ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಡೇ ಚುನಾವಣೆ ಎನ್ನುತ್ತಲೇ ಅಖಾಡಕ್ಕೆ

Vishwanath S
Updated On : 17 Mar 2014, 1:29 am

ಚನ್ನರಾಯಪಟ್ಟಣ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಳೆದ ಮೂರು ಲೋಕಸಭೆ ಚುನಾವಣೆಯ ಸಂದರ್ಭಗಳಿಂದಲೂ 'ಇದು ತನ್ನ ಕಡೆಯ ಚುನಾವಣೆ' ಎಂದು ಜನತೆಯನ್ನು ನಂಬಿಸಿ ಚುನಾವಣೆಗೆ ನಿಲ್ಲುತ್ತಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಆರೋಪಿಸಿದರು.  
ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಭಾರತ್ ನಿರ್ಮಾಣ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ ಜನತೆ ದೇವೇಗೌಡ ಅವರನ್ನು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮಾಡಿದರು. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲೆಲ್ಲಾ ಇದೇ ನನ್ನ ಕಡೆಯ ಚುನಾವಣೆ ಎಂದು ಜನತೆಯನ್ನು ನಂಬಿಸಿ, ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು.
ಗೇಲಿ: ಒಮ್ಮೆ ಪ್ರಧಾನಿಯಾದ ಮೇಲೂ ದೇವೇಗೌಡರಿಗೆ ಚುನಾವಣೆ ಆಸೆ ಏಕೆ ಬಂತೋ ತಿಳಿಯದಾಗಿದೆ ಎಂದ ಮಂಜು, ಅವರು ಚುನಾವಣೆಯಲ್ಲಿ ಗೆದ್ದು ಮತ್ಯಾವ ಹುದ್ದೆಗೇರಬೇಕಾಗಿದೆ ಎಂದು ಗೇಲಿ ಮಾಡಿದರು.
ಆರೋಪ: ದೇವೇಗೌಡ ಅವರಿಗೆ ಜಿಲ್ಲೆಯ ಜನತೆ ರಾಜಕೀಯದಲ್ಲಿ ಉನ್ನತಮಟ್ಟಕ್ಕೇರಿಸಿದರೂ ಜಿಲ್ಲೆಗೆ ಅವರ ಕೊಡುಗೆ ಶೂನ್ಯವಾಗಿದ್ದು, ತಮ್ಮ ರಾಜಕೀಯ ಭವಿಷ್ಯ ನೀಡಿದ ದಂಡಿಗನಹಳ್ಳಿ ಹೋಬಳಿ ಜನತೆಗೆ ಕಳೆದ 20 ವರ್ಷದಿಂದ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯಿಂದ ನೀರೆತ್ತುವ ಕಾರ್ಯ ಮಾಡಿಲ್ಲ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನೀರಾವರಿ ಮಂತ್ರಿಯಾದರೂ ಅವರು ಜಿಲ್ಲೆಗೆ ಯಾವ ಕೊಡುಗೆ ನೀಡಿಲ್ಲ. ಅವರ ಕೊಡುಗೆ ಏನಿದ್ದರೂ ತುಮಕೂರು ಜಿಲ್ಲೆಗೆ ಮಾತ್ರವಾಗಿದೆ. ಜಿಲ್ಲೆಯಲ್ಲಿ 1.2 ಲಕ್ಷ ಎಕರೆ ನೀರಾವರಿ ಪ್ರದೇಶವಿದ್ದರೆ, ತುಮಕೂರಿನಲ್ಲಿ 3.5ಲಕ್ಷ ಎಕರೆ ನೀರಾವರಿ ಮಾಡಿದ್ದಾರೆ ಜಿಲ್ಲೆಗೆ ಇವರು ಮಾಡಿರುವ ಮೋಸದಲ್ಲಿ ಇದು ಕೂಡ ಒಂದಾಗಿದೆ ಎಂದು ತಿಳಿಸಿದರು.
ಕಾರ್ಖಾನೆ ಮಾರಾಟ: ಜಿಲ್ಲೆಯಲ್ಲಿ ರೈತರ ಹಿತ ಕಾಪಾಡುತ್ತಿದ್ದ ಏಕೈಕ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಿ ಉಳಿಸಿಕೊಂಡಿದ್ದ ಆಸ್ತಿಯನ್ನು  ಶಿಕ್ಷಣ ಟ್ರಸ್ಟ್ ಹೆಸರಿನಲ್ಲಿ ಬೆಲೆ ಬಾಳುವ 5 ಎಕರೆ ಭೂಮಿಯನ್ನು ಕಬಳಿಸಲು ಮುಂದಾದ ಸಂದರ್ಭದಲ್ಲಿ ವಿರೋಧ ಪಕ್ಷದವರ ಹೋರಾಟದಿಂದ ಭೂಮಿ ಉಳಿದಿದೆ ಎಂದರು.
3ನೇ ಸಂದರ್ಭ ಬಂದಿದೆ: ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ಬಡವರು ತಿರುಗಿ ಬಿದ್ದರೆ ದೇವೇಗೌಡ ಅವರು ಏನಾಗುತ್ತಾರೆ ಎಂಬುದನ್ನು ಎರಡು ಬಾರಿ ದೇವೇಗೌಡರಿಗೆ ಜಿಲ್ಲೆಯ ಜನತೆ ತೋರಿಸಿದ್ದಾರೆ. ಮೂರನೇ ಸಂದರ್ಭ ಈಗ ಒದಗಿ ಬಂದಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲಿತಮ್ಮ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಸ್.ಎಂ ಆನಂದ್,ಕಾಂಗ್ರೆಸ್ಮುಖಂಡರಾದ ಎಚ್.ಕೆ ಮಹೇಶ್, ಎಚ್.ಕೆ. ಜವರೇಗೌಡ, ಶೇಷೇಗೌಡ, ತಾಲೂಕು ಮುಖಂಡರಾದ ಚಂದ್ರೇಗೌಡ, ಗೋಪಾಲಸ್ವಾಮಿ, ಚಂದ್ರಶೇಖರ್, ಕಬ್ಬಳಿ ರಂಗೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಂಗಸ್ವಾಮಿ, ನಂಜುಂಡೇಗೌಡ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement