ಶಾರ್ಟ್ಸರ್ಕ್ಯುಟ್ನಿಂದ ಬೆಳೆ ನಾಶ
ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿ ಶುಕ್ರವಾರಸಂತೆ ಮತ್ತು ಯಡವರಹಳ್ಳಿ ಗ್ರಾಮದ ಗಡಿ ಭಾಗದ ಕುರುಭತೂರು ಗ್ರಾಮದ ತೋಟದಲ್ಲಿ ವಿದ್ಯುತ್ಶಾರ್ಟ್ ಸರ್ಕ್ಯುಟ್ ಉಂಟಾಗಿ 5 ರಿಂದ 6 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿರುವ ಘಟನೆ ಶನಿವಾರ ನಡೆದಿದೆ.
ಸರ್ವೇ ನಂ 22 ರಲ್ಲಿರುವ ಲೋಕೇಶ್ ಯಡವರಹಳ್ಳಿ ಗ್ರಾಮದ ಯೋಗೇಶ್ ಎಂಬುವರ ತೋಟದಲ್ಲಿ ಸಕಲೇಶಪುರದಿಂದ ಯಸಳೂರಿಗೆ ಹಾದೂ ಹೋಗಿರುವ ವಿದ್ಯುತ್ ಪ್ರೈಮರಿ ಲೈನ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ಉಂಟಾಗಿದೆ. ಇದರಿಂದ ಸುಮಾರು 5 ರಿಂದ 6 ಎಕರೆ ತೋಟದಲ್ಲಿ 4 ವರ್ಷದ ಕಾಫಿಗಿಡಗಳು, ಬಾಳೆ, ಕಿತ್ತಳೆ, ಕಾಳು ಮೆಣಸು, ಸುಟ್ಟು ಭಸ್ಮವಾಗಿದೆ. ಇದರಿಂದ 10 ಲಕ್ಷ ರು. ನಷ್ಟು ಬೆಳೆ ಹಾನಿಯಾಗಿದೆ.
ಕಳೆದ ಮೂರು ನಾಲ್ಕು ವರ್ಷದಿಂದ ಆಗಿಂದಾಗ್ಗೆ ಇಂಥ ಘಟನೆಯಾಗುತ್ತಿದ್ದು, ಇದರ ಬಗೆ ಕೆಇಬಿ ಎಇಇ ಮತ್ತ ಜೆಇಗಳಿಗೆ ದೂರು ನೀಡಿದ್ದರೂ ಗಮನ ಹರಿಸಿದ ಪರಿಣಾಮ ಈಗ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತೋಟದ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದಾರೆ.
ಈ ಲೈನನ್ನು ತೋಟದ ಪಕ್ಕದಲ್ಲಿರುವ ಸಕಲೇಶಪುರ ಬೈದೂರು ರಸ್ತೆ ಬದಿಗೆ ವರ್ಗಾಯಿಸಲು ಎರಡು ತಿಂಗಳ ಹಿಂದೆ ನೂತನ ಲೈನ್ ನಿರ್ಮಿಸಿದ್ದು ಇದುವರೆಗೂ ವರ್ಗಾಯಿಸಿಲ್ಲ ಮತ್ತು ಈ ಘಟನೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಒಬ್ಬ ಲೈನ್ಮನ್ ಸಹ ಸ್ಥಳಕೆ ಭೇಟಿ ನೀಡಿಲ್ಲ ಮಾಲೀಕರು ದೂರಿದ್ದಾರೆ.
ದೇಗುಲ ಜೀರ್ಣೋದ್ಧಾರಕ್ಕೆ ಲಕ್ಷ ರು. ದೇಣಿಗೆ
ಹಾರನಹಳ್ಳಿ: ಇಲ್ಲಿನ ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಶ್ರೀ ಕಲ್ಲೇಶ್ವರ ದೇವಾಲಯ ಜೀರ್ಣೋದ್ಧಾರ ನಡೆಯುತ್ತಿದ್ದು, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆಯಿಂದ 1 ಲಕ್ಷ ರು. ದೇಣಿಗೆ ನೀಡಲಾಯಿತು.
ದೇಣಿಗೆಯನ್ನು ಕಲ್ಲೇಶ್ವರ ದೇವಾಲಯ ಸಮಿತಿ ಸದಸ್ಯರಿಗೆ ತಾಲೂಕಿನ ಧರ್ಮಸ್ಥಳ ಸಂಘದ ಯೋಜನೆ ಅಧಿಕಾರಿ ಚನ್ನಪ್ಪಗೌಡ ನೀಡಿದರು.
ವೀರೇಂದ್ರ ಹೆಗ್ಗಡೆಯವರಿಗೆ ಸಮಿತಿ ಸದಸ್ಯರು ದೇಣಿಗೆ ನೀಡುವಂತೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಲಕ್ಷ ರು. ಚೆಕ್ ನೀಡಲಾಯಿತು. ಧರ್ಮಸ್ಥಳ ಸ್ವಸಹಾಯ ಸಂಘದಿಂದ ಗ್ರಾಮಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಚನ್ನಪ್ಪಗೌಡ ತಿಳಿಸಿದರು.
ಹಾರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಮುನ, ವಲಯ ಮೇಲ್ವಿಚಾರಕಿ ನಮ್ರತ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಲಲಿತ, ಕಲ್ಲೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿ ಸದಸ್ಯ ಎಚ್.ಎಂ. ಜಗದೀಶ್, ರಾಜಣ್ಣ, ಮಲ್ಲಿಕಪ್ಪ, ಮೋಹನ್, ಈಶ್ವರಯ್ಯ, ಮಲ್ಲಿಕಾರ್ಜುನಯ್ಯ, ಸೇವಾ ಪ್ರತಿನಿಧಿ ಎಸ್. ಪಿ.ಪಂಕಜ, ಚಂದನ ಇತರರು ಇದ್ದರು.
ಇಂದಿನಿಂದ ಮಹದೇಶ್ವರ ಜಾತ್ರೆ
ಹಾರನಹಳ್ಳಿ: ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಮಾರ್ಚ್ 17,18 ಹಾಗೂ 19 ರಂದು ಮಹದೇಶ್ವರ ಜಾತ್ರಾಮಹೋತ್ಸವ ನಡೆಯಲಿದೆ.
ಮಾ. 17 ರಂದು ಹುಣ್ಣಿಮೆ ಕಟ್ಟಳೆ, ಜಗದ್ಗುರು ಜಂಗಮ ಮಹಾ ಪೂಜೆ, ಕೋಡಿಮಠ ಪೀಠ ಅಲಂಕರಿಸಿದ 55 ಜಂಗಮವರ್ಯರ ದಿವ್ಯ ಸ್ಮರಣಾರ್ಥ ಕರ್ತ ಗದ್ದುಗೆ ಮಹಾಪೂಜೆ, ಧ್ವಜಾರೋಹಣ, ಸಿಂಹಾಸನ ಪೂಜೆ, ರಜತ ಪಲ್ಲಕ್ಕಿ ಪೂಜೆ, 1101 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಹಾನಗಲ್ ತಾಲೂಕು ಬೊಮ್ಮನಹಳ್ಳಿ ವಿರಕ್ತ ಮಠದ ಶಿವಯೋಗಿ ಸ್ವಾಮೀಜಿ ಪಟ್ಟಾಧಿಕಾರದ 15ನೇ ಮಹೋತ್ಸವದ ಅಂಗವಾಗಿ ಅಭಿನಂದನೆ ಸಮರ್ಪಣೆ ಹಾಗೂ ಗದಗದ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅಸುಂಡಿ ಧರ್ಮ ಪ್ರವಚನ ನೀಡಲಿದ್ದಾರೆ.
ಮಾ. 18 ರಂದು ಬೆಳಿಗ್ಗೆ ಮಠದಲ್ಲಿ ಪುರಾಣ ಶ್ರವಣ, 19ರಂದು ಬೆಳಗ್ಗೆ 6.30ಕ್ಕೆ ಶಿವಲಿಂಗ ಸ್ವಾಮಿ ಗದ್ದುಗೆಗೆ ರುದ್ರಾಭಿಷೇಕ, ಮ 12 ಗಂಟೆಗೆ ಮಹದೇಶ್ವರ ಬೆಟ್ಟದಲ್ಲಿ ಗುಗ್ಗಳ ಸೇವೆ ಏರ್ಪಡಿಸಲಾಗಿದೆ.
ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ ನಿಡಸೂಸಿಯ ಸಿದ್ದ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಹಾವೇರಿ ಜಿಲ್ಲೆ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಇನ್ನಿತರರು ಭಾಗವಹಿಸುವರು. ರಾತ್ರಿ 10 ಕ್ಕೆ ಬೆಂಗಳೂರಿನ ಜಯಶ್ರೀ ರಾಜು ಮತ್ತು ಕಲಾ ತಂಡದಿಂದ ಚನ್ನಪ್ಪ ಚನ್ನೇಗೌಡ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ರಂಗನಾಥಸ್ವಾಮಿ ದೇಗುಲ ಜೀರ್ಣೋದ್ಧಾರ
ಹಳೇಬೀಡು: ಇಲ್ಲಿನ ಶ್ರೀರಂಗನಾಥಸ್ವಾಮಿ ದೇಗುಲವನ್ನು ಪುರಾತತ್ವ ಇಲಾಖೆ 68 ಲಕ್ಷ ರು. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಕ್ರಮ ಮಂತ್ರ ಘೋಷಣೆ, ಭಜನೆ, ಅಭಿಷೇಕ, ಹವನಹೋಮ ವಿಶೇಷ ಪೂಜೆಯೊಂದಿಗೆ ನಡೆಯಿತು. ಅರಸೀಕೆರೆ ತಿರುಪತಿ ವೆಂಕಟರಮಣ ದೇಗುಲದ ಪ್ರಧಾನ ಅರ್ಚಕ ರಾಮಪ್ರಸಾದ್ ಹಾಗೂ ಗಿರಿ ನೇತೃತ್ವ ವಹಿಸಿದ್ದರು. ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತರಾಮು ಭಾಗವಹಿಸಿದ್ದರು.
ಲೋಕ ಕಲ್ಯಾಣಾರ್ಥಮೃತ್ಯುಂಜಯ ಹೋಮ
ಬೇಲೂರು: ಪಟ್ಟಣದ ಶಿವಜ್ಯೋತಿಪಣ ಗಾಣಿಗರ ಸಂಘದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಮೃತ್ಯುಂಜಯ ಹಾಗೂ ಚಂಡಿಕಾಹೋಮ ಹಮ್ಮಿ ಕೊಳ್ಳಲಾಗಿತ್ತು. ದುರ್ಗಮ್ಮ, ಅಂತರಗಟ್ಟಮ್ಮ ಹಾಗೂ ಕೆಂಚಾಯ ಸ್ವಾಮಿ ದೇವರ ಉತ್ಸವದೊಂದಿಗೆ ಧಾರ್ಮಿಕ ಪೂಜೆ ಕೈಂಕರ್ಯಗಳು ಹಾಗೂ ಗಂಗಾ ಪೂಜೆ ನಡೆಯಿತು.
ಗ್ರಾಪಂಗೆ ಆಯ್ಕೆ
ಅರಸೀಕೆರೆ: ಬಾಣಾವರ ಸಮೀಪದ ಶ್ಯಾನೆಗೆರೆ ಗ್ರಾಮಪಂಚಾಯಿತಿಗೆ ಸೇರಿದ ಕೆಂಗುರುಬರಹಟ್ಟಿ ಮತ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 1ನೇ ಬ್ಲಾಕ್ನಿಂದ ರಾಜಪ್ಪ 332 ಮತ ಪಡೆದು 12 ತಿಂಗಳ ಅವಧಿಗೆ ಆಯ್ಕೆಯಾಗಿದ್ದಾರೆ.
ಅವರ ಪ್ರತಿಸ್ಪರ್ಧಿ ಯಶೋದಮ್ಮ ಅವರಿಗಿಂತ 42 ಮತಗಳ ಅಂತರದಿಂದ ರಾಜಪ್ಪ ಆಯ್ಕೆಯಾಗಿದ್ದಾರೆ. ಮೊದಲು ನಂಜಪ್ಪ ಸದಸ್ಯರಾಗಿದ್ದರು. ಅವರ ಅಕಾಲಿಕ ನಿಧನ ದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣಾಧಿಕಾರಿಯಾಗಿ ಬಾಣಾವರ ಪದವಿಪೂರ್ವ ಕಾಲೇಜಿನ ಉಪನ್ಯಾಸ ನಾಗರಾಜ್ ಕಾರ್ಯ ನಿರ್ವಹಿಸಿದರು.
ಪ್ರಸಿದ್ಧ ಲಕ್ಷ್ಮೀ ನರಸಿಂಹಸ್ವಾಮಿ ಗರುಡೋತ್ಸವ, ಗಜೇಂದ್ರ ಮೋಕ್ಷ
ಅರಕಲಗೂಡು: ಪಟ್ಟಣದ ಐತಿಹಾಸಿಕ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಶನಿವಾರ ರಾತ್ರಿ ಶ್ರೀಯವರಿಗೆ ಕಲ್ಯಾಣೋತ್ಸವ, ಗರುಡೋತ್ಸವ ಮತ್ತು ಗಜೇಂದ್ರ ಮೋಕ್ಷ ಧಾರ್ಮಿಕ ಕಾರ್ಯಕ್ರಮಗಳು ನಡೆದುವು. ದೇವಾಲಯದಲ್ಲಿ ಕಲ್ಯಾಣೋತ್ಸವ ನಡೆದು ನೂರಾರು ಮಂದಿ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ಪಟ್ಟಣದ ರಥ ಬೀದಿಗಳಲ್ಲಿ ಗರುಡೋತ್ಸವ ನಡೆಯಿತು. ಹೂವಿನ ಅಲಂಕಾರದೊಂದಿಗೆ ಚಾಮುಂಡೇಶ್ವರಿ ವಿದ್ಯುತಸರಬರಾಜು ನಿಗಮದಿಂದ ಉತ್ಸವ ವಿದ್ಯುತ್ ಅಲಂಕಾರಗಳಿಂದ ಕೂಡಿದ್ದು, ಆಕರ್ಷಣೀಯವಾಗಿತ್ತು.
ಹಾಸನಾಂಬ ಶಿಕ್ಷಣ ವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ
ಹಾಸನ: ಹಾಸನಾಂಬ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಡಾ. ಶಿವಲೀಲಾ ಯತೀಶ್ ಕಾರ್ಯಕ್ರಮ ಉದ್ಘಾಟಿಸಿ, ಮಹಿಳಾ ವೃತ್ತಿಪರತೆ ಹಾಗೂ ಸಮಾನತೆ ಬಗ್ಗೆ ನುಡಿದರು.
ಮುಖ್ಯ ಅತಿಥಿ ಲೇಖಕಿ ರೂಪಾ ಹಾಸನ್ ಮಾತನಾಡಿ, ಹೆಣ್ಣಿನ ದುಡಿಮೆಗೆ ಬೆಲೆ ಇಲ್ಲ, ಗೃಹಕಾರ್ಯಗಳಲ್ಲಿ ಅವಳು ನೀಡುವ ಸಮಯಕ್ಕೆ ಯಾವುದೇ ವರಮಾನ ಅಥವಾ ಮನ್ನಣೆ ದೊರೆಯು ವುದಿಲ್ಲ. ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಕೆಳ ಸಮುದಾಯದ ಹೆಣ್ಣು ಮಕ್ಕಳ ದು:ಸ್ಥಿತಿ ನೋಡಿದರೆ ಈ ಆಚರಣೆ ಬೇಕೇ ಎನ್ನಿಸುತ್ತದೆ ಎಂದು ಹೇಳಿದರು. ಪ್ರಸ್ತುತ ಹೆಣ್ಣುಮಕ್ಕಳ ಅನುಪಾತದಲ್ಲಿ ಇಳಿತಕ್ಕೆ ಕಳವಳ ವ್ಯಕ್ತಪಡಿಸಿ, ಮಹಿಳೆ ಸಮಗ್ರತೆ ಕಾಯ್ದುಕೊಳ್ಳುವ ಅಗತ್ಯತೆ ಇದೆ ಎಂದರು. ಪ್ರಾಂಶುಪಾಲೆ ಡಾ. ಎಸ್. ಗೀತಾ, ಹೆಣ್ಣು ಮಕ್ಕಳನ್ನು ಗೌರವಿಸಿ, ಪ್ರೋತ್ಸಾಹಿಸಬೇಕು ಎಂದರು. ಅರ್ಧನಾರೀಶ್ವರ ತತ್ವ ಸ್ತ್ರೀ ಪುರುಷರ ಕೊಡುಗೆ ಸಮಾಜಕ್ಕೆ ಸಾಧ್ಯವಾಗಿಸುತ್ತದೆ. ಸಮಾಜದ ಸಮನ್ವತೆಗೆ ಇದು ಬುನಾದಿ ಎಂದು ಹೇಳಿದರು. ಪ್ರಸನ್ನ ಪ್ರಥಮ ಮಹಿಳೆಯರ ವಿಸ್ತೃತ ಪಟ್ಟಿ ವಾಚಿಸಿದರು. ಜಗದೀಶ್ ಮಹಿಳೆ ಅಳುವರು ಏಕೆ ಎಂಬ ಕವನ ವಾಚಿಸಿದರು.
ನಗರದಲ್ಲಿ ಸಂಭ್ರಮದ ಹೋಳಿ
ಹಾಸನ: ಬಣ್ಣದ ಹಬ್ಬ ಹೋಳಿ ಹಬ್ಬವನ್ನು ಭಾನುವಾರ ನಗರದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಭಾನುವಾರ ರಜೆಯ ದಿನವಾಗಿದ್ದರಿಂದ ನಗರದಲ್ಲಿ ಯುವಕ ಯುವತಿಯರು ಬಣ್ಣದೋಕುಳಿ ಆಡಿ ಬೈಕ್ಗಳಲ್ಲಿ ತಿರುಗಾಡಿ ಬಣ್ಣವನ್ನು ಪರಸ್ಪರ ಎರಚಾಡಿದರು.
ಬೆಳಗ್ಗಿನಿಂದಲೇ ಬಣ್ಣಗಳನ್ನು ತಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಹಚ್ಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಅಷ್ಟೇ ಅಲ್ಲದೆ ಯುವಕರು ಬೈಕ್ಗಳಲ್ಲಿ ತೆರಳಿ ಹ್ಯಾಪಿ ಹೋಲಿ ಎಂದು ಕೂಗುತ್ತ ನಗರದಲ್ಲಿ ಸಾಗುತ್ತಿದ್ದುದು ಹಬ್ಬದ ಮೆರುಗನ್ನು ವಿಶೇಷವಾಗಿ ತೋರಿತ್ತು.
ಶಾಲಾ ಕಾಲೇಜುಗಳಿಗೆ ರಜೆಯಾಗಿದ್ದರಿಂದ ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜುಗಳ ಸಮೀಪ ತೆರಳಿ ಸ್ನೇಹಿತರೊಂದಿಗೆ ಹೋಳಿ ಆಚರಿಸಿ ಸಂಭ್ರಮಿಸಿದರು. ಮತ್ತೆ ಕೆಲವರು ತಮ್ಮ ಸ್ನೇಹಿತರನ್ನು ಮನೆಯಿಂದ ಕರೆದುಕೊಂಡು ಬಂದು ಹೋಳಿ ಹಬ್ಬವನ್ನು ಅಚರಿಸಿದರು.
ಕೆಲವು ಕ್ರಿಕೆಟ್ ತಂಡದವರು ಬೆಳಗ್ಗೆ ಮೈದಾನದಲ್ಲಿಯೇ ಬಣ್ಣವನ್ನು ಎರಚಿಕೊಂಡು ಹಬ್ಬದ ಸಂಭ್ರಮ ಸವಿದರು. ಮೈದಾನದುದ್ದಗಲಕ್ಕೂ ನಾನಾ ಬಣ್ಣಗಳನ್ನು ಎರಚಿಕೊಂಡು ಕುಣಿದು ಕುಪ್ಪಳಿಸಿ ಹಬ್ಬದ ಮೆರುಗು ಹೆಚ್ಚಿಸಿದರು. ಮಕ್ಕಳು ಹಾಗೂ ವಯೋವೃದ್ಧರು ಮನೆಯ ಮುಂದೆಯೇ ಹೋಕುಳಿ ಎರಚಿ ಸಂತಸ ಪಟ್ಟರು.
ಒಟ್ಟಿನಲ್ಲಿ ನಗರದಲ್ಲಿ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ವಾಣಿಜ್ಯ ವಿದ್ಯಾರ್ಥಿಗಳಿಂದ ಆಹಾರ ಮೇಳ
ಅರಕಲಗೂಡು: ವ್ಯಾವಹಾರಿಕ ನಿರ್ವಹಣೆಯನ್ನು ಪ್ರಾಯೋಗಿಕವಾಗಿ ತಿಳಿಯಲು ಕಾಲೇಜು ಮಟ್ಟದಲ್ಲಿ ಏರ್ಪಡಿಸುವ ಆಹಾರ ಮೇಳಗಳು ಯಶಸ್ಸು ಕಾಣುತ್ತವೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೀರ್ತಿರಾಜು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾಣಿಜ್ಯ ವಿಭಾಗದ ಆಹಾರ ಮೇಳದಲ್ಲಿ ಮಾತನಾಡಿದ ಅವರು, ಪ್ರಾಯೋಗಿಕ ಅನುಭವಗಳು ವಾಸ್ತವವನ್ನು ಮನವರಿಕೆ ಮಾಡುತ್ತವೆ. ವಿದ್ಯಾರ್ಥಿಗಳು ನೇರವಾಗಿ ಮಾರಾಟ, ಸೇವೆ, ಕೊಳ್ಳುವಿಕೆಯಲ್ಲಿ ಭಾಗವಹಿಸಿದಾಗ ಅನುಭವಕ್ಕೆ ಬರುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಮಾರಾಟ, ಸರಕು ಸೇವೆ ಹೆಚ್ಚಿನ ಆದ್ಯತೆ ಪಡೆದುಕೊಂಡಿದೆ. ಉದ್ಯೋಗಾವಕಾಶ ಹೆಚ್ಚಿವೆ. ವಾಣಿಜ್ಯ ವಿಭಾಗ ಆಹಾರ ಮೇಳ ಆಯೋಜಿಸಿ ಶ್ಲಾಘನೀಯ ಕಾರ್ಯ ಮಾಡಿದೆ ಎಂದು ಕಾಲೇಜು ಅಭಿವೃದ್ಧಿ ಮಂಡಳಿಯ ಎಚ್. ಟಿ. ಮಂಜುನಾಥ್ ಆಹಾರ ಮೇಳಕ್ಕೆ ಚಾಲನೆ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಚಾಂದ್ಪಾಶ, ಎಸ್.ಎನ್. ನಾಗೇಂದ್ರ, ಪಟ್ಟಣ ಪಂಚಾಯ್ತಿ ಸದಸ್ಯ ನಿರಂಜನ್, ನಾನಾ ವಿಭಾಗಗಳ ಮುಖ್ಯಸ್ಥ ಬಸವರಾಜು, ಶಿವಣ್ಣ, ಪ್ರಾಂಶುಪಾಲ ಜನಾರ್ದನ್ ಭಟ್, ಉಪನ್ಯಾಸಕ ಸಂತೋಷ್ ಕುಮಾರ್, ನಾಗಣ್ಣ, ರಾಮು, ಪ್ರದೀಪ ಇತರರು ಇದ್ದರು. ವಾಣಿಜ್ಯ ವಿಭಾಗದಿಂದ ಏರ್ಪಡಿಸಿದ್ದ ಆಹಾರ ಮೇಳದಲ್ಲಿ 20 ಮಳಿಗೆ ತೆರೆಯಲಾಗಿತ್ತು. ವಿದ್ಯಾರ್ಥಿಗಳು ಸಂಭ್ರಮದಿಂದ ವಿವಿಧ ಬಗೆಯ ಖಾದ್ಯ ಪದಾರ್ಥ ಮತ್ತು ಪೇಯಗಳು, ಸಿಹಿ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಿದರು.
ತೃತೀಯ ಬಿ.ಕಾಂ ನ ಚಂದನ್ ಮತ್ತು ತಂಡ ಮಾಡಿದ ಅಕ್ಕಿ ಶ್ಯಾವಿಗೆ, ಸಾಂಬಾರು, ಕಾಕ್ಟೇಲ್ ಹಾಗೂ ಭವಾನಿ ಮತ್ತು ತಂಡ ತಯಾರಿಸಿದ್ದ ಮಸಾಲ ಮಜ್ಜಿಗೆ ತರಹೇವಾರಿ ವಡೆ, ಪಾವ್ ಬಾಜಿ ದೇಸಿ ಆಹಾರ ಪದಾರ್ಥಗಳ ಸಾಲಿನಲ್ಲಿ ಗಮನ ಸೆಳೆದವು.
ಇಂದು ಅಂಚೆ ಅದಾಲತ್
ಹಾಸನ: ಸಾರ್ವಜನಿಕರು ಅಂಚೆ ವ್ಯವಸ್ಥೆಯ ಕುಂದು ಕೊರತೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ನೀಡಲು ಅಂಚೆ ಅದಾಲತ್ ಮಾ.17ರಂದು ಬೆಳಗ್ಗೆ 11 ಕ್ಕೆ ಹಾಸನದ ಅಂಚೆ ಅಧೀಕ್ಷರ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
ಹಂದ್ರಾಳುನಲ್ಲಿ ಎನ್ನೆಸ್ಸೆಸ್ ಶಿಬಿರ
ಜಾವಗಲ್: ಶಿಬಿರದಲ್ಲಿ ಕಲಿತ ಶಿಸ್ತು, ಸಮಯಪಾಲನೆ, ಪ್ರಾಮಾಣಿಕತೆ, ಸೇವಾ ಮನೋಭಾವನೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಕಾಳಚನ್ನೇಗೌಡ ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕವು ಹಂದ್ರಾಳು ಗ್ರಾಮದಲ್ಲಿ ಆಯೋಜಿಸಿರುವ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ
ಜಾವಗಲ್: ಶಾಲೆ ವಾರ್ಷಿಕೋತ್ಸವ ಮಾಡುವುದರಿಂದ ಮಕ್ಕಳಲ್ಲಿನ ಪ್ರತಿಭೆ ಹೊರಹೊಮ್ಮುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ಶಿಕ್ಷಕ ಮರಳುಸಿದ್ದಪ್ಪ ಹೇಳಿದರು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಮತ್ತು ಶಾರದಾಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ವಾರ್ಷಿಕೋತ್ಸವ ಮಾಡುವುದರಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮತ್ತದೆ ಹಾಗೂ ಶಾಲೆಯ ಸರ್ವಾಂಗೀಣ ಪ್ರಗತಿಯನ್ನು ಸೂಚಿಸುತ್ತದೆ ಎಂದರು. ಮುಖ್ಯಶಿಕ್ಷಕ ಎಚ್.ಆರ್. ಶಿವಣ್ಣ ಮಾತನಾಡಿದರು.
ಮತಯಂತ್ರ ಮೊದಲ ಸುತ್ತಿನ ತಾಂತ್ರಿಕ ಪರಿಶೀಲನೆ
ಹಾಸನ: ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಲ್ಲಿ ಬಳಸುವ ಎಲ್ಲಾ ಮತಯಂತ್ರಗಳ ಮೊದಲ ಹಂತದ ತಾಂತ್ರಿಕ ಪರಿಶೀಲನಾ ಕಾರ್ಯ ಭಾನುವಾರ ಪ್ರಾರಂಭಗೊಂಡಿತು. ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಮತಯಂತ್ರಗಳನ್ನು ಇರಿಸಲಾಗಿದ್ದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತಂತ್ರಜ್ಞರು ತಪಾಸಣೆ ಕೈಗೊಳ್ಳುತ್ತಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಅನ್ಬುಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಚಾಲನೆ ದೊರೆಯಿತು. ಬಿಇಎಲ್ನ ಆರು ಮಂದಿ ತಾಂತ್ರಿಕ ಪರಿಣಿತರು ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ಮತಯಂತ್ರಗಳು ಚುನಾವಣೆಯಲ್ಲಿ ಬಳಸಲು ಸಮರ್ಪಕವಾಗಿರುವುದನ್ನು ಎಂಬುದನ್ನು ಪರೀಕ್ಷೆಗಳ ಮೂಲಕ ಖಾತ್ರಿ ಪಡಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ತಂಡವು ಹಾಸನ ಲೋಕಸಭಾ ಚುನಾವಣೆಯಲ್ಲಿ ಬಳಸುವ 2780 ಬ್ಯಾಲೆಟ್ ಮತ್ತು 2180 ಮತ್ತು ಕಂಟ್ರೋಲ್ ಯೂನಿಟ್ಗಳನ್ನು ಪರಿಶೀಲಿಸಲಿದ್ದು ಒಂದು ವಾರ ಈ ಪ್ರಕ್ರಿಯೆ ನಡೆಯಲಿದೆ.
ಅಣಕು ಮತದಾನ ಮಾಡಿ ಸರಿ ಇದೆಯೇ ಪರಿಶೀಲಿಸಿ ನಂತರ ಸಂಪೂರ್ಣವಾಗಿ ಹೊಸದಾಗಿ ಮತದಾನ ಪ್ರಕ್ರಿಯೆಗೆ ಸಿದ್ದಪಡಿಸಿ ಇಡಲಾಗುತ್ತದೆ. ಚುನಾವಣಾ ತಹಸೀಲ್ದಾರ್ ಬಾಬುರಾವ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪಲ್ಲವಿ, ಹಾಸನ ತಹಸೀಲ್ದಾರ್ ಮಂಜುನಾಥ್, ಹಾಗೂ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಇತರ ಹಲವು ಅಧಿಕಾರಿ ಸಿಬ್ಬಂದಿ ಪರಿಶೀಲನಾ ಕಾರ್ಯ ನೋಡಿಕೊಳ್ಳುತ್ತಿದ್ದಾರೆ.
ಕಾನೂನು ಅರಿವು ಕಾರ್ಯಕ್ರಮ
ಅರಕಲಗೂಡು: ಕಟ್ಟಡ ಕಾರ್ಮಿಕರು ತಮಗಿರುವ ಸೌಲಭ್ಯಗಳ ಹಕ್ಕಿನಿಂದ ವಂಚಿತರಾಗದೆ ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನೂ ಪಡೆದುಕೊಳ್ಳಬೇಕು ಎಂದು ಅರಕಲಗೂಡು ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಧೀಶ ಬಿ.ಕೆ.ಗಿರೀಶ್ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಆಯೋಜಿಸಿದ್ದ ಉಚಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ತಿಳಿಯಲು ಕಾನೂನಿನ ಅರಿವು ಹೊಂದಬೇಕು ಎಂದು ಹೇಳಿದರು.
ಕಾರ್ಮಿಕ ಇಲಾಖೆ ನಿರೀಕ್ಷಕಿ ಬಿ.ಮಂಗಳಗೌರಿ ಅವರು ತಾಲೂಕಿನ ಎಲ್ಲಾ ಕಟ್ಟಡ ಕಾರ್ಮಿಕರು ಗುರುತಿನ ಪತ್ರ ಪಡೆಯುವಂತೆ ಸಲಹೆ ನೀಡಿದರು.
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಯೋಗೇಶ್, ವಕೀಲರ ಸಂಘದ ಅಧ್ಯಕ್ಷ ಎಸ್.ಆರ್.ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಸರ್ಕಾರಿ ಸಹಾಯಕ ಅಭಿಯೋಜಕಿ ರಂಜನ್ರಾವ್, ಕೆ.ಎಸ್.ನಾಗೇಂದ್ರ ಉಪಸ್ಥಿತರಿದ್ದರು.
ಭವಾನಿ ರೇವಣ್ಣಗೆ ಟಿಕೆಟ್ಯುವ ಜೆಡಿಎಸ್ ಒತ್ತಾಯ
ಕೆ.ಆರ್. ನಗರ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಜೆಡಿಎಸ್ ಟಿಕೆಟ್ ನೀಡುವಂತೆ ತಾಲೂಕು ಯುವ ಜೆಡಿಎಸ್ ಮುಖಂಡರು ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.
ಪಟ್ಟಣದ ಗರುಡಗಂಭದ ವೃತ್ತದಲ್ಲಿ ಯುವ ಜೆಡಿಎಸ್ ಮುಖಂಡ ಗುಳುವಿನ ಅತ್ತಿಗುಪ್ಪೆ ಮಂಜುನಾಥ್ ನೇತೃತ್ವದಲ್ಲಿ ಸೇರಿದ್ದ ನೂರಕ್ಕೂ ಹೆಚ್ಚು ಯುವಕರು ಜೆಡಿಎಸ್ ಮತ್ತು ಭವಾನಿ ರೇವಣ್ಣ ಪರ ಘೋಷಣೆ ಕೂಗಿದರಲ್ಲದೆ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಮುಖಂಡ ಮಂಜುನಾಥ್ ಮಾತನಾಡಿ, ಭವಾನಿ ರೇವಣ್ಣಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿ ಫಾರಂ ನೀಡಿದರೆ ಪಕ್ಷಕ್ಕೆ ಒಂದು ಸೀಟು ಬರುವುದು ಖಚಿತ. ಈಗಾಗಲೇ ಕ್ಷೇತ್ರದಾದ್ಯಂತ ಚಿರಪರಿಚಿತರಾಗಿರುವ ಭವಾನಿಯವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಚುನಾವಣೆಯಲ್ಲಿ ಅವರು ಸ್ಪರ್ಧಿಸಿದರೆ ಅನೂಕೂಲವಾಗುತ್ತದೆ ಎಂದರು. ಯುವ ಮುಖಂಡರಾದ ಶಾಂತಕುಮಾರ್, ಬಿ.ಎಸ್. ಹರೀಶ್, ಮಧು, ಶ್ರೀನಿಧಿ, ವಿನಯ್, ಮಹೇಶ್, ಅಭಿಷೇಕ್, ಚಂದ್ರಶೇಖರ್, ರಘು, ಕೀರ್ತಿ, ವಸಂತ್, ಸಂಜು, ಪ್ರೇಮಕುಮಾರ್ ಇದ್ದರು.
20 ರಂದು ವಿಚಾರ ಸಂಕಿರಣ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ ಅಕ್ಕಮಹಾದೇವಿ ಪೀಠ ಹಾಗೂ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮಾ.20 ರಂದು ನಟರಾಜ ಸಭಾಭವನದಲ್ಲಿ ಮಹಾದೇವಿ ಅಕ್ಕನ ವಚನ- ನಿರ್ವಚನ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಉದ್ಘಾಟಿಸಲಿದ್ದು, ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಟರಾಜ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದ ಭಾಗವಹಿಸುವರು. ನಂತರ ನಡೆಯುವ ಗೋಷ್ಠಿಗಳಲ್ಲಿ ಡಾ. ನಿತ್ಯಾನಂದ ಬಿ. ಶೆಟ್ಟಿ, ಡಾ. ಅನ್ನದಾನೇಶ್, ಡಾ. ಯತೀಶ್ವರ್, ಡಾ.ಜಿ.ಪಿ. ಬಸವರಾಜು, ಡಾ.ಸುರೇಸ್ ನಾಗಲಮಡಿಕೆ, ಶೈನಾ ನಾಗರಾಜ್ ವಿಚಾರ ಮಂಡಿಸುವರು. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಮರ್ಶಕ ಪ್ರೊ.ಶ್ರೀಕಂಠ ಕೂಡಿಗೆ ಭಾಷಣ ಮಾಡಲಿದ್ದು, ಪ್ರೊ.ಸಿ.ಎಂ. ಧರ್ಮಪ್ಪ, ಎಂ.ಎಸ್. ಸಂಧ್ಯಾರಾಣಿ ಭಾಗವಹಿಸುವರು.
ಶಸ್ತ್ರ ಚಿಕಿತ್ಸೆಗೆ
ನೆರವು ಕೋರಿಕೆ
ಮೈಸೂರು: ನಗರದ ಎಂ. ಗೋಪಾಲ್ ಕೃಷ್ಣ ಎಂಬವವರು ಬೆನ್ನುಮೂಳೆ ನೋವು ಮತ್ತು ಅದರ ಪಕ್ಕ ಬೆಳೆದಿರುವ ಗಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆಗಾಗಿ ದಾನಿಗಳಿಂದ ಸಹಾಯ ಕೋರಿದ್ದಾರೆ. 2004 ರಿಂದ ಕಾಣಿಸಿಕೊಂಡ ಬೆನ್ನು ಮೂಳೆ ನೋವಿಗೆ ಬಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಆಗಾಗ ತಪಾಸಣೆ ಮಾಡಿಸಿದರೂ ನೋವು ನಿಂತಿಲ್ಲ. ಈವರೆಗೆ ಸುಮಾರು 3 ಲಕ್ಷದವರೆಗೆ ಖರ್ಚಾಗಿದ್ದು, ಇನ್ನು 3 ರಿಂದ 5 ಲಕ್ಷದವರೆಗೆ ವೆಚ್ಚ ತಗುಲಲಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ದಾನಿಗಳು ಸಹಾಯ ಮಾಡುವಂತೆ ಅವರು ಕೋರಿದ್ದಾರೆ. ಸಹಾಯ ಮಾಡಲಿಚ್ಛಿಸುವವರು ಎ. ಗೋಪಾಲ್ಕೃಷ್ಣ, ಉಳಿತಾಯ ಖಾತೆ- 30406164206, ಎಸ್ಬಿಐ ಚಾಮುಂಡಿಪುರಂ ಶಾಖೆ, ಮೈಸೂರು, ಮೊ. 99022 64063 ಸಂಪರ್ಕಿಸಿ.
ಜೆಡಿಎಸ್ ಪಕ್ಷ ಬೆಂಬಲಿಸಲು ಮನವಿ
ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಲಿತರು ಜೆಡಿಎಸ್ ಪಕ್ಷ ಬೆಂಬಲಿಸುವಂತೆ ನಗರ ಸಂಘಟನಾ ಕಾರ್ಯದರ್ಶಿ ಶೇಖರ್ ಮನವಿ ಮಾಡಿದರು. ಅರವತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದಲಿತರ ಮತಗಳನ್ನು ಮಾತ್ರ ಬಳಸಿಕೊಂಡಿದೆ. ಆದರೆ ದಲಿತರಾದ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ.ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿಲ್ಲ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಲಿತರು ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು. ಕಾಂಗ್ರೆಸ್ನ ರಮ್ಯಾ ವಿರುದ್ಧ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬುದು ನಮ್ಮ ಆಶಯ. ಆದ್ದರಿಂದ ಪಕ್ಷದ ವರಿಷ್ಠರು ಈ ಬಗ್ಗ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಖಂಡ ಮಲ್ಲಿಕಾರ್ಜುನ ಇದ್ದರು.