ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಂಗೀ ಕುಸ್ತಿಗೆ ಅಖಾಡ ಸಿದ್ಧ

Mainashree
Updated On : 20 Mar 2014, 12:20 pm

ಹಾಸನ: ಹಾಸನ ಲೋಕಸಭೆ ಕ್ಷೇತ್ರದಲ್ಲಿ ಈಗ ಚುನಾವಣಾ ಅಖಾಡ ಸಿದ್ಧವಾಗಿದೆ. ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳ ಹೆಸರು ಅಧಿಕೃತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ಕಾವು ಏರತೊಡಗಿದೆ.
ಬಾಕಿ ಇದ್ದ ಬಿಜೆಪಿ ಅಭ್ಯರ್ಥಿ ಹೆಸರು ಅಂತಿಮಗೊಂಡಿದೆ. ಆ ಪಕ್ಷದಿಂದ ರೇಖಾ ಹುಲಿಯಪ್ಪ ಗೌಡ ಸ್ಪರ್ಧಿಸುತ್ತಿದ್ದು, ಜೆಡಿಎಸ್ ಅಭ್ಯರ್ಥಿಯಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕಾಂಗ್ರೆಸ್‌ನ ಎ. ಮಂಜು ಅವರನ್ನು ಎದುರಿಸಬೇಕಾಗಿದೆ.  ಈಗಾಗಲೇ ಜಿಲ್ಲೆಯಲ್ಲಿ 2 ನಾಮಪತ್ರಗಳು ಸಲ್ಲಿಕೆಯಾಗಿದೆ. ದಿಢೀರ್ ಬೆಳವಣಿಗೆಯಲ್ಲಿ ಬೆಂಗಳೂರು ನಗರದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಟಿ.ಜೆ. ಅಬ್ರಹಾಂ ಹಾಸನದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
ಅಭ್ಯರ್ಥಿಗಳಿಗೆ ಪ್ರಥಮ: ಕಾಂಗ್ರೆಸ್‌ನ ಮಂಜು ಮತ್ತು ಬಿಜೆಪಿಯ ರೇಖಾ ಹುಲಿಯಪ್ಪಗೌಡರಿಗೆ ಪ್ರಪ್ರಥಮ ಲೋಕಸಭೆ ಚುನಾವಣೆ.  ದೇವೇಗೌಡರಿಗೆ 7ನೇ ಚುನಾವಣೆ. ಗೌಡರು  ತಮ್ಮ ತವರು ಜಿಲ್ಲೆ ಹಾಸನದಿಂದ ಲೋಕಸಭೆ ಸ್ಪರ್ಧಿಸುತ್ತಿರುವುದು ಇದು 5ನೇ ಚುನಾವಣೆ. ಒಂದು ಬಾರಿ (2002 ರಲ್ಲಿ) ಕನಕಪುರ ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದಿದ್ದರು.  ಹಾಸನದಿಂದ 4 ಬಾರಿ ಸಂಸತ್‌ಗೆ ಪ್ರವೇಶ ಮಾಡಿದರೆ, 1991ರಲ್ಲಿ ಹಾಸನದಿಂದ ಸೋಲನ್ನು ಅನುಭವಿಸಿದ್ದರು. ಉಳಿದಂತೆ 1991, 1998, 2004 ಮತ್ತು 2009ರಲ್ಲಿ ಗೆದ್ದಿದ್ದಾರೆ.
ಈಗ 5 ನೇ ಬಾರಿ ಹಾಸನದಿಂದ ಲೋಕಸಭೆಗೆ ಆಯ್ಕೆ ಆಗುತ್ತಾರೆಯೇ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಗೌಡರು ಗೆಲವು ಸಾಧಿಸಿರುವುದು ಮತ್ತು ಸೋತಿರುವುದು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧವೇ ಎಂಬುದು ಗಮನಾರ್ಹ.
ಮಂಜುಗೆ ಪ್ರಥಮ ಪರೀಕ್ಷೆ: ಪ್ರಥಮ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಎ. ಮಂಜು 1989ರಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ 20,167 ಮತಗಳನ್ನು ಪಡೆದು 3 ನೇ ಸ್ಥಾನ ಪಡೆದಿದ್ದರು.
1994ರಲ್ಲಿ ಅದೇ ಕ್ಷೇತ್ರದಿಂದ ಬಿಜೆಪಿ ಯಿಂದ ಸ್ಪರ್ಧಿಸಿ 32,181 ಮತಗಳನ್ನು ಪಡೆದು ಎರಡನೇ ಬಾರಿಗೆ ಸೋಲನ್ನಪ್ದಿದ್ದರು. 1999ರಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ 53,732 ಮತ ಪಡೆದು ಗೆಲ್ಲುವ ಮೂಲಕ ಪ್ರಥಮ ಬಾರಿಗೆ ವಿಧಾನಸಭೆ ಅಂಗಳಕ್ಕೆ ಕಾಲಿಟ್ಟಿದ್ದರು.
2004ರಲ್ಲಿ ಕಾಂಗ್ರೆಸ್ ಸೇರಿ 44, 192 ಮತಗಳನ್ನು ಪಡೆದು ಸೋತಿದ್ದರೇ, 2008ರಲ್ಲಿ ಪುನಃ ಕಾಂಗ್ರೆಸ್ ಅಭ್ಯರ್ಥಿಯಾಗಿ  68, 257 ಮತಗಳನ್ನು ಪಡೆದು ಗೆದ್ದಿದ್ದ ಮಂಜು ಅವರು ಈಗ ಲೋಕಸಭೆಗೆ ಸ್ಪರ್ಧಿಸಿದ್ದಾರೆ.
ರೇಖಾಗೂ ಪ್ರಥಮ: 2004ರಲ್ಲಿ ಬೀರೂರು ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿರುವ ರೇಖಾ ಅವರು ಕಡೂರು ತಾಲೂಕು ಲಕ್ಯಾ ಕ್ಷೇತ್ರದಿಂದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅನುಭವ ಅವರಿಗಿದೆ.
ಮಾಜಿ ಸಿಎಂ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರಾದ ಎಂ.ಎಂ. ಬಿಎಡ್. ಪದವೀಧರೆ ಆಗಿರುವ ರೇಖಾ ಅವರಿಗೂ ಈ ಲೋಕಸಭೆ ಚುನಾವಣೆ ಹೊಸತು.

 ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement