ಪಕ್ಷದ ನಿರ್ದೇಶನದಂತೆ ಸ್ಪರ್ಧೆಗೆ ಅಣಿಯಾದೆ: ವಿಜಯ್ ಶಂಕರ್
ಸಕಲೇಶಪುರ: ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ನಿರ್ದೇಶನದಂತೆ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ಮಾಜಿ ಲೋಕಸಭಾ ಸದಸ್ಯ ವಿಜಯಶಂಕರ್ ಹೇಳಿದ್ದಾರೆ.
ಗುರುವಾರ ತಾಲೂಕಿನ ಕುಂಬ್ರಹಳ್ಳಿ ಗ್ರಾಮದ ಬಿ.ಬಿ. ಶಿವಪ್ಪನವರ ನಿವಾಸದಲ್ಲಿ ಅವರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹಾಸನ ಲೋಕಸಬಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ಬೀಷ್ಮ ಎಂದೆ ಗುರುತಿಸಿಕೊಂಡಿರುವ ಹಿರಿಯ ಮುಖಂಡ ಬಿ.ಬಿ. ಶಿವಪ್ಪನವರ ಆಶೀರ್ವಾದ ಹಾಗೂ ಬೆಂಬಲ ಪಡೆಯಲು ಆಗಮಿಸಿದ್ದು ಸ್ಥಳೀಯ ನಾಯಕರೊಂದಿಗೆ ನಂತರ ಚರ್ಚೆ ನಡೆಸಿ, ಚುನಾವಣೆ ಎದುರಿಸುವ ಬಗ್ಗೆ ರೂಪರೇಷೆ ಸಿದ್ಧಪಡಿಸಲಾಗುವುದು ಎಂದರು.ಮೈಸೂರು ಲೋಕ ಸಭಾ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ ಬಗ್ಗೆ ಮಾತನಾಡಿ, ನಾಲ್ಕು ಬಾರಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದು, ಎರಡು ಬಾರಿ ಗೆಲುವು ಪಡೆದಿದ್ದೇನೆ. ಕಳೆದ ಬಾರಿ ಕೇವಲ ಕೆಲವೇ ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸ ಬೇಕಾಯಿತು. ಆದರೆ ಈ ಬಾರಿ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದೆ. ಆದರೆ, ಯಾಕೆ ಟಿಕೆಟ್ ನೀಡಲಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬೆಣ್ಣೂರು ರೇಣುಕುಮಾರ್, ತಾಲೂಕು ಅಧ್ಯಕ್ಷ ಕ್ಯಾಮನಹಳ್ಳಿ ರಾಜ್ ಕುಮಾರ್, ಮುಖಂಡರಾದ ನವಿಲೇ ಅಣ್ಣಪ್ಪ , ಕಟ್ಟಾಯ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಸಿಂಹಗೆ ಶುಭ ಹಾರೈಕೆ...
ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಮೈಸೂರು ಲೋಕಸಭಾ ಅಭ್ಯರ್ಥಿಯಾಗಿರುವ ಪ್ರತಾಪ ಸಿಂಹ ಅವರು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದು ಅವರು ಗೆಲ್ಲುವಂತೆ ಹಾರೈಸಿದ್ದೇನೆ ಎಂದು ವಿಜಯ ಶಂಕರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಲ್ಲದೇ, ಸಿಂಹ ಅವರ ಗೆಲವಿಗೆ ಶ್ರಮಿಸುವುದಾಗಿಯೂ ಅವರು ಭರವಸೆ ನೀಡಿದರು.