'ಪ್ರಾತ್ಯಕ್ಷಿಕೆಯ ರೂಪದಲ್ಲಿ ಇರಲಿ ಕಲಿಕೆ'
ಹಾಸನ: ಪ್ರಾತ್ಯಕ್ಷಿಕೆಯ ಮೂಲಕ ಕಲಿಸುವ ಯಾವುದೇ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ, ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ ಹಾಗೂ ಕಾಳಜಿ ಸಹ ಬೆಳೆಯುತ್ತದೆ. ಹಾಗಾಗಿ ಪ್ರತಿಯೊಂದು ಕಲಿಕೆಯೂ ಪ್ರಾತ್ಯಕ್ಷಿಕೆಯ ರೂಪದಲ್ಲಿ ಇರಬೇಕು ಎಂದು ರಾಜೀವ್ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಸುಧೀಶ್ ಅಭಿಪ್ರಾಯಪಟ್ಟರು.
ನಗರದ ಭಾರತ ಜ್ಞಾನ ವಿಜ್ಞಾನ ಸಮಿತಿ, ಸಿಪಿಆರ್, ಬೆಂಗಳೂರಿನ ಪರಿಸರ ಶಿಕ್ಷಣ ಕೇಂದ್ರ ಹಾಗೂ ರಾಜೀವ್ ಬಿಎಡ್ ಕಾಲೇಜಿನ ಡಾರ್ವಿನ್ ವಿಜ್ಞಾನ ಸಂಘಗಳ ಸಂಯುಕ್ತಾಶ್ರಯದಲ್ಲಿ ಬಿಎಡ್ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ನಡೆದ ರಾಜೀವ್ ಆರ್ಕೆಡ್‌ನ ಪರಿಸರ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿನಂದನಾರ್ಹ: ಪರಿಸರ ಶಿಕ್ಷಣ, ಶಿಕ್ಷಣದ ಕಲಿಕೆಯಲ್ಲಿ ಒಂದು ಪ್ರಮುಖ ವಿಷಯವಾಗಿದ್ದು, ಅದನ್ನು ಪ್ರಾಯೋಗಿಕ ಹಾಗೂ ಚಟುವಟಿಕೆಯ ಆಧಾರದಲ್ಲಿ ಕಲಿಸಿದಾಗ ಉತ್ತಮ ಫಲಿತಾಂಶ ಹಾಗೂ ಪರಿಸರ ಕಾಳಜಿಯನ್ನು ಸಾಮಾಜಿಕವಾಗಿ ಮೂಡಿಸಲು ಸಾಧ್ಯ ಎಂದು ಹೇಳಿದ ಅವರು, ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ಒಳಪಡಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದಾಗಿದೆ. ಈ ನಿಟ್ಟಿನಲ್ಲಿ ಭಾರತ ಜ್ಞಾನ- ವಿಜ್ಞಾನ ಸಮಿತಿ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದರು.
ತೀವ್ರ ಪರಿಣಾಮ: ಹವಾಮಾನ ವೈಪರೀತ್ಯ ಕುರಿತು ಪಿಪಿಟಿ ವಿವರಣೆ ನೀಡಿದ ಭಾರತ ಜ್ಞಾನ- ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಬಿ.ಜಿ. ಗೋಪಾಲಕೃಷ್ಣ, ಪ್ರಸಕ್ತ ಸನ್ನಿವೇಶದಲ್ಲಿ ಹವಾಮಾನ ವೈಪರೀತ್ಯ ಜಗತ್ತಿನ ಜನರ ಬದುಕಿನ ಮೇಲೆ ತೀವ್ರ ತೆರನಾದ ಪರಿಣಾಮ ಬೀರುತ್ತಿದೆ ಎಂದರು.
ಶೈಕ್ಷಣಿಕ ವ್ಯವಸ್ಥೆಗೆ ಅನಿವಾರ್ಯ: ಭಾರತ ಜ್ಞಾನ ವಿಜ್ಞಾನ ಸಮಿತಿಯ ಶಿಕ್ಷಣ ಉಪಸಮಿತಿಯ ಜಿಲ್ಲಾ ಸಂಚಾಲಕಿ ಕೆ.ಆರ್. ಕವಿತ ಮಾತನಾಡಿ, ಸುಸ್ಥಿರ ಪರಿಸರ ಪೂರಕ ಪರಿಸರ ಅಭಿವೃಧ್ಧಿಯ ಜೊತೆ ಅದರ ಸಂರಕ್ಷಣೆ ಹಾಗೂ ವ್ಯವರ್ತತೆಯ ಕುರಿತು ವೈಜ್ಞಾನಿಕ ಜ್ಞಾನ ಹಾಗೂ ಅಧ್ಯಯನದ ಅಗತ್ಯತೆ ಶೈಕ್ಷಣಿಕ ವ್ಯವಸ್ಥೆಗೆ ಅನಿವಾರ್ಯ ಎಂದು ಹೇಳಬೇಕಾಗಿದೆ ಎಂದರು.
ಹವಾಮಾನ ಬದಲಾವಣೆ ತಡೆಗೆ ಭಾರತ ಸರ್ಕಾರ ಹಾಕಿಕೊಂಡಿರುವ ಯೋಜನೆಗಳ ಪರಿಚಯವನ್ನು ಜನತೆಗೆ ಮಾಡಿಸುವುದು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಅವಶ್ಯಕವಾಗಿದ್ದು, ಈ ಗುರಿಗಳನ್ನಿಟ್ಟುಕೊಂಡು ಭಾರತ ಜ್ಞಾನ- ವಿಜ್ಞಾನ ಸಮಿತಿ ದೇಶಾದ್ಯಂತ ಶಾಲಾ- ಕಾಲೇಜುಗಳು ವಿಶೇಷವಾಗಿ ಬಿಎಡ್ ಮತ್ತು ಡಿ. ಎಡ್ ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಶಿಕ್ಷಣ ಕಾರ್ಯಾಗಾರ ಆಯೋಜಿಸಿಕೊಂಡು ಬರುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ರಾಜೀವ್ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕಿ ವರ್ಗಿಸ್ ಉಪಸ್ಥಿತರಿದ್ದರು.
ಕಾರ್ಯಾಗಾರದ ನಿರೂಪಣೆಯನ್ನು ಪ್ರಶಿಕ್ಷಣಾರ್ಥಿ ಮೀನ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ರಂಜಿತಾ, ಮೊದಲಿಗೆ ಸ್ವಾಗತಿಸಿ ಕೊನೆಯಲ್ಲಿ ಪ್ರಶಿಕ್ಷಣಾರ್ಥಿ ಪುಷ್ಪಲತ ವಂದಿಸಿದರು, ಪ್ರಶಿಕ್ಷಣಾರ್ಥಿ ಸೌಮ್ಯ ಪರಿಸರ ಗೀತೆ ಹಾಡುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.