ನುಗ್ಗೇಹಳ್ಳಿಯಲ್ಲಿ ಸದಾಶಿವಸ್ವಾಮಿ ರಥೋತ್ಸವ
ನುಗ್ಗೇಹಳ್ಳಿ: ಶ್ರೀಸದಾಶಿವಸ್ವಾಮಿ ಬ್ರಹ್ಮರಥೋತ್ಸವ ಭಕ್ತರ ಸಡಗರ ಸಂಭ್ರಮದ ನಡುವೆ ಇತ್ತೀಚೆಗೆ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ಸೋಮವಾರದಿಂದ ಪ್ರಾರಂಭಗೊಂಡು ಸಪ್ತಾಹ ಪೂರ್ವಕ ಶೈವಾಗಮ ರೀತ್ಯ ಉತ್ಸವಾದಿಗಳು ಸೇವಾಕರ್ತರಿಂದ ಪುಣ್ಯಾಹ, ಮೃತ್ಸಂಗ್ರಹ, ಅಭಿಷೇಕ, ಗಣಪತಿ ಉತ್ಸವ, ಅಂಕುರಾರ್ಪಣ, ರಕ್ಷಾಬಂಧನ, ಧ್ವಜಾರೋಹಣ, ಭೇರಿತಾಡನ, ಸಿಂಹವಾಹನೋತ್ಸವ, ನಂದಿವಾಹನೋತ್ಸವ, ಶೇಷವಾಹನೋತ್ಸವ, ಕುದುರೆ ಉತ್ಸವ, ಕಲ್ಯಾಣೋತ್ಸವ ಪೂಜಾ ಕೈಂಕರ್ಯಗಳು ನೆರವೇರಿದವು.
ರಥೋತ್ಸವ ಮುನ್ನ ಕೃಷ್ಣ ಗಂಧೋತ್ಸವ, ಮಂಟಪಡಿಸೇವೆಗಳು ಜರುಗಿದವು. ನಂತರ, ಸದಾಶಿವಸ್ವಾಮಿಯವರನ್ನು ಪುಷ್ಪಾಲಂಕೃತ ರಥದಲ್ಲಿ ಕೂರಿಸಿ, ರಥಕ್ಕೆ ಮಹಾ ನೈವೇದ್ಯ ಮಾಡಿ ಮಹಾಮಂಗಳಾರತಿ ಸಲ್ಲಿಸಿದ ನಂತರ ಮಂಗಳವಾದ್ಯಗಳೊಂದಿಗೆ ಊರಿನ ರಥಬೀದಿಯಲ್ಲಿ ಭಕ್ತರು ಜಯಘೋಷದ ನಡುವೆ ಸಂಭ್ರಮದಿಂದ ರಥ ಎಳೆದರು. ರಥ ಮುಂದಕ್ಕೆ ಚಲಿಸುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ನಂತರ ನೂರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.