ಕುಟುಂಬ ರಾಜಕಾರಣಕ್ಕೆತಕ್ಕ ಪಾಠ
ಹಾಸನ: ಕೋಮುವಾದಿ ಬಿಜೆಪಿ ಶಕ್ತಿಯನ್ನು ದಮನ ಮಾಡಿ, ಕುಟುಂಬ ರಾಜಕಾರಣ ಮಾಡುತ್ತಿರುವ ಜೆಡಿಎಸ್ಗೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಮಾಜಿ ಸಚಿವೆ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ್ ನಿರ್ಮಾಣ್ ಯಾತ್ರಾ ಅಂಗವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಸರಿಯಾದ ನಿರ್ಧಾರವಾಗಲಿದೆ. ಕಾಂಗ್ರೆಸ್ ಚರಿತ್ರೆ ಬಗ್ಗೆ ಮಾತನಾಡುವ ನರೇಂದ್ರ ಮೋದಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು. ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರ ಮೇಲಾದ ಹತ್ಯಾಕಾಂಡ ಇನ್ನೂ ಎಲ್ಲರ ಮನಸ್ಸಿನಲ್ಲಿ ಇದೆ. ಇಂಥವರು ದೇಶದ ಪ್ರಧಾನಿಯಾದರೆ ದೇಶ ಯಾವ ಕಡೆ ಸಾಗುತ್ತದೆ ಎಂಬುದು ಜನತೆಗೆ ತಿಳಿದಿದೆ. ಕಾಂಗ್ರೆಸ್ ಒಂದು ದೊಡ್ಡ ಆಲದ ಮರ. ಯಾರು ಬಂದರೂ ಒಂದು ಎಲೆ ಬೀಳಿಸಲು ಸಾಧ್ಯವಿಲ್ಲ. ಅಂತಹ ದೊಡ್ಡ ಶಕ್ತಿ ಎಂದು ಅವರು ಬಣ್ಣಿಸಿದರು.
ಕಾಂಗ್ರೆಸ್ ಕಾಲಾವಧಿಯಲ್ಲಿ ಜಾರಿಗೆ ತಂದ ಅಭಿವೃದ್ಧಿ ಕಾರ್ಯಗಳು ಇನ್ನೂ ಜೀವಂತವಾಗಿದೆ. ಎಲ್ಲಾ ಜನಾಂಗದ ಹಿತಾದೃಷ್ಟಿಯಲ್ಲಿ ಹಲವಾರು ಉಪಯುಕ್ತ ಯೋಜನೆಯನ್ನು ಜನತೆಗೆ ನೀಡಿದೆ ಎಂದರು.
ವಾಗ್ದಾಳಿ: ಇದೇ ವೇಳೆ ಜೆಡಿಎಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್ ಪಕ್ಷ ಒಂದು ಅಲೆಮಾರಿ ಪಕ್ಷ ಎಂದು ಲೇವಡಿ ಮಾಡಿದಲ್ಲದೇ, ರಾಜ್ಯದಲ್ಲಿ ಬಿಜೆಪಿ ಬೇರೂರಲು ಅವಕಾಶ ನೀಡಿದ್ದೇ ಜೆಡಿಎಸ್. ಇದರಿಂದ ಭ್ರಷ್ಟಾಚಾರ ಎಲ್ಲೆಲ್ಲೂ ತಾಂಡವವಾಡಲು ಅವಕಾಶ ಸಿಕ್ಕಿತು. ಈಗ ಕಾಂಗ್ರೆಸ್ ವಿರುದ್ಧವಾಗಿ ಮೂರನೇ ರಂಗ ಕಟ್ಟಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾಧ್ಯವಿಲ್ಲ: ನಂತರ, ಮೋಟಮ್ಮ ಅವರ ಟೀಕೆ ಜೆಡಿಎಸ್ ಧುರೀಣ ದೇವೇಗೌಡರ ವಿರುದ್ಧ ಹರಿದುಬಂತು. ಕಾಂಗ್ರೆಸ್ ಪಕ್ಷದ ಸಹಾಯದಿಂದಲೇ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದು ಎಂಬುದನ್ನು ಮರೆಯಬಾರದು ಎಂದ ಅವರು, ಎಲ್ಲರ ಹಿತರಕ್ಷಣೆ ಮಾಡುವ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಬಿಜೆಪಿ ಮತ್ತು ತೃತೀಯ ರಂಗದಿಂದ ಜಾರಿಗೊಳಿಸಲು ಸಾಧ್ಯವಿಲ್ಲ ಎಂದರು. ಈ ಬಾರಿ ಕುಟುಂಬ ರಾಜಕಾರಣವನ್ನು ಸೋಲಿಸುವ ಮೂಲಕ ಜೆಡಿಎಸ್ಗೆ ತಕ್ಕ ಪಾಠವನ್ನು ಜನತೆ ಕಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಕೆ. ಮಹೇಶ್ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ವಯಸ್ಸಾಗಿದ್ದು, ಅವರಿಗೆ ಕೆಲಸ ಮಾಡಲು ಆಗುತ್ತದೇಯೇ ಎಂದು ಪ್ರಶ್ನೆ ಮಾಡಿದರು.
ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ಜಿಲ್ಲೆಯೊಳಗೆ ಇಷ್ಟು ವರ್ಷ ಹೆಪ್ಪುಗಟ್ಟಿದ ಕುಟುಂಬ ರಾಜಕಾರಣ ಕಾಣುತ್ತಿದ್ದೆವು. ಇವರು ಜನರಿಂದ ದೈತ್ಯರಾದರೇ ಹೊರತು ಇವರ ಸ್ವಂತದ್ದು ಏನೂ ಇಲ್ಲ ಎಂದರು. ಮುಂದಿನ ದಿನಗಳಲ್ಲಿ ಇಲ್ಲಿ ಒಂದು ಹೊಸ ಅವಕಾಶ ಸಿಗಲಿದೆ ಎಂದು ಭರವಸೆ ನುಡಿದರು.
ಇದೆ ವೇಳೆ ವಿಧಾನ ಪರಿಷತ್ನ ಮಾಜಿ ಸದಸ್ಯ ಎಸ್.ಎಂ. ಆನಂದ್, ಲೋಕಸಭಾ ಚುನಾವಣೆ ಅಭ್ಯರ್ಥಿ ಎ. ಮಂಜು, ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಜವರೇಗೌಡ, ವೈದ್ಯ ಎಚ್. ನಾಗರಾಜ್, ಮುಬ್ಬಶೀರ್, ಮಹಂತೇಶ್ ಇತರರು ಇದ್ದರು.