ಗೌಡರಿಂದ ಯಾವ ಅಭಿವೃದ್ಧಿ ಆಗಿದೆ?
ಹಾಸನ: ದೇವೇಗೌಡರು ಹಿರಿಯ ವ್ಯಕ್ತಿಯಾಗಿದ್ದು, ರಾಜ್ಯದ ನಾಯಕರಾಗಿದ್ದವರು. ಆದರೆ, ಅವರು ಪ್ರಧಾನಿ ಆಗಿದ್ದಾಗ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಟೀಕಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯಾದಾಗಲೇ ೇನೂ ಮಾಡಲಾರದ ದೇವೇಗೌಡರು ಈಗ ಪ್ರಧಾನಿಯಾಗಿ ಏನು ಅಭಿವೃದ್ಧಿ ಮಾಡಲು ಸಾದ್ಯ ಎಂದು ಪ್ರಶ್ನಿಸಿದ ಅವರು, ದೇವೇಗೌಡರು ಪ್ರಧಾನಿ ಸ್ಥಾನಕ್ಕಿಂತ ಬೇರೆ ಬೇರೆ ದೊಡ್ಡ ಸ್ಥಾನಕ್ಕೆ ಏರಬೇಕು ಎಂದು ಅವರು ವ್ಯಂಗ್ಯವಾಡಿದರು.
ಸವಾಲು: ಅಲ್ಪಸಂಖ್ಯಾತರನ್ನು, ಹಿಂದುಳಿದವರನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಜೆಡಿಎಸ್ ಹೇಳುತ್ತಿದೆ. ಆದರೆ, ಅವರು ಈ ಜಿಲ್ಲೆನಲ್ಲಿ ಎಷ್ಟು ಜನ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ ಎಂದು ಅವರು ಪ್ರಶ್ನೆ ಹಾಕಿದರು. ಮಂಡ್ಯ, ಮೈಸೂರು ಸೇರಿದಂತೆ ಇತರೆ ಕಡೆಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಉದ್ದೇಶವಿದ್ದರೆ, ಜಮೀರ್ ಅಹಮ್ಮದ್ ಬೆಂಗಳೂರಿನಲ್ಲಿ ನಿಲ್ಲಿಸುವ ಬದಲು ಹಾಸನದಲ್ಲೋ, ಮಂಡ್ಯದಲ್ಲೋ ಟಿಕೆಟ್ ನೀಡಿ ಗೆಲ್ಲಿಸಲಿ ನೋಡೋಣ ಎಂದು ಸವಾಲೆಸೆದರು.
ಒಬ್ಬರಿಂದ ಸಾಧ್ಯವಿಲ್ಲ: ಜೆಡಿಎಸ್ ಪಕ್ಷವನ್ನು ಟೀಕಿಸಿದ ನಂತರ, ಅವರ ಟೀಕಾಸ್ತ್ರ ಬಿಜೆಪಿ ಕಡೆ ವಾಲಿತು. ಕೇವಲ ಒಬ್ಬ ವ್ಯಕ್ತಿಯಿಂದ ದೇಶದ ಸಮಸ್ಯೆಗಳ ನಿವಾರಣೆ ಸಾಧ್ಯವಿಲ್ಲ. ಆದರೆ, ಬಿಜೆಪಿಯಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನೇ ಬಿಂಬಿಸಲಾಗುತ್ತಿದೆ. ಅವರೊಬ್ಬರಿಂದ ದೇಶದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ಕಾರಣವೇನು?: ಮೋದಿ ಅವರು ಗುಜರಾತ್ ಅಭಿವೃದ್ಧಿಪಡಿಸಿದ್ದಾರೆ ಅಂತ ಹೇಳುತ್ತಿದ್ದಾರೆ. ಗುಜರಾತ್ನಲ್ಲಿ ಮೋದಿ ಅವರಿಗೆ ಜನರ ಅಭಿಮಾನ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದ್ದರೂ, ಮೋದಿ ಗುಜರಾತಿನಲ್ಲಿ ಸ್ಪರ್ಧಿಸುವ ಬದಲು ವಾರಣಾಸಿಯಲ್ಲಿ ಸ್ಪರ್ಧಿಸಲು ಕಾರಣವೇನು ಎಂದು ಅವರು ಪ್ರಶ್ನಿಸಿದರು?
ಕಾಂಗ್ರೆಸ್ಗೆ ಮತ ನೀಡಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನಭಾಗ, ಕ್ಷೀರಭಾಗ್ಯದಂತಹ ಯೋಜನೆಗಳನ್ನು ತಂದು ಜನಪರ ಕೆಲಸ ಮಾಡುತ್ತಿದೆ. ಆದ್ದರಿಂದ ಜಿಲ್ಲೆಯ ಜನತೆ ಪಕ್ಷದ ಅಭ್ಯರ್ಥಿ ಎ. ಮಂಜುಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಮುಖಂಡ ಎಚ್.ಕೆ. ಮಹೇಶ್ ಹಾಗೂ ಇತರರು ಇದ್ದರು.
ಪೂಜಾರಿ ಹೇಳಿಕೆಗೆ ಸ್ಪಷ್ಟನೆ
ಎತ್ತಿನಹೊಳೆ ಯೋಜನೆ ಅನುಷ್ಠಾನದ ಕುರಿತಂತೆ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಅವರು ಯೋಜನೆಗೆ ಅನುವು ಮಾಡುವುದಿಲ್ಲ ಎಂದಿದ್ದರೆ, ವೀರಪ್ಪ ಮೊಯ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂಬ ಪರಸ್ಪರ ದ್ವಂದ್ವ ಹೇಳಿಕೆ ನೀಡುವುದರ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಖಾದರ್, ಮೊಯ್ಲಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿ, ಅಲ್ಲಿನ ಜನರ ನೆರವಿಗೆ ನಿಂತಿದ್ದಾರೆ. ಎತ್ತಿನಹೊಳೆ ಯೋಜನೆ ಸದಾನಂದ ಗೌಡ ಸಿಎಂ ಆಗಿದ್ದಾಗಲೇ ಅನುಮೋದನೆ ಆಗಿತ್ತು. ಹೀಗಿರುವಾಗ, ಈ ಯೋಜನೆ ಪ್ರಸ್ತುತವೇ ಅಥವಾ ಅಪ್ರಸ್ತುತವೇ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಾಫರ್ ಷರೀಫ್ ಪಕ್ಷ ಬಿಡಲ್ಲ
ಕಾಂಗ್ರೆಸ್ ಸರ್ವಧರ್ಮವನ್ನು ಪ್ರೀತಿಸುವಂತಹ ಪಕ್ಷವಾಗಿದ್ದು, ಜಾಫರ್ ಷರೀಫ್ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರುವುದಕ್ಕೆ ಅವರಿಗೆ ಸ್ವಲ್ಪ ಬೇಸರಗೊಂಡಿದ್ದಾರೆ. ಆದರೆ ಅವರಿಗೆ ಅದಕ್ಕಿಂತಲೂ ಉನ್ನತ ಸ್ಥಾನ ಪಕ್ಷದಲ್ಲಿ ಸಿಗಲಿದೆ. ಬೇರೆ ಪಕ್ಷಗಳಂತೆ ಕಾಂಗ್ರೆಸ್ ನಾಟಕದ ಪಕ್ಷವಲ್ಲ. ಅವರು ಕಾಂಗ್ರೆಸ್ ಬಿಡುತ್ತೇನೆ ಎಂದು ಹೇಳಿಲ್ಲ. ಆದ್ದರಿಂದ ಅವರು ಪಕ್ಷ ಬಿಡುವುದಿಲ್ಲ ಎಂದು ಖಾದರ್ ಹೇಳಿದರು.