ದೇವೇಗೌಡರನ್ನು ಸೋಲಿಸುವುದೇ ಗುರಿ
ಕನ್ನಡಪ್ರಭ ವಾರ್ತೆ, ಅರಸೀಕೆರೆ, ಮಾ 16
ಸಚಿವ ಸ್ಥಾನಕ್ಕಿಂತ ದೇವೇಗೌಡರನ್ನು ಸೋಲಿಸುವುದೇ ನನ್ನ ಗುರಿ ಎಂದು ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಅರಕಲಗೂಡು ಎ.ಮಂಜು ತಿಳಿಸಿದರು.
ಪಟ್ಟಣಕ್ಕೆ ಆಗಮಿಸಿದ್ದ ಅವರು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಬಿ.ಗುರುಸಿದ್ದೇಶ್ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವ ಪದವಿ ಯಾವಾಗ ಬೇಕಾದರೂ ದೊರೆಯಬಹುದು. ಆದರೆ ಮಾಜಿ ಪ್ರಧಾನಿಯನ್ನು ಸೋಲಿಸುವಂತಹ ಸೌಭಾಗ್ಯ ಯಾವಾಗಲೂ ದೊರೆಯವುದಿಲ್ಲ ಎಂದರು. ಮುಖ್ಯಮಂತ್ರಿ, ಪ್ರಧಾನಿಯಾಗಿ, ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದರೂ ಜಿಲ್ಲೆಯ ರಸ್ತೆಗಳ ಗತಿ ನೋಡಿದರೆ ನಾಚಿಕೆಯಾಗುತ್ತದೆ. ಯಾವುದೇ ಜನಪರ ಕಾರ್ಯಕ್ರಮಗಳ ಜಾರಿಗೆ ದೇವೇಗೌಡರ ಕುಟುಂಬದ ವಿರೋಧ ಇದ್ದೇ ಇದೆ. ಇದನ್ನು ಪರಿಗಣಿಸದೇ ಮತದಾರರು ತಮ್ಮನ್ನು ಈ ಬಾರಿ ಬೆಂಬಲಿಸಿ ಬಾರಿ ಅಂತರದಲ್ಲಿ ಆಯ್ಕೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುವುದಿಲ್ಲ ಬದಲಾಗಿ ಜಾತಿ ವೈಷಮ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಅಂಶ ತಮ್ಮ ಗಮನಕ್ಕೆ ಬಂದಿದೆ. ಆದ್ದರಿಂದಲೇ ಶಿವಲಿಂಗೇಗೌಡರ ಗೆಲುವು ಸಾಧ್ಯವಾಗಿದೆ. ಇಂತಹ ಕಾರ್ಯಗಳಲ್ಲಿ ಅವರು ಭಾಗಿ ಯಾದ್ದಾರೆಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಇಂತಹ ವ್ಯಕ್ತಿಗಳಿಗೆ ಮತ ನೀಡಿರುವುದು ದುರದುಷ್ಟಕರ ಸಂಗತಿ ಎಂದರು.
ಇಬ್ಬರು ಮುಖ್ಯ ಮಂತ್ರಿ ಹಾಗೂ ಪ್ರಧಾನಿಯನ್ನು ನೀಡಿದ ಹಾಸನ ಜಿಲ್ಲೆಗೆ ಅವರ ಕೊಡುಗೆ ಏನೆಂಬುದನ್ನು ಮೊದಲು ಬಹಿರಂಗ ಪಡಿಸಲು ತಾವು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಎಲ್ಲರನ್ನು ಭೇಟಿ ಮಾಡಿ ಮತ ಯಾಚಿಸುವುದು ತಮ್ಮ ಆದ್ಯ ಕರ್ತವ್ಯವಾಗಿದೆ. ಹಳೆಯ ಹಾಗೂ ನೂತನ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೋರುತ್ತಿದ್ದೇನೆ. ಇದು ತಮ್ಮ ಜವಾಬ್ದಾರಿ ಕೂಡ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಾಜಿ ಶಾಸಕ ಕೆ.ಪಿ.ಪ್ರಭು ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಗೀಜಿಹಳ್ಳಿ ಗುರುಸಿದ್ದಪ್ಪ, ಎಚ್.ಕೆ.ಮಹೇಶ್, ಜಾವಗಲ್ ಮಂಜು, ಎ.ಬಿ.ಗುರುಸಿದ್ದೇಶ್, ವಿಜಯಕುಮಾರ್, ಹುಲ್ಲೇಕೆರೆ ಕುಮಾರ್, ಪುಟ್ಟಣ್ಣ ಸೇರಿದಂತೆ ಹಲವರು ಇದ್ದರು.