ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾಭಾವ ಮುಖ್ಯ
ಹಾಸನ: ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವ ತರುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಪಾತ್ರ ವಹಿಸುತ್ತದೆ ಎಂದು ಸಿ.ಕೆ.ಎಸ್. ವಿದ್ಯಾ ಸಂಸ್ಥೆ ಕಾರ್ಯದರ್ಶಿ ಕೆ.ಪಿ. ವಿಜಯ ಕುಮಾರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜ್, ಕರ್ನಾಟಕ ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನ, ಎನ್.ಡಿ.ಆರ್.ಕೆ. ರೋವರ್ಸ್ ಘಟಕದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ವಾರ್ಷಿಕ ಶಿಬಿರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆತಂಕ: ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದು ಇಲ್ಲಿಯವರೆಗೂ ಸಮಾಜಮುಖಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ ಎಂದು ವಿಷಾದಿಸಿದರು. ಅನ್ನ ನೀಡುವವರು ಕೃಷಿಕ, ದೇಶ ಕಾಯುವವರು ಸೈನಿಕ, ಶಿಕ್ಷಣ ನೀಡುವವರು ಗುರು ಎಂದ ಅವರು ಈ ಮೂರು ದೇಶದಲ್ಲಿ ಪ್ರಮುಖರು ಆಗಿದ್ದಾರೆ. ವಿಪರ್ಯಾಸ ಎಂದರೆ, ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಕಂಗಲಾಗಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜಕಾರಣಿಗಳು ವಿದೇಶಿ ಬ್ಯಾಂಕ್ಗಳಲ್ಲಿ ಇಟ್ಟಿರುವ ಕೋಟ್ಯಾಂತರ ರು.ಗಳನ್ನು ತಂದರೆ ದೇಶದ ಸಾಲ ಮನ್ನ ಮಾಡಿ, ಬಡವರು ಶ್ರೀಮಂತರಾಗಬಹುದು ಎಂದರು.
ಕಾರ್ಯಕ್ರಮಕ್ಕೂ ಮೊದಲು ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ. ಶಾಮಭಟ್, ರೋವರ್ಸ್ ಲೀಡರ್ ತರಬೇತುದಾರ ಎಂ. ಗಣಪತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಘಟಕ ದೇವರಾಜ್, ಜಿಲ್ಲಾ ತರಬೇತಿ ಆಯುಕ್ತ ಕಾಂಚನ ಮೊಲಾ, ಸ್ಕೌಟ್ ಮಾಸ್ಟರ್ ಆರ್.ಜಿ. ಗಿರೀಶ್ ಹಾಗೂ ಇತರರು ಇದ್ದರು. ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜ್ ಉಪನ್ಯಾಸಕರು ಹಾಗೂ ರೋವರ್ಸ್ ಲೀಡರ್ ಜಯಣ್ಣ ಸ್ವಾಗತಿಸಿದರು.