ಬೆಂಕಿ ಹಚ್ಚಿಕೊಂಡು ಮಾನಸಿಕ ಅಸ್ವಸ್ಥ ಸಾವು, ಲಾರಿ ಭಸ್ಮ
ಅರಸೀಕೆರೆ: ಮಾನಸಿಕ ಅಸ್ವಸ್ಥನೊಬ್ಬ ಲಾರಿಯೊಳಗೆ ಬೆಂಕಿ ಹಚ್ಚಿಕೊಂಡ ಪರಿಣಾಮ ಆತ ಸುಟ್ಟು ಕರಕಲಾದರೆ, ಲಾರಿ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ. ಲಾರಿ ಕ್ಲೀನರ್ ಬಸವರಾಜು (35) ಮೃತಪಟ್ಟ ದುರ್ದೈವಿ. ಈತ ಬಾಗಲಕೋಟೆ ಜಿಲ್ಲೆ ಬಿಳಗಿ ತಾಲೂಕಿನವ.
ಬಾಗಲಕೋಟೆಯಿಂದ ಪಶು ಆಹಾರ ದಾಸ್ತಾನನ್ನು ಅಂಗಡಿಯೊಂದಕ್ಕೆ ವಿಲೇವಾರಿ ಮಾಡಿದ ನಂತರ ರಾತ್ರಿ 2.30ರ ಸಮಯದಲ್ಲಿ ಎ.ಪಿ.ಎಂ.ಸಿ. ಆವರಣದಲ್ಲಿ ಓಡಾಡುತ್ತಿದ್ದ ಆತನನ್ನು ಪೊಲೀಸರು ನೋಡಿ ವಿಚಾರಿಸಿದ್ದರು. ಆನಂತರ ಲಾರಿ ಚಾಲಕ ಬಸವಯ್ಯ ಅವರ ಬಳಿ ಕರೆತಂದಾಗ, 'ಆತ ನಮ್ಮ ಲಾರಿ ಕ್ಲೀನರ್. ಬುದ್ಧಿ ಸರಿಯಿಲ್ಲದ ಕಾರಣ ಈ ರೀತಿ ಓಡಾಡುತ್ತಾನೆ' ಎಂದು ಬಸವಯ್ಯ ತಿಳಿಸಿದರು. ನಂತರ ಚಾಲಕ ಬಸವಯ್ಯ ಲಾರಿಯ ಹೊರಭಾಗದಲ್ಲಿ ಮಲಗಿದರೆ ಕ್ಲೀನರ್ ಬಸವರಾಜು ಲಾರಿಯ ಒಳಭಾಗದಲ್ಲಿ ಮಲಗಲು ತೆರಳಿದ್ದಾನೆ. ಆನಂತರ, ಲಾರಿಯ ಬಾಗಿಲು ಭದ್ರಪಡಿಸಿ ಬೆಂಕಿ ಹಂಚಿಕೊಂಡಿದ್ದಾನೆ.ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರೂ ಪ್ರಯೋಜನವಾಗಿಲ್ಲ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ಸಂಕ್ಷೇಪ
ರು. 4 ಲಕ್ಷ ಮೌಲ್ಯದ ಶ್ರೀಗಂಧದ ತುಂಡುಗಳ ಲೂಟಿ
ಆಲೂರು: ಆಲೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ರಾತ್ರಿ ಪಾಳಿ ಕರ್ತವ್ಯದಲ್ಲಿ ಇದ್ದ ನೌಕರರನ್ನು ಚಾಕು ತೋರಿಸಿ, ಬೆದರಿಸಿ ರು. 4 ಲಕ್ಷ ಮೌಲ್ಯದ 70 ಕೆಜಿ ಶ್ರೀಗಂಧದ ತುಂಡುಗಳನ್ನು ಲೂಟಿ ಮಾಡಿರುವ ಸೋಮವಾರ ನಡೆದಿದೆ. ರಾತ್ರಿ ನಾಲ್ಕು ಜನ ಅಪರಿಚಿತ ವ್ಯಕ್ತಿಗಳು ನ್ಯಾಯಾಲಯದ ಬಲಭಾಗದ ಬಾಗಿಲಿನ ಬೀಗವನ್ನು ಕದ್ದು, ಕರ್ತವ್ಯದಲ್ಲಿ ಇದ್ದ ಪುಟ್ಟಸ್ವಾಮಿ ಗೌಡ ಎಂಬವರಿಗೆ ಚಾಕು ತೋರಿಸಿ ಹೆದರಿಸಿ ಶ್ರೀಗಂಧದ ಕೊಠಡಿಯ ಬೀಗ ಒಡೆದು ಒಳನುಗ್ಗಿರುವ ತಂಡ 5 ಚೀಲಗಳಲ್ಲಿ ತುಂಬಿರಿಸಿದ ಶ್ರೀಗಂಧದ ತುಂಡುಗಳನ್ನು ಲೂಟಿ ಮಾಡಿದ್ದಾರೆ. ಈ ಸಂಬಂಧವಾಗಿ ಶಿರಸ್ತೇದಾರ ಲಕ್ಷ್ಮೇಗೌಡ ಕೊಟ್ಟ ದೂರಿನ ಮೇಲೆ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ. ನ್ಯಾಯಾಲಯವು ಪಟ್ಟಣದಿಂದ ಎರಡೂವರೆ ಕಿಮೀ ದೂರದ ಬಿಕ್ಕೋಡು ರಸ್ತೆಯಲ್ಲಿ ಇದ್ದು, ನ್ಯಾಯಾಲಯಕ್ಕೇ ನುಗ್ಗಿ ಚಾಕುವಿನಿಂದ ನೌಕರರನ್ನು ಹೆದರಿಸಿ ದರೋಡೆ ನಡೆಸಿರುವುದು ಪಟ್ಟಣದ ನಾಗರೀಕರಲ್ಲಿ ಭಯ ಹುಟ್ಟಿಸಿದೆ. ಪಟ್ಟಣದ ಹೊರವಲಯದಲ್ಲಿ ನ್ಯಾಯಾಲಯಕ್ಕೆ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಪೊಲೀಸರು ಗಂಧವನ್ನು ಕಳವು ಮಾಡಿರುವವರನ್ನು ಶೀಘ್ರ ಬಂಧಿಸುವುದರ ಜೊತೆಗೆ ಈಗಾಗಲೇ ಪಟ್ಟಣದಾದ್ಯಂತ ನಡೆಸಿರುವ ಹಲವಾರು ಕಳ್ಳತನ ಪ್ರಕರಣವನ್ನು ಭೇದಿಸಿ ಜನತೆಯಲ್ಲಿ ಸ್ಥೈರ್ಯ ತುಂಬಬೇಕು ಎಂದು ಒತ್ತಾಯಿಸಿದ್ದಾರೆ.
ಕೆಆರ್ಎಂ ಮನೆಗೆ ಎಆರ್ಕೆ ಭೇಟಿ
ಮೈಸೂರು: ಅಸಮಾಧಾನಕ್ಕೆ ಒಳಗಾಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರನ್ನು ಮಾಜಿ ಶಾಸಕ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಅವರು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಜೆ.ಪಿ. ನಗರದ ಅವರ ನಿವಾಸಕ್ಕೆ ತೆರಳಿದ ಎ.ಆರ್. ಕೃಷ್ಣಮೂರ್ತಿ ಅವರು, ಯಾವುದೆ ಕಾರಣಕ್ಕೂ ಪಕ್ಷದಿಂದ ದೂರವಾಗದಂತೆ ಮನವಿ ಮಾಡಿದರು.