ಆರೆಮ್ಮೆಸ್ ಕಚೇರಿ ಪುನರಾರಂಭಕ್ಕೆ ಆಗ್ರಹ
ಅರಸೀಕೆರೆ: ಪಟ್ಟಣದಲ್ಲಿ ರೇಲ್ವೆ ಮೇಲ್ ಸರ್ವೀಸ್ ಅಂಚೆ (ಆರ್.ಎಂ.ಎಸ್) ಕಚೇರಿಯನ್ನು ಪುನರಾರಂಭಿಸಲು ಆಗ್ರಹಿಸಿ ತಾಲೂಕು ಕ.ರ.ವೇ ಸಂಘಟನೆ ಮತ್ತು ನಾಗರಿಕ ಹಿತಾರಕ್ಷಣಾ ಸಮಿತಿ ಕಾರ್ಯಕರ್ತರು ದಕ್ಷಿಣ ವಲಯದ ಅಂಚೆ ಇಲಾಖೆ ಪೋಸ್ಟ್ ಮಾಸ್ಟರ್ ಜನರಲ್ ಇಂದಿರಾ ಅನುರಾಧ ಅವರಿಗೆ ಮನವಿ ಪತ್ರ ಇತ್ತೀಚೆಗೆ ಸಲ್ಲಿಸಿದರು.
ಪಟ್ಟಣದ ಪ್ರಧಾನ ಅಂಚೆ ಕಚೇರಿಯಲ್ಲಿ ಕೋರ್ ಬ್ಯಾಂಕ್ ಸೇವೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರನ್ನು ಭೇಟಿ ಮಾಡಿದ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ನಾಗರಿಕರ ಹಿತರಕ್ಷಣಾ ಸಮಿತಿ ಸದಸ್ಯರು, ಆರ್.ಎಂ.ಎಸ್ ಕಚೇರಿಯು ಅನೇಕ ವರ್ಷಗಳಿಂದ ಪಟ್ಟಣದಲ್ಲಿ ಕಾರ್ಯ ನಿರ್ವಹಿಸಿದ್ದು, ಇದರಿಂದ ಅಂಚೆ ಇಲಾಖೆಗೆ ಹೆಚ್ಚಿನ ಅನುಕೂಲ ಆಗುವ ಜೊತೆಗೆ ಸಾರ್ವಜನಿಕರಿಗೆ ಒಳ್ಳೆಯ ಸೇವೆ ಲಭ್ಯವಾಗುತ್ತಿತ್ತು ಆದ್ದರಿಂದ ಪಟ್ಟಣ ಪ್ರದೇಶದಲ್ಲಿ ಆರ್.ಎಂ.ಎಸ್. ಕಚೇರಿ ಪುನರಾರಂಭಿಸಲು ಮನವಿ ಮಾಡಿದರು.
ಬೇಸರ: ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಆರ್.ಎಂ.ಎಸ್. ಕಚೇರಿ 1929ರಲ್ಲಿ ಪ್ರಾರಂಭಗೊಂಡು ಸುಮಾರು 78 ವರ್ಷಗಳ ಕಾಲ ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ಸಲ್ಲಿಸಿತ್ತು. ಆದರೆ, 2007ರಲ್ಲಿ ಏಕಾಏಕಿಯಾಗಿ ಈ ಕಚೇರಿ ಮುಚ್ಚಲಾಯಿತು. ಇದನ್ನು ವಿರೋಧಿಸಿ, 2007ರಲ್ಲಿ ವಿವಿಧ ಸಂಘಟನೆಗಳು ಸುಮಾರು 6 ದಿನಗಳ ಕಾಲ ಹಗಲು ರಾತ್ರಿ ನಿರಂತರ ಹೋರಾಟ ನಡೆಸಿದ ವೇಳೆಯಲ್ಲಿ ಕಚೇರಿ ವರ್ಗಾವಣೆಯನ್ನು ಕೈಬಿಡುವ ಭರವಸೆಯನ್ನು ಮೇಲಾಧಿಕಾರಿಗಳು ನೀಡಿದ್ದರು. ಆದರೂ, ಕೆಲವೇ ದಿನಗಳಲ್ಲಿ ಕಚೇರಿ ವರ್ಗಾವಣೆಗೊಂಡಿತು ಎಂದು ಬೇಸರ ವ್ಯಕ್ತಪಡಿಸಿದರು.
ಒತ್ತಾಯ: ಆರ್.ಎಂ.ಎಸ್. ಕಚೇರಿ ಸ್ಥಾಪನೆಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳು ಇಲ್ಲಿರುವುದರಿಂದ ಕಚೇರಿಯನ್ನು ಪುನಃ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ತಾಲೂಕು ಕ.ರ.ವೇ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಅರಸೀಕೆರೆ ದೊಡ್ಡ ತಾಲೂಕು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಪ್ರತಿದಿನ 30ಕ್ಕೂ ಹೆಚ್ಚು ರೈಲುಗಾಡಿಗಳು ಸಂಚರಿಸುತ್ತಿದ್ದು, ರೈಲ್ವೆ ನಿಲ್ದಾಣದಲ್ಲಿ ಅಂಚೆ ಇಲಾಖೆಯ ಕಚೇರಿಯಿದ್ದು. ಆರ್.ಎಂ.ಎಸ್. ಬೋಗಿ ಇರುವ ರೈಲುಗಳು ಹಾದು ಹೋಗುತ್ತವೆ. ಅಂಚೆ ವಾಹನ ಕೂಡ ಬೆಂಗಳೂರಿನಿಂದ ಅರಸೀಕೆರೆ ಮಾರ್ಗ ಶಿವಮೊಗ್ಗಕ್ಕೆ ಹೋಗುತ್ತದೆ. ಆದ್ದರಿಂದ ಈ ಹಿಂದೆ ಇದ್ದ ಆರ್.ಎಂ.ಎಸ್. ಕಚೇರಿಯನ್ನು ಪುನಃ ಪಟ್ಟಣದಲ್ಲಿ ಪ್ರಾರಂಭಿಸಬೇಕೆಂದು ವಿನಂತಿಸಿಕೊಂಡರು. ತದನಂತರ ಮನವಿ ಪತ್ರ ನೀಡಿದರು.
ಪುರಸಭೆ ಸದಸ್ಯ ಪಾರ್ಥಸಾರಥಿ, ಕ.ರ.ವೇ. ಕಾರ್ಯದರ್ಶಿ ರವಿಶಂಕರ್, ರಘು, ರಾಘವೇಂದ್ರ, ಮಂಜು ಕಣಕಟ್ಟೆ, ರಾಜು, ಮೊಹಿದ್ದೀನ್ ಹಾಗೂ ಅಂಚೆ ಇಲಾಖೆ ಅಧೀಕ್ಷಕ ಚಂದ್ರಶೇಖರ್, ಸಹಾಯಕ ಅಧೀಕ್ಷಕ ಶಂಕರಪ್ಪ ಇದ್ದರು.