ಕುಟುಂಬದ ಒಳಿತಿಗಾಗಿ ಗೌಡರ ರಾಜಕಾರಣ: ಯಶ್ವಂತ್ ಟೀಕೆ
ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ತಾವು ಮತ್ತು ತಮ್ಮ ಕುಟುಂಬಕ್ಕೆ ರಾಜಕೀಯವಾಗಿ ಒಳಿತು ಮಾಡಿ ಕೊಳ್ಳಬೇಕೆಂಬ ಉದ್ದೇಶದಿಂದಲೇ ವಿನಃ ಜನ ಸೇವೆ ಮಾಡಲು ಅಲ್ಲ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯ ಯಶ್ವಂತ್ ಆರೋಪಿಸಿದ್ದಾರೆ.
ಗೌಡರನ್ನು ಚುನಾಯಿಸದಿರಿ: ಲೋಕಸಭೆಯಲ್ಲಿ ಒಂದೂ ಪ್ರಶ್ನೆಯನ್ನು ಕೇಳದ ಎಚ್.ಡಿ. ದೇವೇಗೌಡರನ್ನು ಗೆಲ್ಲಿಸುವ ಅವಶ್ಯಕತೆ ಇದೆಯೇ ಎಂಬುದನ್ನು ಜಿಲ್ಲೆಯ ಜನರು ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕಿದೆ. ಅವರು, ಸಂಸದರಾಗಿ ಹಾಸನ ಜಿಲ್ಲೆಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ಇಂಥವರನ್ನು ಪುನಃ ಅಧಿಕಾರಕ್ಕೆ ತರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.
ಯಜಮಾನಿಕೆ ಅಂತ್ಯಗೊಳಿಸಿ: ಲೋಕಸಭೆ ಚುನಾವಣೆಗೆ ಶಾಸಕ ಎ. ಮಂಜು ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿರುವುದು ಸ್ವಾಗತಾರ್ಹ. ಎಲ್ಲರ ಒಮ್ಮತದ ಅಭ್ಯರ್ಥಿಯಾಗಿರುವ ಅವರನ್ನು ಗೆಲ್ಲಿಸುವ ಮೂಲಕ ಜೆಡಿಎಸ್ನವರ ಸ್ವಾರ್ಥ ಹಾಗೂ ಕುಟುಂಬದ ಯಜಮಾನಿಕೆಯನ್ನು ಅಂತ್ಯಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.