ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಧವಾ ವಿವಾಹ ಧರ್ಮದ ಭಾಗವಾಗಲಿ

Mainashree
Updated On : 20 Mar 2014, 12:28 pm

ಹಾಸನ: ವಿಧವಾ ವಿವಾಹ ಧರ್ಮದ ಭಾಗವಾಗಬೇಕು ಎಂದು ಕವಯತ್ರಿ ರಾಜೇಶ್ವರಿ ಉಲ್ಲೇನಹಳ್ಳಿ ಆಶಯ ವ್ಯಕ್ತಪಡಿಸಿದ್ದಾರೆ. ವಿಧವಾ ವಿವಾಹ ಧಾರ್ಮಿಕ ಭಾಗವಾದಾಗ ಮಾತ್ರ ಮಹಿಳೆಯರಿಗೆ ಸಮಾನತೆ ದೊರೆತಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನವನಾಥಯಾಗ ಮಂಟಪದಲ್ಲಿ ಇತ್ತೀಚೆಗೆ ನಡೆದ ಗುರು ತೋರಿದ ದಾರಿ, ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದಲ್ಲಿ 'ಧರ್ಮ ಮತ್ತು ಮಹಿಳೆ' ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಮಾತನಾಡಿದರು.
ಹಿಂದೆ, ಹಸೆಮಣೆ ಮೇಲೆ ವರ ಸತ್ತರೂ ವಧು ಜೀವನಪರ್ಯಂತ ವಿಧವೆಯಾಗಿರ ಬೇಕಾದ ಸ್ಥಿತಿ ಹಿಂದೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ವಿಧವಾ ವಿವಾಹಗಳನ್ನು ಧರ್ಮ ಮತ್ತು ಸಮಾಜ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದೆ. ಇದು ನಿಜಕ್ಕೂ ಕ್ರಾಂತಿಕಾರಿ ಬದಲಾವಣೆ. ಆದರೆ, ಇದೆಲ್ಲಾ ಧಾರ್ಮಿಕತೆಯ ಒಂದು ಭಾಗವಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಗೌರವಾದರ ಸಿಗಬೇಕು: ಶರಣ ಚಳವಳಿ ಮಹಿಳೆಯರ ವಾಕ್ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿತು. ಕೈಗಾರೀಕಿಕರಣದ ಫಲವಾಗಿ ಮಹಿಳೆ ಮನೆಯಿಂದ ಹೊರಗೆ ಬಂದು ದುಡಿಯಲು ಅವಕಾಶ ದೊರೆಯಿತು. ಆ ಮೂಲಕ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯ ದಕ್ಕಿತು. ಇಂದು ಪುರುಷರಿಗೆ ಸರಿಸಮನಾಗಿ ಮಹಿಳೆಯರು ಮುಂದುವರಿದಿದ್ದಾರೆ. ಇದೆಲ್ಲವನ್ನೂ ಧರ್ಮ ಸ್ವೀಕರಿಸಿದೆ. ಇದರ ಜೊತೆಗೆ, ಹೆಣ್ಣಿಗೆ ಧರ್ಮದ ರಕ್ಷಣೆ ಸಿಗಬೇಕು. ಧರ್ಮದ ಅಂಧಾನುಕರಣೆ ನಿಂತು, ಹೆಣ್ಣಿಗೆ ಗೌರವಾದರ ಲಭ್ಯವಾಗಬೇಕು ಎಂದು ಅವರು ಹೇಳಿದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ರಾಜಣ್ಣಗೌಡ ಮಾತನಾಡಿ, ಶ್ರೀ ಆದಿಚುಂಚನಗಿರಿ ಮಠವು ಜಾತಿ, ಧರ್ಮ, ಮಹಿಳೆ ಎಂಬ ಭೇದಭಾವ ಮಾಡದೆ ಸರ್ವಜನರ ಸೇವೆಯಲ್ಲಿ ತೊಡಗಿದೆ. ಇಂತಹ ಜೀವನ್ಮುಖಿ ಕಾರ್ಯಗಳಿಂದ ಮಾತ್ರ ಧರ್ಮ ಉಳಿದು, ಬೆಳೆಯಲು ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿಯ ಅಧ್ಯಕ್ಷೆ ಸರೋಜಮ್ಮ ನಂಜುಂಡೇಗೌಡ ಮತ್ತು ಶ್ರೀ ಶಕ್ತಿ ಯೋಗ ಕೇಂದ್ರದ ಮುಖ್ಯಸ್ಥೆ ಮಮತಾ ಮದನ್ ಕುಮಾರ್ ಇದ್ದರು.
ಮೊದಲಿಗೆ ಸುಪ್ರಿಯಾ ಸುರೇಶ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು. ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಠದ ವ್ಯವಸ್ಥಾಪಕ ಎಚ್.ಕೆ. ಚಂದ್ರಶೇಖರ್ ಸ್ವಾಗತಿಸಿದರು. ಶಿಕ್ಷಕ ಟಿ.ಡಿ. ಮಂಜೇಗೌಡ ವಂದಿಸಿದರು.
ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಶ್ರೀ ಶೈಲವಲ್ಲಭ ಭಜನಾ ಮಂಡಳಿ, ಶ್ರೀ ಶುಕ್ತಿ ಯೋಗ ಕೇಂದ್ರ, ಶ್ರೀ ಆದಿಚುಂಚನಗಿರಿ ಮಹಿಳಾ ಸಮಾಜ ಮತ್ತು ಒಕ್ಕಲಿಗರ ಮಹಿಳಾ ಸಂಘದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement