ಜೆಡಿಎಸ್ ಕೊನೆಗಾಣಿಸುವ ಕಾಲವೀಗ ಕೂಡಿ ಬಂದಿದೆ
ಸಕಲೇಶಪುರ: ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಜೆಡಿಎಸ್ ಪಾಳೆಗಾರಿಕೆ ಕೊನೆ ಗಾಣಿಸಲು ಕಾಲ ಕೂಡಿ ಬಂದಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಭಾನುವಾರ ಪಟ್ಟಣದ ಗುರುವೇಗೌಡ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದ್ದ ಭಾರತ ನಿರ್ಮಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿ, ಜಾತಿ ಒಲೈಕೆ ರಾಜಕಾರಣ ಮಾಡುತ್ತ ಕಾಲ ಕಳೆಯುತ್ತಿರುವ ಜೆಡಿಎಸ್ ನಾಯಕರಿಗೆ ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಕಾರ್ಯಕರ್ತರು ಪಣತೊಡ ಬೇಕು. ಅಲ್ಲದೆ ಜೆಡಿಎಸ್‌ನವರ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ಕರ್ತರು ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಬಿ.ಶಿವರಾಂ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅತ್ಯುತ್ತಮ ಯೋಜನೆಗಳನ್ನು ಜನರಿಗೆ ಮನವರಿಕೆಯಾಗುವ ರೀತಿಯಲ್ಲಿ ಕಾರ್ಯಕರ್ತರು ಹೇಳುವ ಮೂಲಕ ಮತಯಾಚಿಸ ಬೇಕು ಎಂದರು. ಲೋಕಸಭಾ ಅಭ್ಯರ್ಥಿ ಎ.ಮಂಜು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಗುರುವೇಗೌಡ ಕಲ್ಯಾಣ ಮಂಟಪ ವರೆಗೆ ಪಾದಯಾತ್ರೆ ನಡೆಸಲಾಯಿತು.
ವೇದಿಕೆಯಲ್ಲಿ ಮಾಜಿ ಶಾಸಕ ಪುಟ್ಟೆಗೌಡ, ಎಚ್.ಎಂ ವಿಶ್ವನಾಥ್, ರಾಜ್ಯಸಭಾ ಮಾಜಿ ಸದಸ್ಯ ಜವರೇಗೌಡ, ಕಾಂಗ್ರೆಸ್ ವೀಕ್ಷಕಿ ಮಲ್ಲಿಕಾ ವೀರೇಶ್‌ಮುಂತಾದವರಿದ್ದರು.
ದೇವೇಗೌಡರ ಗೆಲವು ಖಚಿತ: ರೇವಣ್ಣ
ಆಲೂರು: ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಅತ್ಯಧಿಕ ಮತಗಳಿಂದ ಜಯಶೀಲರನ್ನಾಗಿಸಬೇಕೆಂದು ಎಚ್.ಡಿ.ರೇವಣ್ಣ ಮನವಿ ಮಾಡಿದರು.
ಪಟ್ಟಣದ ಗಣಪತಿ ಸಮುದಾಯ ಭವನದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿಗೊಳ್ಳಲೆಂದು ಮಂಗಳೂರು ಬಂದರು ಹಾಗು ಚೆನ್ನೈಬಂದರನ್ನು ಸಂಪರ್ಕಿಸಲು ಬೆಂಗಳೂರು- ಮಂಗಳೂರು ರೈಲ್ವೆ ಕಾರ್ಯ ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
ದೇವೇಗೌಡರ ಕಾಲದಲ್ಲಿ ಪ್ರಾರಂಭವಾದ ಹಲವಾರು ಜನಪರ ಯೋಜನೆಗಳು ಅಪೂರ್ಣಗೊಂಡು ನೆನೆಗುದಿಗೆ ಬಿದ್ದಿವೆ. ಇದು ಕೇಂದ್ರ ಸರ್ಕಾರ ನಿರಂತರವಾಗಿ ರಾಜ್ಯವನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು. ಕೆಲವರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಾ ದೇವೇಗೌಡರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ ಅವರ ವಿರುದ್ಧ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳು ಇಲ್ಲದೆ ಹಾಲಿ ಶಾಸಕರನ್ನು ಕಣಕ್ಕಿಳಿಸಿದ್ದಾರೆ. ಆದರೆ ಮತದಾರರು ಜಾಗೃತರಾಗಿದ್ದು ಈ ಬಾರಿ ಜೆಡಿಎಸ್ ಬೆಂಬಲಿಸ ಬೇಕೆಂದು ಮನವಿ ಮಾಡಿದರು. ಶಾಸಕ ಕುಮಾರಸ್ವಾಮಿ ಮಾತನಾಡಿ ಅಭಿವೃದ್ಧಿಯ ಹರಿಕಾರ ದೇವೇಗೌಡರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೇರಿಸಲು ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗೊತ್ತಿ ಶ್ರಮಿಸಬೇಕು ಎಂದರು.
ಪಟೇಲ್ ಶಿವರಾಮ್, ರಾಜಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಕರೀಗೌಡ, ರಾಜೇಗೌಡ, ನಂಜುಂಡಪ್ಪ, ಜಿಪಂ ಮತ್ತಿತರರು ಇದ್ದರು.