ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನಕ್ಕೆ 'ಬ್ರೆ ೈಟೊ' ಸಹಕಾರಿ
ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ Brighto-14 ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಕೆ. ಶಾರದ ಮಾತನಾಡಿ, 1980ರಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಪ್ರಾರಂಭವಾಗಿ, ಇಂದು ಕಾಲೇಜಿನ ಅತಿ ದೊಡ್ಡ ವಿಭಾಗವಾಗಿ ಬೆಳೆದಿದೆ. ಈ ವಿಭಾಗದ 20 ವಿದ್ಯಾರ್ಥಿನಿಯರು ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ರ್ಯಾಂಕ್‌ಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಯರ ಪ್ರತಿಭೆಯನ್ನು ಅನಾವರಣಗೊಳಿಸಲು ಇದು ವೇದಿಕೆಯಾಗಿದೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಆತ್ಮ ವಿಶ್ವಾಸ, ಸೃಜನಶೀಲತೆ ವ್ಯಕ್ತಪಡಿಸಬೇಕೆಂಬ ಆಶಯ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಜೆ. ಶೈಲಜಾಕುಮಾರಿ ಮಾತನಾಡಿ, ಕಾಲೇಜು ಬೆಳೆದು ಬಂದ ದಾರಿಯನ್ನು ಪರಿಚಯಿಸುತ್ತಾ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಈ ಕಾಲೇಜು ಸಾಮಾಜಿಕ ಜವಾಬ್ದಾರಿ ಹೊಂದಿರುವುದಲ್ಲದೇ, ವಿದ್ಯಾರ್ಥಿನಿಯರಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ ಎಂದರು.
ಉತ್ತಮ ಉಪನ್ಯಾಸಕರುಗಳಿಂದ ಸಾಮಾಜಿಕ ಮೌಲ್ಯಗಳಲ್ಲದೇ, ನಾಯಕತ್ವ ಗುಣ, ಮಾರುಕಟ್ಟೆ ಜ್ಞಾನ, ಹಣಕಾಸು ವ್ಯವಹಾರ, ಸಾಮಾಜಿಕ ಸಂಬಂಧಗಳನ್ನು ಪಡೆಯುತ್ತಿದ್ದಾರೆ. ಶಿಕ್ಷಣದ ಬಗ್ಗೆ ದೂರದೃಷ್ಟಿ ಹಾಗೂ ಗುರಿ ಹೊಂದಿರಬೇಕು ಎಂದು ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ ಅಬ್ದುಲ್ ಕಲಾಂ ಅವರ ನುಡಿಗಳನ್ನು ಶೈಲಜಾ ಕುಮಾರಿ ಉದ್ಧರಿಸಿದರು.
ಹಾರೈಕೆ: ಆರ್. ಶೇಷಗಿರಿ ಮಾತನಾಡಿ, ಇಂದು ಪ್ರಾಯೋಗಿಕವಾಗಿ ಈ ಕಾರ್ಯಕ್ರಮವನ್ನು ಮೊದಲ ಸಲ ಆರಂಭಿಸಿದ್ದು, ಮುಂದೆ ಜಿಲ್ಲಾ ಮಟ್ಟದಲ್ಲಿ ಕೀರ್ತಿ ಹೊಂದಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಉಪಾಧ್ಯಕ್ಷ ಬಿ.ಆರ್.ಗುರುದೇವ್ ಮಾತನಾಡಿ, ವಿದ್ಯಾರ್ಥಿಗಳ ಬುದ್ಧಿವಂತಿಕೆಯನ್ನು, ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುವ ಈ ಕಾರ್ಯಕ್ರಮವನ್ನು ಬೇರೆ- ಬೇರೆ ಕಾಲೇಜುಗಳಲ್ಲಿ ಆಯೋಜಿಸಿದಾಗ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದು ತಂದಿರುವುದು ಸಂತೋಷ ತಂದಿದೆ.
ಈ ವರ್ಷ ಬೇರೆ- ಬೇರೆ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಬಂದು ನಮ್ಮ ವಿದ್ಯಾರ್ಥ್ಥಿಗಳೊಂದಿಗೆ ಸ್ಪರ್ಧಿಸಿ ಬಹುಮಾನ ಗೆಲ್ಲಲಿ ಎಂದು ಹಾರೈಸಿದಲ್ಲದೇ, ಇಂತಹ ವಿನೂತನ ಕಾರ್ಯಕ್ರಮಗಳ ಮೂಲಕ ನಮ್ಮ ಕಾಲೇಜು ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯ ಮಟ್ಟದಲ್ಲಿ ರಾರಾಜಿಸಲಿ ಎಂದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ. ಚಂದ್ರೇಗೌಡ ಹಾಗೂ ಪ್ರೊ. ಬಾಲರಾಜೇಗೌಡ ಇದ್ದರು.
ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು. ಗಾಮಿನಿ ಜೈನ್ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರೊ.ಕೆ.ಎಸ್. ಚಂದ್ರೇಗೌಡ ಸ್ವಾಗತಿಸಿದರು.