಗಿದ್ದ ಲಕ್ಷಾಂತರ ರು. ಬೆಲೆ ಬಾಳುವ ನೀಲಗಿರಿ ಮರ ಬೆಂಕಿಗೆ ಆಹುತಿಯಾಗಿ ನಾಶವಾಗಿದೆ. ರಮೇಶ್ ಎಂಬುವರಿಗೆ ಸೇರಿದ 1 ಎಕರೆ ಜಮೀನಿನಲ್ಲಿದ್ದ ನೀಲಗಿರಿ ಮರ ಸುಟ್ಟು ಹೋಗಿದೆ. ರಾಮು ಎಂಬುವರ 27 ಗುಂಟೆ ಭೂಮಿಯಲ್ಲಿದ್ದ ನೀಲಗಿರಿ ಮರ ನಾಶವಾಗಿದೆ. ಚನ್ನಕೇಶವ ಮೂರ್ತಿ 30 ಗುಂಟೆಯಲ್ಲಿದ್ದ ನೀಲಗಿರಿ ಮರ ಕೂಡ ನಾಶವಾಗಿದ್ದು, ಒಟ್ಟಾರೆಯಾಗಿ 5 ಲಕ್ಷಕ್ಕೂ ಹೆಚ್ಚುಬೆಲೆ ಬಾಳು ನೀಲಗಿರಿ ಮರ ನಾಶಗೊಂಡಿದೆ.
ಯುವಜೋಡಿಗೆ ಕರವೇಯಿಂದ ಕಂಕಣಭಾಗ್ಯ
ಬೇಲೂರು: ಆರ್ಥಿಕ ಸಂಕಷ್ಟದಲ್ಲಿದ್ದ ಯುವಜೋಡಿಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಮುಖಂಡರು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ.
ತಾಲೂಕಿನ ಅರೇಹಳ್ಳಿ ಹುಡುಗಿ ಶ್ವೇತಾ (22) ಮತ್ತು ಚನ್ನರಾಯಪಟ್ಟಣ ಹುಡುಗ ಲಕ್ಷ್ಮಣ (28) ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಮನೆಯಲ್ಲೂ ಕಷ್ಟವಿದ್ದು ಕಡುಬಡವರಾಗಿದ್ದ ಹಿನ್ನೆಲೆಯಲ್ಲಿ ಮದುವೆಯಾಗಲು ಅಸಾಧ್ಯವಾಗಿತ್ತು.
ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು, ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಇಬ್ಬರ ವಿವಾಹ ನೆರವೇರಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡ ಇಲ್ಲದ ಶ್ವೇತಾಳನ್ನು ಚನ್ನರಾಯಪಟ್ಟಣದ ಲಕ್ಷ್ಮಣ ಇಷ್ಟಪಟ್ಟಿದ್ದರು. ಆರ್ಥಿಕವಾಗಿ ಎರಡೂ ಕಡೆಯವರು ಸಂಕಷ್ಟದಲ್ಲಿದ್ದ ವಿಷಯ ಕರವೇ ಅವರಿಗೆ ತಿಳಿಯಿತು.
ಕರವೇ ಕಾರ್ಯಕರ್ತರು ತಾವೇ ಖುದ್ದಾಗಿ ತಿಂಡಿ, ಊಟ, ಮಾಂಗಲ್ಯ, ವಸ್ತ್ರ, ಫೋಟೊ ಇನ್ನಿತರ ಖರ್ಚನ್ನು ಭರಿಸಿ ಯುವಜೋಡಿಗೆ ಮದುವೆ ಮಾಡಿಸಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ತಾಲೂಕು ಕರವೇ ಅಧ್ಯಕ್ಷ ಚಂದ್ರಶೇಖರ್, ಖಾದರ್, ಲಿಂಗರಾಜು, ಗಂಗಾದರ್, ಬಾಬು ಪಿಠೀಲು, ಲತಾ ಸುರೇಶ್ ಇದ್ದರು.
ಅಪಘಾತದಲ್ಲಿ ಮಹಿಳಾ ಟೆಕ್ಕಿ ಸಾವು, 10 ಮಂದಿಗೆ ಗಾಯ
ಸಕಲೇಶಪುರ: ಹಿಂಬದಿಯಿಂದ ಟೆಂಪೂ ಟ್ರಾವೆಲ್ಸ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೊ ಟ್ರಾವೆಲ್ಸ್‌ನಲ್ಲಿದ್ದ ಮಹಿಳಾ ಟೆಕ್ಕಿ ಸ್ಥಳದಲ್ಲೆ ಮೃತಪಟ್ಟು 10 ಜನ ಮರಣಾಂತಿಕವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಕೆಂಪುಹೊಳೆ ಕಿರುಜಲವಿದ್ಯುತ್ ಯೋಜನೆ ಸಮೀಪ ಶುಕ್ರವಾರ ನಡೆದಿದೆ.
ತಮಿಳುನಾಡು ಮೂಲದ ರಾಧಿ (23) ಮೃತಪಟ್ಟ ಯುವತಿ. ಗಾಯಾಳುಗಳು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ: ಚೆನೈ ಮೂಲದ ಮೆವರಿಕ್ ಸಾಫ್ಟ್‌ವೇರ್ ಕಂಪನಿಯ ನೌಕರರು ಬೆಂಗಳೂರಿನಿಂದ-ಚಿಕ್ಕಮಗಳೂರಿಗೆ ತೆರಳುತ್ತಿದ್ದ ವೇಳೆ ಬಸ್ಸೊಂದು ತಿರುವು ರಸ್ತೆಯಲ್ಲಿ ವಾಹನ ಹಿಂದಿಕ್ಕುವ ಭರದಲ್ಲಿ ಹಿಂಬದಿಯಿಂದ ಟೆಂಪೂ ಟ್ರಾವೆಲ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಟೆಂಪೂ ಟ್ರಾವೆಲ್ ವಾಹನ 20 ಅಡಿ ಆಳದ ಮತ್ತೊಂದು ರಸ್ತೆಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿದ್ದ ವಿಜಯಂತಿ (24), ಷಣ್ಮುಗಪ್ರಿಯ (23), ಏಲಿಜಬೆತ್ (23), ಬಾಸ್ಮತಿ (25), ಖುರ್ಶಿದ್ (26), ಶ್ರೀಕುಮಾರ್ (30), ಶ್ಯಾಮಸುಂದರ್(24), ಅರುಣ್ ಪ್ರತಾಪ್ (26) ಮತ್ತು ಕಂಪನಿ ವ್ಯವಸ್ಥಾಪಕ ದೇವನಾಥ್ (35) ಗಾಯಗೊಂಡಿದ್ದರೆ, ಪವನ್ ರೆಡ್ಡಿ ಯಾವುದೇ ಗಾಯಗಳಿಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಗಾಯಾಳುಗಳಿಗೆ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹಾಸನಕ್ಕೆ ಸಾಗಿಸಲಾಗಿದೆ.
'ಮಾಡುವ ವೃತ್ತಿಗೆ ಗೌರವಿಸಿದರೆ ಯಶಸ್ಸು ಸಾಧ್ಯ'
ಬೇಲೂರು: ಆರ್ಥಿಕ ಸಂಕಷ್ಟದಲ್ಲಿದ್ದ ಯುವಜೋಡಿಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಮುಖಂಡರು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ.
ತಾಲೂಕಿನ ಅರೇಹಳ್ಳಿ ಹುಡುಗಿ ಶ್ವೇತಾ (22) ಮತ್ತು ಚನ್ನರಾಯಪಟ್ಟಣ ಹುಡುಗ ಲಕ್ಷ್ಮಣ (28) ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಮನೆಯಲ್ಲೂ ಕಷ್ಟವಿದ್ದು ಕಡುಬಡವರಾಗಿದ್ದ ಹಿನ್ನೆಲೆಯಲ್ಲಿ ಮದುವೆಯಾಗಲು ಅಸಾಧ್ಯವಾಗಿತ್ತು.
ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು, ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಇಬ್ಬರ ವಿವಾಹ ನೆರವೇರಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡ ಇಲ್ಲದ ಶ್ವೇತಾಳನ್ನು ಚನ್ನರಾಯಪಟ್ಟಣದ ಲಕ್ಷ್ಮಣ ಇಷ್ಟಪಟ್ಟಿದ್ದರು. ಆರ್ಥಿಕವಾಗಿ ಎರಡೂ ಕಡೆಯವರು ಸಂಕಷ್ಟದಲ್ಲಿದ್ದ ವಿಷಯ ಕರವೇ ಅವರಿಗೆ ತಿಳಿಯಿತು.
ಕರವೇ ಕಾರ್ಯಕರ್ತರು ತಾವೇ ಖುದ್ದಾಗಿ ತಿಂಡಿ, ಊಟ, ಮಾಂಗಲ್ಯ, ವಸ್ತ್ರ, ಫೋಟೊ ಇನ್ನಿತರ ಖರ್ಚನ್ನು ಭರಿಸಿ ಯುವಜೋಡಿಗೆ ಮದುವೆ ಮಾಡಿಸಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ತಾಲೂಕು ಕರವೇ ಅಧ್ಯಕ್ಷ ಚಂದ್ರಶೇಖರ್, ಖಾದರ್, ಲಿಂಗರಾಜು, ಗಂಗಾದರ್, ಬಾಬು ಪಿಠೀಲು, ಲತಾ ಸುರೇಶ್ ಇದ್ದರು.
ಇಂದು ವಿದ್ಯುತ್ ವ್ಯತ್ಯಯ
ಹಾಸನ: ಕಂದಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾ. 15ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಕಂದಲಿ, ಆಲೂರು, ಶೆಟ್ಟಿಹಳ್ಳಿ, ಕದಾಳು, ಕಣತೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕೆಪಿಟಿಸಿಎಲ್ ನೋಡಲ್ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಅಲ್ಲದೇ, ರಾಮೇಶ್ವರನಗರ ವಿದ್ಯುತ್ ವಿತರಣಾ ಕೇಂದ್ರದಲ್ಲೂ ಮಾ. 15ರಂದು ಮಧ್ಯಾಹ್ನ 12 ರಿಂದ ಸಂಜೆ 3ರವರೆಗೆ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಸತ್ಯಮಂಗಲ, ದೊಡ್ಡಪುರ, ಬೂವನಹಳ್ಳಿ, ಕೆ.ಆರ್, ಪುರಂ, ಬಿ.ಎಂ ರಸ್ತೆ, ಉದಯಗಿರಿ, ಶಂಕರಿ ಪುರಂ, ಆಡುವಳ್ಳಿ, ರೇಲ್ವೇ ನಿಲ್ದಾಣ, ಆರ್.ಟಿ.ಓ ಕಚೇರಿ ಪ್ರದೇಶ, ರಾಜಘಟ್ಟ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ,
ಸಾರ್ವಜನಿಕರು ಸಹಕರಿಸಬೇಕೆಂದು ಕೆಪಿಟಿಸಿಎಲ್ ನೋಡಲ್ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
ಕೇಂದ್ರ ಸ್ಥಾನ ಬಿಡದಂತೆ ಅಧಿಕಾರಿಗಳಿಗೆ ಸೂಚನೆ
ಹಾಸನ: ಲೋಕಸಭಾ ಚುನಾವಣೆ 2014ರ ವಿವಿಧ ಕಾರ್ಯಗಳ ಅನುಷ್ಠಾನಕ್ಕೆ ಅಪಾರ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ. ಈ ಸಂಪನ್ಮೂಲ ಯಾವುದೇ ಸಂದರ್ಭದಲ್ಲಿ (ದಿನದ 24 ಗಂಟೆಯಲ್ಲಿ) ಜಿಲ್ಲಾಡಳಿತಕ್ಕೆ ಲಭ್ಯವಾಗಬೇಕಾದ ಅನಿವಾರ್ಯತೆ ಇರುವುದರಿಂದ, ಜಿಲ್ಲೆಯ ಎಲ್ಲಾ ಇಲಾಖೆಗಳ, ಯಾವುದೇ ಅಧಿಕಾರಿ, ನೌಕರರಿಗೂ ದೀರ್ಘಕಾಲದ ರಜೆ ಇರುವುದಿಲ್ಲ ಹಾಗೂ ಅನುಮತಿಯಿಲ್ಲದೇ ಕೇಂದ್ರಸ್ಥಾನವನ್ನು ಬಿಡುವಂತಿಲ್ಲ.
ಅನಿವಾರ್ಯ ಸಂದರ್ಭದಲ್ಲಿ ಪರಿಸ್ಥಿತಿಯ ವಾಸ್ತವತೆಯನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಅನುಮತಿ ಪಡೆದು ಕ್ರಮಕೈಗೊಳ್ಳಬಹುದಾಗಿದೆ. ತಪ್ಪಿದಲ್ಲಿ ಚುನಾವಣಾ ಕಾಯಿದೆ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ. ಹೆಚ್.ಎನ್. ಗೋಪಾಲಕೃಷ್ಣ ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿನಿ ನಾಪತ್ತೆ
ಹಾಸನ: ನಗರದ ಸರ್ಕಾರಿ ಎಲ್.ವಿ. ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಉದಯಗಿರಿಯಲ್ಲಿರುವ ಒಬಿಸಿ ಹಾಸ್ಟೆಲ್‌ನಲ್ಲಿದ್ದ ಆರ್. ಅಪೂರ್ವ (17) ಇತ್ತೀಚೆಗೆ ಹಾಸ್ಟೆಲ್‌ನಿಂದ ಹೊರಗೆ ಹೋದವಳು ಊರಿಗೂ ಬಾರದೆ ವಾಪಸ್ ಹಾಸ್ಟೆಲ್‌ಗೂ ಹೋಗದೆ ನಾಪತ್ತೆಯಾಗಿದ್ದಾರೆ. 4.6 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ, ಇಂಗ್ಲೀಷ್ ಮಾತನಾಡುತ್ತಾಳೆ. ನೀಲಿ ಜೀನ್ಸ್ ಪ್ಯಾಂಟ್ ಮತ್ತು ಬಿಳಿ ಟೀ ಶರ್ಟ್ ಧರಿಸಿದ್ದಳು ಎಂದು ರಮೇಶ್ ಎಂಬುವರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಈ ಹುಡುಗಿಯ ಬಗ್ಗೆ ಮಾಹಿತಿ ಇದ್ದರೆ 08172-268845 ಸಂಪರ್ಕಿಸಬಹುದು.
ಹಾಸನಾಂಬ ದಂತ ವಿದ್ಯಾಲಯಕ್ಕೆ ಎರಡು ರ್ಯಾಂಕ್
ಹಾಸನ: ರಾಜೀವ್‌ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ 2012-13ನೇ ಸಾಲಿನಲ್ಲಿ ನಡೆಸಿದ ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಹಾಸನಾಂಬ ದಂತ ವಿದ್ಯಾಲಯ ಎರಡು ರ್ಯಾಂಕ್ ಗಳಿಸಿದೆ. ವಿದ್ಯಾರ್ಥಿನಿ ಡಾ. ಅಂಜು ಅನುಜೋಸ್ (ಒರಲ್ ಮೆಡಿಸಿನ್), 4ನೇ ರ್ಯಾಂಕ್‌ಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿನಿ ಡಾ. ಪ್ರಿಯದರ್ಶಿನಿ ಅವರು ಕೆರೂರ್ (ಓರಲ್ ಸರ್ಜರಿಯಲ್ಲಿ) 10ನೇ ರ್ಯಾಂಕ್ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರನ್ನು ಕಾಲೇಜಿನ ಪಾಧ್ಯಾಪಕರು ಹಾಗೂ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.
ನೇತ್ರ ಉಚಿತ ತಪಾಸಣೆ
ಅರಸೀಕೆರೆ: ಸ್ನೇಹ ಸರೋವರ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರಿನ ಪುನರ್‌ಜ್ಯೋತಿ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಪಟ್ಟಣದ ಶಾರದಾ ಆಂಗ್ಲಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಆಧುನಿಕ ಶಸ್ತ್ರ ಚಿಕಿತ್ಸೆ ಹಾಗೂ ಐಒಎಲ್ ಅಳವಡಿಕೆ ಶಿಬಿರದ ಪ್ರಯೋಜನವನ್ನು ನೂರಾರು ಮಂದಿ ಪಡೆದರು. ಕಾರ್ಯಕ್ರಮ ಉದ್ಘಾಟಿಸಿದ ನೇತ್ರ ತಜ್ಞ ಡಾ. ರಾಘು ಮಾತನಾಡಿ, ಮನುಷ್ಯ ಹಣಗಳಿಸಲು ನೀಡುತ್ತಿರುವ ಆಸಕ್ತಿಯನ್ನು ತನ್ನ ಆರೋಗ್ಯದ ಕಡೆ ಗಮನ ಹರಿಸದೇ ಇರುವುದರಿಂದ ಬಹಳ ಬೇಗನೇ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾನೆ ಎಂದು ವಿಷಾದಿಸಿದರು. ಆರೋಗ್ಯ ವಂತ ಸಮಾಜದಿಂದ ಮಾತ್ರ ಸದೃಢ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದರು.
ಬಿಜೆಪಿ ಮುಖಂಡ ರಮೇಶ್‌ಗೆ ಸನ್ಮಾನ
ಆಲೂರು: ಆಲೂರು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಭಾರತೀಯ ಜನತಾ ಪಕ್ಷದ ಮುಖಂಡ ಎ.ಹೆಚ್. ರಮೇಶ್ ಅವರನ್ನು ಬುಧವಾರ ಆಲೂರು, ಕಟ್ಟಾಯ ಮಂಡಲ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಕೆ.ಆರ್. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಗಣೇಶ್ ಹೊನ್ನವಳ್ಳಿ, ಕೆ.ಸಿ. ಪೂವಯ್ಯ, ಪಿ.ಎಲ್. ಶೇಖರ್, ನಗರ ಘಟಕದ ಅಧ್ಯಕ್ಷ ಹೇಮಂತ್ ಇತರರಿದ್ದರು.