ಅರೇಹಳ್ಳಿ ಗ್ರಾಮದಲ್ಲಿ ನಮೋ ಟೀ ಸ್ಟಾಲ್
ಬೇಲೂರು: ದೇಶದ ಯುವಶಕ್ತಿ ನರೇಂದ್ರ ಮೋದಿ ಪರವಾಗಿದ್ದು, ಇದರೊಂದಿಗೆ ನವ ಮತದಾರರ ಒಲವೂ ಮೋದಿ ಕಡೆಗಿದೆ ಎಂದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಅಮಿತ್ ಶೆಟ್ಟಿ ತಿಳಿಸಿದರು.
ತಾಲೂಕಿನ ಅರೇಹಳ್ಳಿಯಲ್ಲಿ ನರೇಂದ್ರ ಮೋದಿ ಯುವಕ ಬಳಗದಿಂದ ನಮೋ ಟೀ ಸ್ಟಾಲ್ಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯಾವ ನೈತಿಕತೆಯಿದೆ?: ದೇಶದಲ್ಲಿ ಅಭಿವೃದ್ಧಿ ಎಂಬುದು ಕನಸಿನ ಮಾತಾಗಿದ್ದು ಕಾಂಗ್ರೆಸ್ ಪಕ್ಷ ಯಾವ ನೈತಿಕ ನೆಲೆಗಟ್ಟಿನ ಮೇಲೆ ಜನರ ಬಳಿ ಓಟು ಕೇಳುತ್ತಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ತಿರಸ್ಕಾರ: ಉದ್ಯಮಿಗಳಿಗೆ ಅನುಕೂಲವಾಗುವ ನಿರ್ಧಾರಗಳನ್ನು ತಾಳಿ, ರೈತರನ್ನು ನಿರಂತರ ಶೋಷಿಸುತ್ತಿರುವ ಕಾಂಗ್ರೆಸ್ಸನ್ನು ಈ ಬಾರಿ ಜನ ತಿರಸ್ಕಾರ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಾತಿ, ಧರ್ಮ ಒಡೆದರು: ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳು ಸಿಗುತ್ತವೆ ಎಂದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಜಾತಿ- ಧರ್ಮಗಳನ್ನು ಒಡೆದು ಆಳುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಅರೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್ ಶೆಟ್ಟಿ ಮಾತನಾಡಿ, ಗ್ರಾಮ ಪಂಚಾಯ್ತಿಗಳಿಗೆ ವಾಜಪೇಯಿ ಸರ್ಕಾರದ ಆಡಳಿತದಲ್ಲಿ ಸುಭದ್ರ ಆಡಳಿತ ಹಾಗೂ ಅಭಿವೃದ್ಧಿಗೆ ಬುನಾದಿ ಹಾಕಿಕೊಟ್ಟರು. ಆದರೆ, ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಗ್ರಾಮ ಪಂಚಾಯ್ತಿಗಳನ್ನು ಕಡಗಣನೆ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶಕ್ತಿ ಕೇಂದ್ರ ಅಧ್ಯಕ್ಷ ಸೋಮನಾಥ್, ಸೀತಾರಾಮು, ಗೊರವನಹಳ್ಳಿ ಹರೀಶ್, ಬಾಲಸುಬ್ರಹ್ಮಣ್ಯ ಇತರರು ಇದ್ದರು.