ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಲೆನಾಡಿಗೆ ದೇವೇಗೌಡರ ಕೊಡುಗೆ ಏನು?: ಎ.ಮಂಜು

Vishwanath S
Updated On : 17 Mar 2014, 1:30 am

ಸಕಲೇಶಪುರ: ಮಲೆನಾಡು ಜನತೆಯ ಬೆಂಬಲ ಪಡೆದು ಅಧಿಕಾರ ಅನುಭವಿಸಿರುವ ಮಾಜಿ ಪ್ರಧಾನಿ ದೇವೇಗೌಡರು ಈ ಭಾಗಕ್ಕೆ ನೀಡಿರುವ ಕೊಡುಗೆಯೇನು ಎಂದು ಶಾಸಕ ಎ.ಮಂಜು ಪ್ರಶ್ನಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಆಲೂರು, ಸಕಲೇಶಪುರ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಜೀವ ಹಾನಿ, ಆಸ್ತಿಪಾಸ್ತಿ ನಷ್ಟ, ರಸ್ತೆ ಸಮಸ್ಯೆ ಒಳಗೊಂಡಂತೆ ಹಲವು ಸಮಸ್ಯೆಗಳಿದ್ದರೂ ಈವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಮಲೆನಾಡು ಜನರ ಬೆಂಬಲ ಪಡೆದೆವೆಂದು ಹೇಳಿಕೊಂಡರಷ್ಟೆ ಸಾಲದು. ತಮ್ಮನ್ನು ಮೇಲೆತ್ತಿದವರಿಗೆ ಏನು ಕೊಡುಗೆ ನೀಡಿದ್ದೇವೆಂದು ಗೌಡರು ಆತ್ಮಾವ ಲೋಕನ ಮಾಡಿಕೊಳ್ಳಬೇಕು ಎಂದರು.
ಈ ಭಾಗದ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಎಂದಿಗೂ ಸದನದಲ್ಲಿ ಧ್ವನಿಯೆತ್ತದ ದೇವೇಗೌಡರು ನನಗೆ ಸದನದಲ್ಲಿ ಮಾತನಾಡಲು ಸಮಯ ನೀಡಿಲ್ಲ ಎಂದು ಗೋಗರೆದು ಜನರ ಕಣ್ಣಿಗೆ ಮಣ್ಣೆರೆಚುವ ನಾಟಕ ಆಡುತ್ತಿದ್ದಾರೆ ಎಂದು ಹೇಳಿದರು.
ಸದನದಲ್ಲಿ ವಿಷಯದ ಬಗ್ಗೆ ಮಾತನಾಡಲು ಪ್ರಶ್ನೆಗಳನ್ನು ಬರೆದು ನೀಡಬೇಕು. ಆಗ ಮಾತ್ರ ಸಮಯ ನೀಡಲಾಗುವುದು. ಆದರೆ ಗೌಡರು ಈವರೆಗೂ ಯಾವುದೇ ಪ್ರಶ್ನೆಗಳನ್ನು ಮುಂಚಿತ ಬರೆದು ಕೊಟ್ಟಿಲ್ಲ  ಎನ್ನುವುದು ಸತ್ಯ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 35 ಆನೆಗಳನ್ನು ಹಿಡಿಯಲು ನ್ಯಾಯಾಲಯ ಅನುಮತಿ ನೀಡಿದ್ದು ಈಗಾಗಲೇ 8 ಕಾಡಾನೆಗಳನ್ನು ಹಿಡಿಯಲಾಗಿದೆ. ಕಾರ್ಯಾಚರಣೆಯ ಸಂಪೂರ್ಣ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಆದರೆ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿದ್ದೇವೆಂದು ಹೇಳಿಕೊಳ್ಳುವ ಜೆಡಿಎಸ್, ಆನೆಗಳನ್ನು ಹಿಡಿಯುವ ವಿಚಾರದಲ್ಲಿ ಸರ್ಕಾರಕ್ಕೆ ಒತ್ತಡ ತರುವ ಪ್ರಯತ್ನವನ್ನೇ ಮಾಡಿಲ್ಲ. ಜನರ ಬಗ್ಗೆ ಕಾಳಜಿ ಇಲ್ಲದವರು ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಸೆಳೆಯಲಷ್ಟೇ ರಾಜಕಾರಣ ಮಾಡುವುದು ನ್ಯಾಯೋಚಿತವಲ್ಲ. ಎಲ್ಲಾ ವಿಚಾರ ಅರಿತಿರುವ ಮತದಾರರು ಈ ಚುನಾವಣೆಯಲ್ಲಿ ದೇವೇಗೌಡರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಜಾಫರ್‌ಷರೀಫ್ ಹೇಳಿಕೆಯಲ್ಲಿ ಸ್ವಾರ್ಥವಿದೆ. ಗೌಡರ ವಿರುದ್ಧ ಯಾರನ್ನೂ ಕಣಕ್ಕಿಳಿಸ ಬಾರದೆಂಬ ಅವರ ಹೇಳಿಕೆ ವೈಯಕ್ತಿಕವೇ ಹೊರತು ಪಕ್ಷದ್ದಲ್ಲ. ಆ ಮಾತನ್ನು ಶರೀಫರು 1996 ರಲ್ಲಿಯೇ ಹೇಳಿದ್ದರೆ ಒಪ್ಪಿಕೊಳ್ಳಬಹುದಿತ್ತು. ಚುನಾವಣೆ ಸಂದರ್ಭದಲ್ಲಿ ಓಲೈಕೆ ಮಾತುಗಳನ್ನಾಡಿರುವುದರಲ್ಲಿ ಮರ್ಮವಿದ್ದಂತಿದೆ ಎಂದು ಸಂಶಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement