ಮೊದಲ ದಿನ ಇಬ್ಬರು ಕಣಕ್ಕೆ
ಹಾಸನ: ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬುಧವಾರ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರಿನ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಟಿ.ಜೆ. ಅಬ್ರಹಾಂ ಮತ್ತು ದಂತ ವೈದ್ಯ ಡಾ.ಕೆ. ಭಾನುಪ್ರಕಾಶ್ ನಾಮಪತ್ರ ಸಲ್ಲಿಸಿದವರು.
ಹಠಾತ್ತನೆ ಮಧ್ಯಾಹ್ನ 2.30ರಲ್ಲಿ ಡಿಸಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅಬ್ರಹಾಂ, ಉದ್ಯಮಿ ಅಶೋಕ್ ಖೇಣಿಯವರು ಹಾಸನದಲ್ಲಿ ಸ್ಪರ್ಧಿಸುವ ಸಂಭವವಿದೆ. ಖೇಣಿ ಭಾರತದವರಲ್ಲ. ಹಾಗಾಗಿ ಅವರು ವಿರುದ್ಧ ಸ್ಪರ್ಧಿಸಲು ಹಾಸನದಿಂದ ನಾಮಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು.
ಜನಸೇವೆಗಾಗಿ ನನ್ನನ್ನು ಗೆಲ್ಲಿಸಿ: ಭಾನುಪ್ರಕಾಶ್
ಹಾಸನ: ತಮ್ಮ ಸೇವೆಗಾಗಿ ಕ್ಷೇತ್ರದ ಜನತೆ ಅತ್ಯಧಿಕ ಮತ ನೀಡಿ ಜಯಶೀಲರನ್ನಾಗಿಸಬೇಕು ಎಂದು ಬುಧವಾರ ನಾಮಪತ್ರ ಸಲ್ಲಿಸಿರುವ ಸ್ವತಂತ್ರ ಅಭ್ಯರ್ಥಿ ದಂತ ವೈದ್ಯ ಡಾ.ಕೆ. ಭಾನುಪ್ರಕಾಶ್ ಮನವಿ ಮಾಡಿದ್ದಾರೆ. ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾತನಾಡಿದರು. ತಮ್ಮ ಶಕ್ತಿಯ ಅರಿವು ಜನಸಾಮಾನ್ಯರಿಗೆ ಇನ್ನೂ ತಿಳಿದಿಲ್ಲ ಎಂದು ವಿಷಾದಿಸಿದರು. ಅಲ್ಲದೇ, ತಮ್ಮನ್ನು ಸಂಸದನನ್ನಾಗಿ ಆಯ್ಕೆ ಮಾಡಿದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಸೋಮಶೇಖರ್, ರವಿಕುಮಾರ್, ಪ್ರಭಾವತಿ, ಸೋಮಶೇಖರ್ ಹಾಗೂ ಇತರರು ಇದ್ದರು.
ಮತದಾನ ಜಾಥಾಕ್ಕೆ ಸಿಇಒ ಚಾಲನೆ
ಹಾಸನ: ನಿರ್ಭೀತಿಯಿಂದ ಮತದಾನ ಮಾಡುವ ಜಾಥಕ್ಕೆ ಬುಧವಾರ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಚಾಲನೆ ನೀಡಿದರು.
ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಯಾವುದೇ ಭಯವಿಲ್ಲದೆ ನಿರ್ಭತಿಯಿಂದ ಮತ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಪಿಡಿಒ ಅಧಿಕಾರಿಗಳು ನಡೆಸಿದ ಜಾಥಾಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಪಿ. ಸಿಂಗ್ ಹಸಿರು ಭಾವುಟ ತೋರಿಸುವುದರ ಮೂಲಕ ಚಾಲನೆ ನೀಡಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನದ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.