ಅಂತೂ ರೇಖಾ ಆಖೈರು
ಹಾಸನ: ಅಂತೂ ಇಂತೂ ರಾಜ್ಯ ಬಿಜೆಪಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಮಂಗಳವಾರ ಸಂಜೆ ಅಂತಿಮಗೊಳಿಸಿದೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಹಾಸನ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ಹಾಸನದಿಂದ ಸ್ಪರ್ಧಿಸಲು ಬಿಲ್ಕುಲ್ ಒಪ್ಪದ ಕಾರಣ ರೇಖಾ ಅವರ ಹೆಸರನ್ನು ರಾಜ್ಯ ಘಟಕ ಅಂತಿಮಗೊಳಿಸಿದ್ದು, ಬುಧವಾರ ಇದು ಅಧಿಕೃತವಾಗಿ ಪ್ರಕಟಗೊಳ್ಳಲಿದೆ.
ಯಾರು ರೇಖಾ?: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೆರಳಿನಲ್ಲೇ ರಾಜಕೀಯ ಜೀವನ ನಡೆಸುತ್ತಿರುವ ರೇಖಾ ಅವರು ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿದ್ದರು. ಹಾಸನ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಕಡೂರು ವಿಧಾನಸಭೆ ಕ್ಷೇತ್ರದ ಲಕ್ಯಾ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಹಾಲಿ ಸದಸ್ಯೆಯಾಗಿರುವ ಅವರು, 2004 ರಲ್ಲಿ ಬೀರೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ರೇಖಾ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿದ್ದರು. ಸುಮಾರು 20 ವರ್ಷಗಳಿಂದ ಬಿಜೆಪಿ ಕಟ್ಟಾ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈಗಲೂ ಯಡಿಯೂರಪ್ಪನವರ ಕೃಪೆಯಿಂದಲೇ ಟಿಕೆಟ್ ಸಿಕ್ಕಿದೆ. ರೇಖಾ ಅವರ ತಂದೆ ಊರೂ ಬೇಲೂರು ತಾಲೂಕು ಜಾವಗಲ್. ವಿವಾಹವಾದ ನಂತರ ಚಿಕ್ಕಮಗಳೂರು ಜಿಲ್ಲೆ ಸಾದರಹಳ್ಳಿಯಲ್ಲಿ ರೇಖಾ ನೆಲೆಸಿದ್ದಾರೆ. ಪಕ್ಷ ರಾಜಕಾರಣದಲ್ಲಿ ಪಳಗಿರುವ 43 ವರ್ಷ ವಯಸ್ಸಿನ ರೇಖಾ ಈಗ ಬಿಜೆಪಿ ಅಭ್ಯರ್ಥಿ.
'ಯಡಿಯೂರಪ್ಪನವರೇ ಶ್ರೀರಕ್ಷೆ'
ನಾನು ಹಿಂದಿನಿಂದಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಶೀರ್ವಾದದಿಂದಲೇ ರಾಜಕೀಯ ಕ್ಷೇತ್ರದಲ್ಲಿ ಇದ್ದು, ಪಕ್ಷದಲ್ಲಿ ಆನೇಕ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿದ್ದೇನೆ. ಯಡಿಯೂರಪ್ಪನವರು ಹಾಸನ ಕ್ಷೇತ್ರಕ್ಕೆ ಪ್ರಚಾರ ಮಾಡಲಿದ್ದಾರೆ ಎಂದು ರೇಖಾ ಮಂಗಳವಾರ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಗೆಲ್ಲುವುದೇ ಕನಸು: ರಾಜಕೀಯ ನನಗೇನು ಹೊಸತಲ್ಲ. ಹಾಗೆಯೇ ಹಾಸನ ಕ್ಷೇತ್ರವೂ ಹೊಸದೇನು ಅಲ್ಲ. ನನ್ನ ಹುಟ್ಟೂರು ಹಾಸನ.
ಇಲ್ಲಿನ ಜನ, ಸಂಸ್ಕೃತಿಯ ಪರಿಚಯ ಇದೆ. ಜೊತೆಗೆ ಆರ್ಎಸ್ಎಸ್ ಮಾತ್ರವೇ ಅಲ್ಲ. ಎಲ್ಲಾ ವರ್ಗದ ಜನರ ಬೆಂಬಲ ನನಗಿದೆ. ಆ ಬಗ್ಗೆ ಯಾವುದೇ ಅನುಮಾನ ಬೇಡ. ಯಡಿಯೂರಪ್ಪ ಜಿಲ್ಲಾದ್ಯಂತ ಪ್ರಚಾರ ಮಾಡುವುದರಿಂದ ಹೆಚ್ಚಿನ ಬಲ ನನಗೆ ಬರಲಿದೆ. ಗೆಲ್ಲುವುದೇ ನನ್ನ ಗುರಿ. ನನ್ನ ಕನಸು. ರಾಜ್ಯ ಕೋರ್ ಕಮಿಟಿ ನನ್ನ ಹೆಸರನ್ನು ಮಂಗಳವಾರ ಸಂಜೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಬುಧವಾರ ಸಂಜೆ ದೆಹಲಿ ಮುಖಂಡರು ನನ್ನ ಹೆಸರನ್ನು ಪ್ರಕಟಿಸುವರು ಎಂದರು ರೇಖಾ.
ದಯಾಶಂಕರ ಮೈಲಿ