ವೃದ್ಧೆ ಮೇಲೆ ಬೀದಿ ನಾಯಿ ದಾಳಿ
ಆಲೂರು: ಬೀದಿ ನಾಯಿಗಳು ವೃದ್ಧೆ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಹಳೇ ಆಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ಗಾಯಿತ್ರಮ್ಮ (80) ಎಂಬುವರು ಬೆಳಗಿನ ಜಾವ 6 ಗಂಟೆ ಸಮಯದಲ್ಲಿ ಅದೇ ಗ್ರಾಮದಲ್ಲಿರುವ ಜೋಯಿಸರ ಮನೆಗೆಂದು ಹೋಗುತ್ತಿರುವಾಗ ಮೂರ್ನಾಲ್ಕು ನಾಯಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿವೆ. ಆಕೆಯ ಕೂಗು ಕೇಳಿ ಧಾವಿಸಿದ ಗ್ರಾಮಸ್ಥರು ನಾಯಿಗಳನ್ನು ಓಡಿಸಿದ್ದಾರೆ.
ತೀವ್ರವಾಗಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಆಕೆಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇತ್ತೀಚೆಗೆ ಪಟ್ಟಣ ಸೇರಿದಂತೆ ಹಲವೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಂಬಂಧಪಟ್ಟವರು ಗಮನ ಹರಿಸಿ ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.