ವಿಡಿಯೋ ರೆಕಾರ್ಡಿಂಗ್ ತಂಡಗಳ ನಿಯೋಜನೆ
ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಫ್ಲೈಯಿಂಗ್ ಸ್ಪರ್ಧೆ ಹಾಗೂ ವೀಡಿಯೋ ರೆಕಾರ್‌ರ್ಡಿಂಗ್ ಸಿಸ್ಟಂಗಳಿಗೆ ದಿನದ 24ಗಂಟೆಗಳ ಕಾಲವೂ ಲಭ್ಯವಿರುವ ವಿಡಿಯೋ ರೆಕಾರ್ಡಿಂಗ್ ತಂಡಗಳನ್ನು ಸೋಮವಾರ ನಿಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ರೆಕಾರ್ಡಿಂಗ್ ತಂಡಕ್ಕೆ ಹಾಸನ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಚುನಾವಣೆ ಮುಗಿಯುವವರೆಗೂ ವಿಡಿಯೋ ಗ್ರಾಫರ್‌ಗಳು ಹೇಗೆ ವರ್ತಿಸಬೇಕು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಬಗ್ಗೆ ಮಾಹಿತಿ ನೀಡಿದರು.
ಸೂಚನೆ: ಚುನಾವಣೆಯಲ್ಲಿ ವಿಡಿಯೋ ರೆಕಾರ್ಡಿಂಗ್ ತಂಡಗಳ ಜವಾಬ್ದಾರಿ ಮಹತ್ವದ್ದಾಗಿದ್ದು, ಪ್ರತಿಯೊಂದು ದೃಶ್ಯವೂ ಅಮೂಲ್ಯ ದಾಖಲೆಯಾಗಿರುತ್ತದೆ ಹಾಗೂ ಅವುಗಳ ಮುತುವರ್ಜಿಗಾಗಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಚುನಾವಣೆಯಲ್ಲಿ ಆಭ್ಯರ್ಥಿಗಳು ಹಾಗೂ ಪಕ್ಷಗಳು ಮಾಡುವ ಖರ್ಚುವೆಚ್ಚ, ಭಾಷಣದಲ್ಲಿ ನೀಡುವ ಹೇಳಿಕೆ, ಆಶ್ವಾಸನೆಗಳ ಬಗ್ಗೆ ನಿಗಾವಹಿಸುವಲ್ಲಿ ವಿಡಿಯೋ ಕ್ಲಿಪ್‌ಗಳು ಬಹಳ ಸಹಕಾರಿ. ಹೀಗಾಗಿ ಅತ್ಯಂತ ಸೂಕ್ಷ್ಮತೆಯಿಂದ ಮತ್ತು ಅಧಿಕಾರಿಗಳು ನೀಡುವ ಮಾರ್ಗದರ್ಶನದನ್ವಯ ವಿಡಿಯೋಗ್ರಾಫ್‌ಗಳು ಕಾರ್ಯ ನಿರ್ವಹಿಸಬೇಕು ಎಂದು ಅನ್ಬುಕುಮಾರ್ ಹೇಳಿದರು.
ದಾಖಲೆ ಒದಗಿಸಲಾಗುವುದು: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ವಿಡಿಯೋಗ್ರಾಫರ್‌ಗಳ ಬಳಿ ಇರುವ ಕ್ಯಾಮೆರಾ ಮಾತ್ರ ಖಾಸಗಿಯಾಗಿದ್ದು, ಅವರು ದೃಶ್ಯೀಕರಿಸುವ ವಿಡಿಯೋ ಸಂಪೂರ್ಣ ಚುನಾವಣಾ ಆಯೋಗದ ಆಸ್ತಿ, ಅದನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಚುನಾವಣಾ ಅಧಿಕಾರಿಗಳ ಹೊರತು ಇತರ ಯಾರಿಗೂ ಅದನ್ನು ನೋಡಲು ನೀಡಬಾರದು ಹಂಚಿಕೊಳ್ಳಬಾರದು ಮತ್ತು ಅದನ್ನು ನಾಶಪಡಿಸಬಾರದು ಮತ್ತು ರೆಕಾರ್ಡಿಂಗ್ ವೇಳೆ ಅಗತ್ಯವಿರುವ ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.
ಉಪವಿಭಾಗಾಧಿಕಾರಿ ಶರತ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ ಮತ್ತಿತರರು ಈ ಸಭೆಯಲ್ಲಿ ಹಾಜರಿದ್ದರು.