ಸುದ್ದಿ ಸಂಕ್ಷೇಪ
ನಾಮಪತ್ರ ಸಲ್ಲಿಕೆ ವೇಳೆ ತೊಂದರೆ ಬೇಡ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮಾ.19 ರಿಂದ 26 ರವರೆಗೆ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮೆರವಣಿಗೆಯಿಂದ ಸಾರ್ವಜನಿಕರ ಜನಜೀವನಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕೆಳಕಂಡ ಕಾರ್ಯಕ್ರಮಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಸಿ.ಶಿಖಾ ಆದೇಶಿಸಿದ್ದಾರೆ. ಚುನಾವಣಾ ಪ್ರಚಾರ ಹಾಗೂ ಮೆರವಣಿಗೆಯ ಸಂದರ್ಭದಲ್ಲಿ 150 ಹಾಗೂ ಅದಕ್ಕಿಂತ ಹೆಚ್ಚಿನ ಜನರು ಭಾಗವಹಿಸುವುದು ನಿರ್ಬಂಧಿಸಿದೆ. 10 ಕ್ಕಿಂತ ಹೆಚ್ಚಿನ ವಾಹನಗಳನ್ನು ಸಾಲಾಗಿ ಚಲಿಸುವುದನ್ನು ಹಾಗೂ ಮೋಟಾರು ವಾಹನಗಳಲ್ಲಿ ಸೈಲೆನ್ಸರ್ ತೆಗೆದು ಶಬ್ದ ಮಾಲಿನ್ಯ ಉಂಟು ಮಾಡುವುದು. ರಸ್ತೆಯಲ್ಲಿ ಸಂಚರಿಸುವಾಗ ಮೇಗಾ ಪೋನ್ ಎಲೆಕ್ಟ್ರಾನಿಕ್ ಸಲಕರಣೆಗಳ ಮೂಲಕ ಪ್ರಚಾರ ಮಾಡುವುದನ್ನು ನಿರ್ಬಂಧಿಸಿದೆ. ಪ್ರಚಾರ ಸಂದರ್ಭದಲ್ಲಿ ಮೋಟಾರು ವಾಹನ ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಧ್ವನಿವರ್ಧಕ, ಫ್ಲೆಕ್ಸ್ಬೋರ್ಡ್ ಅಳವಡಿಸುವುದನ್ನು ನಿರ್ಬಂಧಿಸಿದೆ. ತಮಟೆ ಬಾರಿಸುವುದು, ಪಟಾಕಿ ಸಿಡಿಸುವುದನ್ನು ಸಹ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.
ಇಂದಿನಿಂದ ಲೋಡ್ ಶೆಡ್ಡಿಂಗ್
ಯುಪಿಸಿಎಲ್ ಸ್ಥಾವರದ ಮೆಗಾ ವ್ಯಾಟ್ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಮಾ.18 ರಿಂದ 26 ರವರೆಗೆ ಎಲ್ಲಾ ಫೀಡರ್ಗಳ ಮೇಲೆ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯ ವಿದ್ಯಾರ್ಥಿಗಳ ಶ್ರಮದಾನ
ಮೈಸೂರು: ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಆಯೋಜಿಸಿದ್ದ ರಾಷ್ಟ್ರೀಯ ಯುವ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಶಿಬಿರಾರ್ಥಿಗಳು ನಗರದ ಮೃಗಾಲಯದಲ್ಲಿ ಶ್ರಮದಾನ ನಡೆಸಿದರು. ಮಂಗಳವಾರ ಸುಮಾರು ಎಂಟು ರಾಜ್ಯಗಳಿಂದ ಆಗಮಿಸಿದ್ದ ಸುಮಾರು 150 ಮಂದಿ ಯುವ ವೈದ್ಯ ವಿದ್ಯಾರ್ಥಿಗಳು ಮೃಗಾಲಯದಲ್ಲಿ ಶ್ರಮದಾನ ನಡೆಸಿ, ಅಪರೂಪದ ಹಣ್ಣಿನ ಮತ್ತು ಔಷಧೀಯ ಮರ ಜಾತಿಗಳ ಸಸಿಗಳನ್ನು ನೆಟ್ಟರು. ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ರಮಾಕಾಂತ್ ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಸತ್ಯನಾರಾಯಣ ಭಟ್, ಮೃಗಾಲಯದ ಕಾರ್ಯ ನಿರ್ವಹಣಾ ನಿರ್ದೇಶಕ ಬಿ.ಪಿ. ರವಿ ಇದ್ದರು.
ಕಳ್ಳನ ಬಂಧನ: 6 ಬೈಕ್ ವಶ
ಮೈಸೂರು: ನಗರದ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, 1.97 ಲಕ್ಷ ಮೌಲ್ಯದ 6 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ತಾಲೂಕು ಬೆಳವಾಡಿ ಅಮೃತೇಶ್ವರನಗರ ನಿವಾಸಿ ರಾಜಣ್ಣ ಎಂಬವರ ಪುತ್ರ ಹಾಗೂ ಚಾಲಕ ವೃತ್ತಿ ಮಾಡಿಕೊಂಡಿರುವ ಮೋಹನ (39) ಬಂಧಿತ ಆರೋಪಿ. ಈತ ವಾಲ್ಮೀಕಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಈತನನ್ನು ಬಂಧಿಸಲಾಗಿದೆ.