ಬೇಸಿಗೆ ಆರಂಭದಲ್ಲೇ ನೀರಿಗೆ ಹಾಹಾಕಾರ
ಕ.ಪ್ರ.ವಾರ್ತೆ ಹಾಸನ ಮಾ 17: ಬೇಸಿಗೆ ಆರಂಭವಾಗಿರುವುದರಿಂದ ಜಿಲ್ಲೆ ಹಾಗೂ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಜಿಲ್ಲಾಡಳಿತ ಸಂಪೂರ್ಣವಾಗಿ ಲೋಕಸಭಾ ಚುನಾವಣೆ ಕೆಲಸದಲ್ಲಿ ನಿರತವಾಗಿರುವುದರಿಂದ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ಹಾಗೂ ಇತರೆ ತಾಲೂಕುಗಳಲ್ಲಿ ಜನರಿಗೆ ಕುಡಿಯುವ ನೀರಿಲ್ಲದೆ ಹಾಹಾಕಾರ ಪಡುತ್ತಿದ್ದಾರೆ. ನೀರಿರುವ ಕಡೆ ವಿದ್ಯುತ್ ಇಲ್ಲ. ಕೆಲವು ಕಡೆ ಬಾವಿಗಳು ಬತ್ತಿ ಹೋಗಿವೆ. ಇರುವಂತಹ ಬೋರ್ವೆಲ್ಗಳು ಕೈಕೊಟ್ಟಿವೆ. ಸರ್ಕಾರಗಳು, ಜನಪ್ರತಿನಿಧಿಗಳು, ಜಿಲ್ಲಾಡಳಿತ ಲೋಕಸಭಾ ಚುನಾವಣೆಯಲ್ಲಿ ಮುಳುಗಿರುವುದರಿಂದ ಜಿಲ್ಲೆಯಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.
ರೈತರ ಅಳಲು: ನೀರಿನ ಆಭಾವದಿಂದಾಗಿ ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಜಿಲ್ಲೆಯ ನಾನಾ ಕಡೆಗಳಲ್ಲಿ ತರಕಾರಿ ಬೆಳೆಗಳಿಗೆ ಸಂಕಷ್ಟ ಉಂಟಾಗಿದ್ದು, ಇಳುವರಿ ಕುಸಿತ ಕಂಡಿದೆ. ಇದರಿಂದಾಗಿ ರೈತರು ಕುಪಿತಗೊಂಡಿದ್ದಾರೆ. ಜೊತೆಗೆ ಬೆಂಬಲ ಬೆಲೆ ಸಿಗದ ಕಾರಣ ರೈತರು ತಮ್ಮ ಒಲದಲ್ಲಿ ಬೆಳೆಗಳನ್ನು ಹಾಗೆ ಬಿಟ್ಟಿದ್ದಾರೆ. ಆಡಳಿತಾರೂಢ ಸರ್ಕಾರಕ್ಕಾಗಲಿ, ಜನಪ್ರತಿನಿಧಿಗಳಿಗಾಗಲೀ ರೈತರ ಮೇಲೆ ಕಿಂಚಿತ್ತು ಕಾಳಜಿ ಇಲ್ಲ. ದಿನ ಬೆಳಗಾದರೆ ಕೇವಲ ರಾಜಕೀಯ ಪಕ್ಷಗಳ ಕಿತ್ತಾಟ, ಚುನಾವಣೆ ಅಂತ ತಲ್ಲೀನರಾಗಿದ್ದು, ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ರೈತರು ಅಲವತ್ತುಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ, ಕುಡಿಯುವ ನೀರಿನ ಕಾಮಗಾರಿಗಳೂ ನೆನೆಗುದಿಗೆ ಬಿದ್ದಿವೆ.
ಹಣ ಬಿಡುಗಡೆಯಾಗಿಲ್ಲ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಪಂಚಾಯ್ತಿ ವತಿಯಿಂದ ಸರ್ಕಾರಕ್ಕೆ ಕುಡಿಯುವ ನೀರಿಗಾಗಿ ರು. 29.11 ಕೋಟಿಯ ಪ್ರಸ್ತಾವನೆ ಸಲ್ಲಿಸಿದ್ದರು. ಈವರೆಗೂ ಹಣ ಬಿಡುಗಡೆಯಾಗಿಲ್ಲ. ಈ ನಡುವೆ ಚುನಾವಣೆ ಅಡ್ಡಿಯಾಗಿರುವುದರಿಂದ ಕುಡಿಯುವ ನೀರಿನ ಕಾಮಗಾರಿಗಳಿಗೆ ಸರ್ಕಾರದಿಂದ ಹಣವನ್ನು ನಿರೀಕ್ಷೆಸುವುದು ಕನಸಿನ ಮಾತಾಗಿದೆ. ಜಿಲ್ಲೆಯ ಜನತೆ ಇನ್ನು ಎರಡು ತಿಂಗಳ ಕಾಲ ಬರ ಪರಿಸ್ಥಿತಿಯನ್ನೇ ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.
ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಹಣ ಇಲ್ಲದೆ ಸಮಸ್ಯೆ ಪರಿಹರಿಸಲು ಸಾಧ್ಯವಾಗದೇ ಸಂಬಂಧಪಟ್ಟ ಇಲಾಖೆಗಳು ಕೈಕಟ್ಟಿ ಕುಳಿತಿವೆ. ಜಿಲ್ಲೆಯಲ್ಲಿ 8 ತಾಲೂಕುಗಳ ಪೈಕಿ 6ನ್ನು ಬರಪೀಡಿತ ಎಂದು ರಾಜ್ಯ ಸರ್ಕಾರವೇ ಘೋಷಿಸಿದ್ದರೂ, ಹಣ ಮಾತ್ರ ನೀಡಿಲ್ಲ ಎಂದು ರೈತರು ಹೇಳಿದರು.
ವಿದ್ಯುತ್ ಅಭಾವ: ಕೆಲವೊಂದು ಕಡೆ ವಿದ್ಯುತ್ ಅಭಾವ ಉಂಟಾಗಿರುವುದರಿಂದ ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ. ಬೋರ್ಗಳಿಗೆ ವಿದ್ಯುತ್ ಇಲ್ಲದ ಕಾರಣ ನೀರನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ನೀರಿದ್ದರೆ ವಿದ್ಯುತ್ ಇಲ್ಲ. ವಿದ್ಯುತ್ ಇದ್ದರೆ ನೀರಲ್ಲ ಎಂಬ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ನೀರಿನ ಟ್ಯಾಂಕ್ಗಳಿಗೆ ಬೋರ್ನಿಂದ ನೀರನ್ನು ಹರಿಸಲು ಸಾಧ್ಯವಾಗುತ್ತಿಲ್ಲ.
ಒಟ್ಟಿನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉಲ್ಬಣಗೊಂಡಿರುವ ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ಸಿಗದಿರುವುದು ವಿಪರ್ಯಾಸವೇ ಸರಿ.
ಪಿ. ರವಿಕುಮಾರ್