ಡಬಲ್ ಟ್ರ್ಯಾಪ್ ಒನ್ಡೇ
ಸಕಲೇಶಪುರ: ಸುಪ್ರೀಂಕೋರ್ಟ್ನ ಆದೇಶದಂತೆ ಕಾಡಾನೆ ಸೆರೆಗೆ ಮುಂದಾಗಿರುವ ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ಒಂದೇ ದಿನ ಎರಡು ಕಾಡಾನೆ ಸೆರೆ ಹಿಡಿದು ತನ್ನ ಕಾರ್ಯಾಚರಣೆಯಲ್ಲಿ ದೊಡ್ಡ ಯಶಸ್ಸು ಸಾಧಿಸಿದೆ. ತಾಲೂಕಿನ ಹೆತ್ತೂರು ಗ್ರಾಮ ಸಮೀಪದ ಕಾಫಿ ಎಸ್ಟೇಟ್ನಲ್ಲಿ ಬುಧವಾರ ಎರಡು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
ಫೆಬ್ರವರಿಯಿಂದ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ 8 ಕಾಡಾನೆಗಳನ್ನು ಆಲೂರು ಹಾಗೂ ಸಕಲೇಶಪುರ ತಾಲೂಕಿನ ನಾನಾ ಭಾಗಗಳಲ್ಲಿ ಸೆರೆಹಿಡಿಯಲಾಗಿತ್ತು.
ಬುಧವಾರ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆಗೆ ಮೊದಲು ಜಯದೇವ್ ಎಂಬವವರ ಐಗೂರು ಕಾಫಿ ಎಸ್ಟೇಟ್ನಲ್ಲಿ ಸುಮಾರು 20 ಕಾಡಾನೆಗಳ ಗುಂಪು ಬೀಡು ಬಿಟ್ಟಿರುವುದು ಪತ್ತೆಯಾಗಿತ್ತು. ಈ ಗುಂಪಿನಲ್ಲಿದ್ದ ಸುಮಾರು 14 ವರ್ಷದ ಗಂಡಾನೆಯನ್ನು ಗುಂಪಿನಿಂದ ಬೇರ್ಪಡಿಸಿದ ಅರಣ್ಯ ಇಲಾಖೆ ನೌಕರರು, ಮದ್ಯಾಹ್ನ 1.30ರ ಸಮಯದಲ್ಲಿ ಅರವಳಿಕೆ ಮದ್ದು ನೀಡುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಕೆಲವು ಮೀಟರ್ ದೂರ ಓಡಿದ ಕಾಡಾನೆ ನೆಲಕ್ಕುರುಳಿತು. ನಂತರ ಆ ಆನೆಯನ್ನು ಹಗ್ಗದಲ್ಲಿ ಬಂಧಿಸಿ, ನೀರು ಹಾಕುವ ಮೂಲಕ ಎಚ್ಚರಿಸಿ ಸಾಕಾನೆಗಳ ಸಹಾಯದಿಂದ ಐಗೂರು ಗ್ರಾಮದ ಮರವೊಂದಕ್ಕೆ ಕಟ್ಟಿಹಾಕಿದರು.
ಮತ್ತೊಂದು ಆನೆ ಸೆರೆ: ನಂತರ, ಮತ್ತೊಂದು ಕಾಡಾನೆ ಸೆರೆಗೆ ಅರಣ್ಯ ಇಲಾಖೆ ತಂಡ ಸಿದ್ಧತೆ ನಡೆಸಿತ್ತು. ಆ ವೇಳೆಗೆ ಹಾಡ್ಯ ಗ್ರಾಮ ಸಮೀಪದ ಅರಣ್ಯಕ್ಕೆ ತೆರಳಿದ್ದ ಕಾಡಾನೆ ಗುಂಪನ್ನು ಮತ್ತೆ ಪತ್ತೆ ಮಾಡಿ ಗುಂಪಿನಲ್ಲಿದ್ದ ಮತ್ತೊಂದು 14 ವರ್ಷದ ಆನೆಯನ್ನು ಗುಂಪಿನಿಂದ ಬೇರ್ಪಡಿಸಿದರು.
ಸುಮಾರು 4.15ರ ವೇಳೆಗೆ ಈ ಆನೆಗೂ ಅರವಳಿಕೆ ಮದ್ದು ಹಾರಿಸಲಾಯಿತು. ಆದರೆ, ಅರವಳಿಕೆ ಚುಚ್ಚುಮದ್ದು ಚುಚ್ಚಿಕೊಂಡ ನಂತರವೂ ಆನೆ ತುಂಬಾ ದೂರ ಓಡಿ ನಿರ್ಮಾ ಕಾಫಿ ಎಸ್ಟೇಟ್ನಲ್ಲಿ ಪ್ರಜ್ಞಾಹೀನವಾಗಿ ಬಿದ್ದಿತ್ತು.
ಇಲ್ಲಿಗೆ ನೀರು ಹೊತ್ತೊಯ್ದು ಸಿಬ್ಬಂದಿ, ನೀರನ್ನು ಆನೆ ಮೇಲೆ ಸುರಿದು ಹಗ್ಗದಿಂದ ಬಂಧಿಸಿದರು.
ಆದರೆ, ಈ ವೇಳೆಗೆ ಕುತ್ತಿಗೆಗೆ ಕಟ್ಟಿದ ಹಗ್ಗದಿಂದ ತಪ್ಪಿಸಿಕೊಂಡ ಕಾಡಾನೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿತಾದರೂ ಶೀಘ್ರ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳ ಸಹಾಯದಿಂದ ಮತ್ತೆ ಬಂಧಿಸುವಲ್ಲಿ ಯಶಸ್ವಿಯಾದರು.
ಸೆರೆ ಹಿಡಿದಿರುವ ಎರಡೂ ಕಾಡಾನೆಗಳನ್ನು ಐಗೂರು ಗ್ರಾಮದಲ್ಲಿ ಕಟ್ಟಿಹಾಕಲಾಗಿದೆ. ಗುರುವಾರ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರಿವೆ ಆನೆ ಕ್ಯಾಂಪ್ಗೆ ಸಾಗಿಸಲಾಗುವುದು ಎಂದು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.