ಪರಿಣಾಮಕಾರಿ ಸೇವೆಗೆ ಸೂಚನೆ
ಹಾಸನ: ಮತದಾರರ ಶಿಕ್ಷಣ ಹಾಗೂ ಸಹಭಾಗಿತ್ವ ಸಮಿತಿ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಸಮಿತಿಗಳ ನೋಡಲ್ ಅಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳಿಗೆ ತಾಲ್ಲೂಕು ಮಟ್ಟದಲ್ಲಿ ಮತದಾರರ ಜಾಗೃತಿ ಚಟುವಟಿಕೆ ಹಮ್ಮಿಕೊಳ್ಳುವ ಕುರಿತಂತೆ ಇತ್ತೀಚೆಗೆ ತರಬೇತಿ ಕಾರ್ಯಾಗಾರ ನಡೆಯಿತು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಉಪೇಂದ್ರ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ತಾಲ್ಲೂಕು ಮಟ್ಟದಲ್ಲಿ ಮತದಾರರಿಗೆ ಅರಿವು ಮೂಡಿಸುವ ನಾನಾ ರೀತಿಯ ಪರಿಣಾಮಕಾರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯು.ಪಿ. ಸಿಂಗ್, ತಾಲ್ಲೂಕು ಮಟ್ಟದ ಸ್ವೀಪ್ಸ್‌ಮಿತಿಗಳು ತಾಲ್ಲೂಕು ಹಂತದಲ್ಲಿ ಸಭೆ ನಡೆಸಿ, ಸ್ಥಳೀಯವಾಗಿಯೇ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ಕಾಲಕಾಲಕ್ಕೆ ವರದಿ ಸಲ್ಲಿಸಬೇಕು ಎಂದರು.
ಮನವಿ ಮಾಡಬೇಕು: ಸೈಕಲ್, ಮೋಟಾರ್ ಬೈಕ್ ಜಾಥಾಗಳು, ಮೆರವಣಿಗೆ ಕಲಾತಂಡಗಳ ಪ್ರದರ್ಶನದ ಜೊತೆಗೆ ಹೊಸ ಸಾಧ್ಯತೆಗಳ ಬಗ್ಗೆ ಅಲೋಚಿಸಿ ಜಿಲ್ಲಾ ಸಮಿತಿಯ ಗಮನಕ್ಕೆ ತಂದು ಕಾರ್ಯ ನಿರ್ವಹಿಸಬೇಕು, ಸ್ಥಳೀಯವಾಗಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ನಾನಾ ಇಲಾಖೆಗಳ ನೆರವು ಪಡೆದು ಎಲ್ಲಾ ಮತದಾರರಿಗೂ ಮತದಾನದ ದಿನಾಂಕ, ಮತದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟು ಚುನಾವಣೆಯಲ್ಲಿ ಸಕ್ರಿಯಾವಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಪ್ರೇರೇಪಿಸಬೇಕು: ಇತ್ತೀಚಿನ ಚುನಾವಣೆಗಳಲ್ಲಿನ ಅಂಕಿ ಅಂಶಗಳನ್ನು ಪರಿಶೀಲಿಸಲಾಗಿ ಅನೇಕ ಕಡೆಗಳಲ್ಲಿ ಸುಶಿಕ್ಷಿತರು ಮತದಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಭಾಗಿಯಾಗಿಲ್ಲ. ಅವರೆಲ್ಲರಿಗೂ ಮತದಾನದ ಮಹತ್ವದ ಬಗ್ಗೆ ಮನಪರಿವರ್ತನೆಯಾಗುವಂತೆ ಅರಿವು ಮೂಡಿಸಬೇಕು ಅವರನ್ನು ಸೇರಿಸಿಕೊಂಡು ಕಾರ್ಯಕ್ರಮ, ಸ್ವರ್ಧೆಗಳನ್ನು ನಡೆಸಬೇಕು. ಯುವ ಮತದಾರರನ್ನು ಪ್ರೇರೇಪಿಸಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ ಮತ್ತು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಎನ್‌ಎಸ್‌ಎಸ್‌ನೋಡಲ್ ಅಧಿಕಾರಿ ಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.